ಕೆಲ ದಿನಗಳ ಹಿಂದಷ್ಟೇ ರಸ್ತೆ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾಗ ಪುಟ್ಟ ಹಕ್ಕಿಯೊಂದು “ಚಿಂವ್… ಚಿಂವ್’ ಎನ್ನುತ್ತ ಅತ್ತಿಂದಿತ್ತ ಹಾರಾಡುತ್ತಿತ್ತು. ತಲೆ ಎತ್ತಿ ನೋಡುತ್ತೇನೆ, ಅಂಗಡಿಯ ಬಾಗಿಲ ಬದಿಯಲ್ಲಿರುವ ತಂತಿಯಲ್ಲಿ ಒಂದು ಪುಟ್ಟ ಗೂಡು ನೇತಾಡುತ್ತಿತ್ತು. ಆ ಒಂದು ದೃಶ್ಯ ನನ್ನನ್ನು ಹತ್ತು ವರ್ಷ ಹಿಂದಿನ ನನ್ನ ಬಾಲ್ಯದ ದಿನಗಳ ನೆನಪು ಮರುಕಳಿಸುವಂತೆ ಮಾಡಿತ್ತು.
ನಾನಾಗ ಪ್ರೈಮರಿ ಓದುತ್ತಿದ್ದೆ. ಕಣ್ಣು ಹಾಯಿಸಿದಲ್ಲೆಲ್ಲ ಬರಿಯ ಹಸಿರೇ ಕಂಗೊಳಿಸುತ್ತಿತ್ತು, ಆಧುನಿಕತೆಯ ಸೋಂಕಿರಲಿಲ್ಲ. ದಿನ ಬೆಳಗಾದರೆ ಸಾಕು ಅಂಗಳದ ತುಂಬ ತೂಗಾಡುತ್ತಿದ್ದ ಹೂಗಿಡಗಳ ಮೇಲೆ ಹತ್ತಾರು ಜಾತಿಯ, ಬಣ್ಣಬಣ್ಣದ ನೂರಾರು ಹಕ್ಕಿಗಳು ಹಾರಿ ಬರುತ್ತಿದ್ದವು. ಹೂಗಳೊಂದಿಗೆ ಅವುಗಳ ಸರಸ, ಮನೆಯ ಪರಿಸರವೆಲ್ಲ ಶುಕ ಸಂಚಾರ ಇದೆಲ್ಲದನ್ನು ನೋಡಿ ಆನಂದಿಸುವುದೇ ಒಂದು ಹಬ್ಬವಾಗಿತ್ತು. ಗುಬ್ಬಚ್ಚಿ, ಕೆಂಪು ಕೊಕ್ಕಿನ ಗಿಳಿ, ದರಗು ಹಕ್ಕಿ, ಮಿಂಚುಳ್ಳಿ, ಕಾಜಾಣ ನಮ್ಮ ಮನೆಯ ನಿತ್ಯ ಅತಿಥಿಗಳಾಗಿದ್ದವು.
ನಾನು ಮತ್ತು ತಮ್ಮ ಅವುಗಳಿಗೆ ಅಕ್ಕಿ, ಅನ್ನ ಎಸೆಯುತ್ತಿದ್ದೆವು. ಹಕ್ಕಿಗಳು ಯಾವುದೇ ಭಯವಿಲ್ಲ ಆಹಾರವನ್ನು ಹೆಕ್ಕಿ ತಿಂದು ಬಿಸಿಲು ನೆತ್ತಿಗೇರಿದ ಮೇಲೆ ಹಾರಿ ಹೋಗುತ್ತಿದ್ದವು. ಮನೆಯ ಹಂಚಿನ ಬದಿಯಲ್ಲಿ, ಹೂಗಿಡಗಳ ಮರೆಯಲ್ಲಿ ಗೂಡುಕಟ್ಟಿ , ಮೊಟ್ಟೆ ಇಟ್ಟು, ಮರಿ ಮಾಡುತ್ತಿದ್ದವು. ಅಪ್ಪನ ಏಟು, ಬಯುಳದ ನಡುವೆಯೂ ಕೆಲವೊಮ್ಮ ನಾವು ಅವುಗಳನ್ನು ಹಿಡಿಯುತ್ತಿದ್ದೆವು, ಕಲ್ಲೆಸೆಯುತ್ತಿದ್ದೆವು. ಆದರೂ ಹಕ್ಕಿಗಳು ಬರುವುದು, ಹೋಗುವುದು, ಅಂಗಳದಲ್ಲೇ ಗೂಡು ಕಟ್ಟುವುದು ನಮಗೇನು ಅಷ್ಟೊಂದು ವಿಚಿತ್ರ ಎನಿಸುತ್ತಿರಲಿಲ್ಲ.
ಆದರೆ, ಕ್ರಮೇಣ ನಾವು ದೊಡ್ಡವರಾದಂತೆ ಊರು ಬದಲಾಯಿತು. ಮರಗಳುರುಳಿ ಕಟ್ಟಡ, ಟವರ್, ಡಾಂಬಾರು ರಸ್ತೆ, ವಿದ್ಯುತ್ ಕಂಬಗಳು ತಲೆ ಎತ್ತಿದವು. ಅಂಗಳದ ಗಿಡಗಳು ಅಳಿದು ಸಿಮೆಂಟ್ ಹಾಸಿಗೆಯಾಯಿತು. ಬರುಬರುತ್ತಾ ಹಕ್ಕಿಗಳು ಮಾಯವಾದವು. ಎಲ್ಲೋ ಆಗೊಮ್ಮೆ ಈಗೊಮ್ಮೆ ಹಕ್ಕಿಗಳು ಹಾರಾಡುತ್ತಿದ್ದ, ಎಲೆ ಮರೆಯಲ್ಲಿ ಕೂಗಾಡುತ್ತಿದ್ದ ದೃಶ್ಯಗಳಷ್ಟೇ ಕಾಣುತ್ತಿದ್ದವು. ಇದೀಗ ಹಕ್ಕಿಗಳೇ ಇಲ್ಲ ಎಂಬಂತಾಗಿದೆ. ದಿನ ಬೆಳಗಾದರೆ ರಾಶಿ ಬೀಳುತ್ತಿದ್ದ ಪಕ್ಷಿ ಸಂಕುಲದ ಗುರುತೇ ಮಾಯವಾಗಿದೆ.
ಅರೆ ! ಈ ಹಕ್ಕಿಗಳೆಲ್ಲ ಎಲ್ಲಿ ಹೋದವು? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿಲ್ಲ, ಏಕೆಂದರೆ ಹಕ್ಕಿಗಳನ್ನ ಕೊಲ್ಲುವ ಆಯುಧ ನಮ್ಮ ಕೈಯಲ್ಲೇ ಇದೆ. ಮನುಷ್ಯ ಜಾತಿಯ ಆಧುನಿಕತೆಯ ಅಮಲಿಗೆ ಪಕ್ಷಿಸಂಕುಲ ಅಳಿಯುತ್ತಿದೆ. ಪೋಂ… ಪೋಂ.. ಎಂಬ ಸದ್ದುಕೇಳಿ ತಕ್ಷಣ ನೆನಪುಗಳಿಂದ ವಾಸ್ತವ ಜಗತ್ತಿಗೆ ಬಂದು ಕತ್ತು ತಿರುಗಿಸಿದೆ ಬಸ್ಸು ಬಂದಿತ್ತು. ಕಿಟಕಿಯ ಬಳಿ ಕುಳಿತು ದಾರಿಯುದ್ದಕ್ಕೂ ಹಕ್ಕಿಗಳನ್ನು ಹುಡುಕ ತೊಡಗಿದೆ. ಆದರೆ, ಕಣ್ಣಿಗೆ ಕಂಡದ್ದು ಆಧುನಿಕತೆಯ ಪರಮಾವಧಿಗೆ ಸಾಕ್ಷಿಯಾಗಿದ್ದ ನಿರ್ಮಾಣಗಳೇ ಹೊರತು ಬೇರೇನಲ್ಲ.
ನಯನ ಕುಮಾರ್
ತೃತೀಯ ಬಿ. ಎ. (ಪತ್ರಿಕೋದ್ಯಮ)
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು