Advertisement

ರಚನಾತ್ಮಕ ಚರ್ಚೆ ಆಗುತ್ತಿಲ್ಲವೇಕೆ?: ನೋಟು ರದ್ದು

08:47 AM Nov 08, 2017 | |

ಕಪ್ಪುಹಣದ ಮೇಲಣ ಸರ್ಜಿಕಲ್‌ ಸ್ಟೈಕ್‌ ಎಂದು ಬಣ್ಣಿಸಲ್ಪಟ್ಟ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ನಿರ್ಧಾರಕ್ಕೆ ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. 2016ರ ನ.8ರಂದು ರಾತ್ರಿ ಟಿವಿಯಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ ಚಲಾವಣೆಯಲ್ಲಿದ್ದ ಎರಡು ಗರಿಷ್ಠ ಮುಖಬೆಲೆಯ ನೋಟುಗಳನ್ನು ಹಿಂದೆಗೆದುಕೊಳ್ಳುವ ದಿಟ್ಟ ನಿರ್ಧಾರವನ್ನು ಪ್ರಕಟಿಸಿದಾಗ ಇಡೀ ದೇಶ ಒಂದು ಕ್ಷಣ ಆಘಾತಕ್ಕೊಳಗಾಗಿತ್ತು. ಜನರ ಬಳಿಯಿರುವ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮೆ ಮಾಡಲು ಎರಡು ತಿಂಗಳ ಕಾಲಾವಕಾಶವನ್ನು ನೀಡಲಾಯಿತಾದರೂ ಅನಂತರ ಜನರು ದೈನಂದಿನ ವಹಿವಾಟುಗಳಿಗೆ ಕೈಯಲ್ಲಿ ನಗದು ಹಣವಿಲ್ಲದೆ ಪರದಾಡಿದ್ದು ಇನ್ನೊಂದು ಕತೆ.

Advertisement

50 ದಿನದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಮೋದಿ ಹೇಳಿದ್ದರೂ ನೋಟು ನಿಷೇಧದ ಬಿಸಿ ಕಡಿಮೆಯಾಗಲು ಸುಮಾರು ಆರು ತಿಂಗಳುಗಳೇ ಬೇಕಾದವು. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಆರ್ಥಿಕ ಸುಧಾರಣಾ ಕ್ರಮವೆಂದು ದೇಶವಿದೇಶದ ಆರ್ಥಿಕ ತಜ್ಞರಿಂದ ಬಣ್ಣನೆಗೊಳಗಾಗಿದ್ದರೂ ಅಷ್ಟೇ ಪ್ರಮಾಣದ ಟೀಕೆ ಮತ್ತು ನಿಂದನೆಯನ್ನೂ ಸರಕಾರ ಎದುರಿಸಿದೆ. ಅದರಲ್ಲೂ ಆರಂಭದ ಕೆಲ ದಿನ ಏನು ಮಾಡಬೇಕೆಂದೇ ತಿಳಿಯದೆ ವಿಹ್ವಲಗೊಂಡಿದ್ದ ವಿಪಕ್ಷಗಳು ನೋಟು ರದ್ದು ನಿರ್ಧಾರದಿಂದ ಜನಸಾಮಾನ್ಯರಿಗೆ ಅನನುಕೂಲವಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆ ರಂಗಕ್ಕಿಳಿದು ಸರಕಾರವನ್ನು ಎಷ್ಟು ಸಾಧ್ಯವೋ ಅಷ್ಟು ಟೀಕೆ ಮಾಡಿ ಬಸವಳಿದು ಸ್ವಲ್ಪ ಸಮಯ ಸುಮ್ಮನಾಗಿದ್ದವು. ಎಲ್ಲವೂ ಒಂದು ಹಂತಕ್ಕೆ ಬಂತು ಎಂದು ನೆಮ್ಮದಿಯ ಉಸಿರು ಬಿಡುತ್ತಿರುವಾಗಲೇ ಆರ್‌ಬಿಐ ಬಹಿರಂಗಪಡಿಸಿದ ಅಂಕಿಅಂಶ ನೋಟು ರದ್ದು ಕುರಿತು ಇನ್ನೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದೆ.

ರದ್ದಾದ ಶೇ.99ರಷ್ಟು ನೋಟುಗಳು ಮರಳಿ ಬ್ಯಾಂಕ್‌ಗಳಿಗೆ ಬಂದಿದೆ ಎಂದು ಆರ್‌ಬಿಐ ತಿಳಿಸಿದ ಬಳಿಕ ನೋಟು ರದ್ದುಗೊಳಿಸಿದ ನಿಜವಾದ ಉದ್ದೇಶ ಏನು ಎಂಬ ಪ್ರಶ್ನೆ ಉದ್ಭವವಾಗಿದ್ದು, ಇದಕ್ಕೆ ಉತ್ತರಿಸಲು ಸರಕಾರ ತಿಣುಕಾಡುತ್ತಿದೆ. ಪ್ರಸಕ್ತ ಎರಡು ರಾಜ್ಯಗಳಿಗೆ ಚುನಾವಣೆಯೂ ನಡೆಯುತ್ತಿರುವುದರಿಂದ ನೋಟು ರದ್ದು ಕುರಿತಾದ ಚರ್ಚೆಯೂ ಬಿರುಸಾಗಿ ನಡೆಯುತ್ತಿದೆ. ಹೇಗಾದರೂ ಮಾಡಿ ಇದು ಒಂದು ವಿಫ‌ಲ ನಿರ್ಧಾರ ಎಂದು ಸಾಬೀತುಪಡಿಸಲು ವಿಪಕ್ಷಗಳು ತಮ್ಮ ಬುದ್ಧಿವಂತಿಕೆಯನ್ನೆಲ್ಲ ಖರ್ಚು ಮಾಡುತ್ತಿವೆ. ನೋಟು ರದ್ದು ವಾರ್ಷಿಕ ದಿನದಂದು ವಿಪಕ್ಷಗಳು ಕರಾಳ ದಿನವನ್ನೂ,  ಸರಕಾರ ಕಪ್ಪುಹಣ ವಿರೋಧಿ ದಿನವನ್ನೂ ಆಚರಿಸುತ್ತಿದೆ.  ನೋಟು ರದ್ದು ಸಂಘಟಿತ ಕೊಳ್ಳೆ ಎಂಬ ಕಾಂಗ್ರೆಸ್‌ ಟೀಕೆ ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಏಕೆಂದರೆ ಈ ನಿರ್ಧಾರದಿಂದ ಪ್ರಧಾನಿ ಮೋದಿಗಾಗಲಿ ಅಥವಾ ಸರಕಾರದಲ್ಲಿರುವ ಬೇರೆ ಯಾರಿಗೆ ಆಗಲಿ ಲಾಭವಾಗಿಲ್ಲ. ಇದು ಇಡೀ ಆರ್ಥಿಕ ವ್ಯವಸ್ಥೆಯನ್ನು ಸ್ವತ್ಛಗೊಳಿಸಲು ಕೈಗೊಂಡ ಕ್ರಮ. ಇದರ ಸಾಧಕಬಾಧಕಗಳ ಕುರಿತು ರಚನಾತ್ಮಕ ಚರ್ಚೆ ನಡೆಸುವ ಬದಲು ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕಳೆದ ವರ್ಷ ಮಾಡಿದ ಟೀಕೆಯನ್ನೇ ಈ ವರ್ಷವೂ ಗಿಳಿಪಾಠ ಒಪ್ಪಿಸುತ್ತಿರುವುದು ವಿಪಕ್ಷಗಳ ಬೌದ್ಧಿಕ ದಿವಾಳಿತನವನ್ನಷ್ಟೇ ತೋರಿಸುತ್ತದೆ. ಹಾಗೆಂದು ನೋಟುರದ್ದು ಸಂಪೂರ್ಣ ಯಶಸ್ವಿಯಾಗಿದೆ ಎಂದು ಸಮರ್ಥಿಸುವ ಸ್ಥಿತಿಯಲ್ಲಿ ಸರಕಾರವೂ ಇಲ್ಲ. ಕಪ್ಪುಹಣವೆಲ್ಲ 1000 ಮತ್ತು 500 ರೂ. ನೋಟುಗಳ ರೂಪದಲ್ಲಿ ಕಪ್ಪುಕುಳಗಳ ತಿಜೋರಿಯಲ್ಲಿ ಭದ್ರವಾಗಿದೆ ಎಂದು ಭಾವಿಸಿದ್ದೇ ಸರಕಾರದ ಮೊದಲ ತಪ್ಪು.

ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳದೆ ನಿರ್ಧಾರವನ್ನು ಜಾರಿಗೊಳಿಸಿದ ಕಾರಣ ಜನಸಾಮಾನ್ಯರು ಭಾರೀ ಸಮಸ್ಯೆ ಎದುರಿಸಬೇಕಾಯಿತು. ತಿಂಗಳ ವೇತನ ಪಡೆಯುವ ನೌಕರ ವರ್ಗವನ್ನು ಅಷ್ಟಾಗಿ ತಟ್ಟದಿದ್ದರೂ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿ ಸಮುದಾಯವನ್ನು ಬಹಳಷ್ಟು ಬಾಧಿಸಿದೆ. ರಿಯಲ್‌ ಎಸ್ಟೇಟ್‌, ಉತ್ಪಾದನೆ ಮತ್ತಿತರ ಕ್ಷೇತ್ರಗಳು ಇದರ ಹೊಡೆತ, ಅನಂತರ ಜಾರಿಗೊಳಿಸಿದ ಜಿಎಸ್‌ಟಿ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಆರ್ಥಿಕ ಚಟುವಟಿಕೆ ಕುಂಠಿತಗೊಂಡು ನಿರುದ್ಯೋಗ ಹೆಚ್ಚಿ ಜಿಡಿಪಿ ಕುಸಿಯಲು ಈ ಎರಡು ನಿರ್ಧಾರಗಳು ಕಾರಣ ಅಲ್ಲ ಎಂದು ಸರಕಾರ ಎಷ್ಟೇ ಸಮರ್ಥಿಸಿಕೊಂಡರೂ ನಂಬಲು ಸಾಧ್ಯವಾಗುತ್ತಿಲ್ಲ. ಈ ನಿರ್ಧಾರದಿಂದ ಒಂದಿಷ್ಟು ಕೆಡುಕುಗಳೂ ಆಗಿವೆ ಎನ್ನುವುದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಹಾಗೂ ಇದೇ ವೇಳೆ ಆಗಿರುವ ಒಳಿತುಗಳ ಮೂಲಕ ಅರ್ಥವ್ಯವಸ್ಥೆಯನ್ನು ಬುಡದಿಂದಲೇ ಸದೃಢಗೊಳಿಸಲು ತ್ವರಿತ ಕ್ರಮ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next