Advertisement

ನಮ್ಮ ವಾರ್ಡ್‌ಗೇಕಿಲ್ಲ ಲ್ಯಾಪ್‌ಟಾಪ್‌?

04:52 AM Feb 28, 2019 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಿಗೆ ಮಾತ್ರ ಉಚಿತ ಲ್ಯಾಪ್‌ಟಾಪ್‌ ವಿತರಿಸುವ ಮೂಲಕ ಪಾಲಿಕೆ ಆಡಳಿತ ಪಕ್ಷ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಬಿಬಿಎಂಪಿ ವಿಪಕ್ಷ ಸದ ಸ್ಯರು ಕೌನ್ಸಿಲ್‌ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ಕುರಿತು ಮಾತಿನ ಚಕಮಕಿ ನಡೆದು ಪ್ರತಿ ವಾರ್ಡ್‌ಗೂ ಕಡ್ಡಾಯವಾಗಿ ಲ್ಯಾಪ್‌ಟಾಪ್‌ ನೀಡಲೇಬೇಕು ಎಂದು ಆಗ್ರಹಿಸಿದ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

Advertisement

ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಬಡ ವಿದ್ಯಾರ್ಥಿಗಳಿಗೆ ನೀಡಲು ಪ್ರತಿ ವಾರ್ಡ್‌ಗೆ 200 ಲ್ಯಾಪ್‌ ಟಾಪ್‌ ವಿತರಿಸಲಾಗಿದೆ. ಈ ಸೌಲಭ್ಯ ಉಳಿದ ವಾರ್ಡ್‌ಗಳಿಗೇಕಿಲ್ಲ? ನಾವೇನು ಪಾಪ ಮಾಡಿದ್ದೇವೆ? ಎಂದು ಪ್ರಶ್ನಿಸಿದ ಅವರು, ಜನ, ನಮ್ಮ ವಾರ್ಡ್‌ನಲ್ಲಿ ಯಾಕೆ ಲ್ಯಾಪ್‌ಟಾಪ್‌ ಕೊಟ್ಟಿಲ್ಲ ಎಂದು ಕೇಳುತ್ತಿದ್ದಾರೆ. ನೀವು ಮಾಡಿರುವ ತಾರತಮ್ಯದಿಂದ ನಾವು ಜನರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಸೀಮಿತ ವಾರ್ಡ್‌ಗೆ ಮಾತ್ರ ಲ್ಯಾಪ್‌ ಟಾಪ್‌ ನೀಡಲಾಗಿದೆ ಎಂದು ಆರೋಪಿಸಿದರು.

ಅಧಿಕಾರ ದುರ್ಬಳಕೆ: ಪ್ರಸ್ತುತ ವಿತರಿಸಿರುವ ಲ್ಯಾಪ್‌ ಟಾಪ್‌ಗ್ಳ ಖರೀದಿಗೆ ರಾಜ್ಯ ಸರ್ಕಾರ ನೀಡುವ ಎಸ್‌ ಎಫ್‌ಸಿ ಅನುದಾನವನ್ನು ಬಳಕೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ, 2016ರಲ್ಲಿ ಹೊರಡಿಸಿರುವ ಸುತ್ತೋಲೆಯಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೊರತು ಪಡಿಸಿ ಇನ್ಯಾವ ಕಾರ್ಯಗಳಿಗೂ ಈ ಅನುದಾನ ಬಳಸುವಂತಿಲ್ಲ. ಆದರೂ, ಪಾಲಿಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿ 1,200 ಲ್ಯಾಪ್‌ಟಾಪ್‌ ಖರೀದಿಸಿದೆ ಎಂದರು.

ಬಡ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿರುವುದರಿಂದ ನಿಯಮ ತಿದ್ದುಪಡಿ ಮಾಡಿ, ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದಿದ್ದರೆ ಪಾಲಿಕೆಯ ಎಲ್ಲಾ 198 ವಾರ್ಡ್‌ಗಳಿಗೂ ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು. ಇವರ ಮಾತಿಗೆ ವಿಪಕ್ಷದ ಎಲ್ಲಾ ಸದಸ್ಯರು ಧ್ವನಿಗೂಡಿಸಿ “ನಮ್ಮ ವಾರ್ಡ್‌ಗೂ ಲ್ಯಾಪ್‌ಟಾಪ್‌ ಕೊಡಿ’ ಎಂದು ಘೋಷಣೆ ಕೂಗಿದರು.

ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿದ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌, ಮಹಾಲಕ್ಷ್ಮೀ ಲೇಔಟ್‌ನ 7 ವಾರ್ಡ್‌ಗಳಲ್ಲಿ ಹಂಚಿರುವ 1,200 ಲ್ಯಾಪ್‌ಟಾಪ್‌ ಖರೀದಿಗೆ ಕೇವಲ ಎಸ್‌ಎಫ್‌ಸಿ ಅನುದಾನ ಬಳಕೆ ಮಾಡಿಕೊಂಡಿಲ್ಲ. ಮೇಯರ್‌ ಹಾಗೂ ಉಪಮೇಯರ್‌ ಅನುದಾನ ಸೇರಿ ಇತರೆ
ಅನುದಾನಗಳನ್ನು ಬಳಸಲಾಗಿದೆ. ಜತೆಗೆ ಎಸ್‌ಎಫ್ಸಿ ಅನುಧಾನವನ್ನು ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೂ ಬಳಸಿಕೊಳ್ಳಬಹುದು. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೌನ್ಸಿಲ್‌ ಸಭೆಯ ಮುಂದಿಡುತ್ತೇನೆ ಎಂದರು. ಆಯುಕ್ತರ ಉತ್ತರಕ್ಕೆ ಸಮಾಧಾನಗೊಳ್ಳದ ವಿಪಕ್ಷ ನಾಯಕರು, ಅದೇ ಸಾಮಾಜಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಅನುದಾನದಡಿ ಉಳಿದ 191 ವಾರ್ಡ್‌ಗಳಿಗೆ ಕನಿಷ್ಠ 150 ಲ್ಯಾಪ್‌ಟಾಪ್‌ಗ್ಳನ್ನಾದರೂ ವಿತರಿಸಿ ಎಂದು ಪಟ್ಟುಹಿಡಿದರು.

Advertisement

ಈ ವೇಳೆ ವಿಪಕ್ಷ ಸದಸ್ಯರು ಕೌನ್ಸಿಲ್‌ ಬಾವಿಗಿಳಿದು ಆಡಳಿತ ಪಕ್ಷ, ಮೇಯರ್‌ ಹಾಗೂ ಆಯುಕ್ತರಿಗೆ ಧಿಕ್ಕಾರ ಕೂಗಿದರು. ಆಡಳಿತ ಪಕ್ಷದ ನಾಯಕ ವಾಜೀದ್‌, ಗುಣಶೇಖರ್‌, ಶಿವರಾಜ್‌ ಸೇರಿದಂತೆ ಕೆಲ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಬೇಡ, ಮಾತನಾಡಿ ವಿಷಯ ಬಗೆಹರಿಸಿಕೊಳ್ಳೋಣ. ಮುಂದಿನ ಚರ್ಚೆಗೆ ಹೋಗೋಣ ಎಂದರು. ಅವರ ಮಾತನ್ನುಧಿಕ್ಕರಿಸಿ ವಿಪಕ್ಷ ನಾಯಕರು ಘೋಷಣೆ ಮುಂದುವರಿಸಿದರು. ಈ ವೇಳೆ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರಿಗೆ ಲ್ಯಾಪ್‌ಟಾಪ್‌ ಬೇಡವಾದರೆ ಸುಮ್ಮನೆ ಕುಳಿತುಕೊಳ್ಳಿ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಎಂದು ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಹೀಗಾಗಿ, ಮೇಯರ್‌ ಸಭೆಯನ್ನು ಮುಂದೂಡಿದರು.

ಪಾಲಿಕೆಯ ಎಲ್ಲಾ ವಾರ್ಡ್‌ಗಳಿಗೂ ಲ್ಯಾಪ್‌ಟಾಪ್‌ ವಿತರಿಸಿ: ಮುನಿರತ್ನ ಲ್ಯಾಪ್‌ಟಾಪ್‌ ವಿಚಾರದಲ್ಲಿ ವಿಪಕ್ಷದ ಜತೆ ಧ್ವನಿಗೂಡಿಸಿದ ಕಾಂಗ್ರೆಸ್‌ ಶಾಸಕ ಮುನಿರತ್ನ, ಒಂದು ಕ್ಷೇತ್ರದ ಮಕ್ಕಳಿಗೆ ಮಾತ್ರ ಲ್ಯಾಪ್‌ಟಾಪ್‌ ಕೊಟ್ಟರೆ ಹೇಗೆ? ಬಡ ಮಕ್ಕಳ ಯೋಜನೆಯಲ್ಲಿ ತಾರತಮ್ಯ ಮಾಡುವುದೇಕೆ?
ಮಹಾಲಕ್ಷ್ಮೀ ಲೇಔಟ್‌ನಲ್ಲಿ 2.30 ಲಕ್ಷ ಜನರಿದ್ದು, 1200 ಲ್ಯಾಪ್‌ಟಾಪ್‌ ನೀಡಿದ್ದೀರಿ. ಅದೇ ರೀತಿ ನನ್ನ ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ 4.80 ಲಕ್ಷ ಜನರಿದ್ದು, ಕನಿಷ್ಠ 2,400 ಲ್ಯಾಪ್‌ಟಾಪ್‌ ನೀಡುಬೇಕು ಎಂದರು.

ಗದ್ದಲದ ವಾತಾವರಣ ಲ್ಯಾಪ್‌ಟಾಪ್‌ ವಿಚಾರವಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಾಗ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಕೌನ್ಸಿಲ್‌ನ ವಿಷಯಸೂಚಿ ಪ್ರಸ್ತಾಪಿಸಿ ಅನುಮೋದನೆ ಪಡೆಯಲು ಮುಂದಾದರು. ಆಗ ಆಡಳಿತ ಪಕ್ಷದ ಸದಸ್ಯರು,
ವಾಜೀದ್‌ ಕೈಲಿದ್ದ ವಿಷಯ ಸೂಚಿ ಕಾಗದಗಳನ್ನು ಕಿತ್ತೆಸೆಯಲು ಪ್ರಯತ್ನಿಸಿದರು ಈ ವೇಳೆ ಗದ್ದಲ ಉಂಟಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next