Advertisement

Analysis: 5 ಬಾರಿ ಸಿಎಂ ಆಗಿದ್ದರೂ ನಿತೀಶ್ ಕುಮಾರ್ ವಿಧಾನಸಭೆಗೆ ಸ್ಪರ್ಧಿಸಿಲ್ಲ ಯಾಕೆ?

06:32 PM Oct 07, 2020 | Nagendra Trasi |

ಮಣಿಪಾಲ:ಭಾರತದಲ್ಲಿನ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ಯೋಗಿ ಅದಿತ್ಯನಾಥ್, ನಿತೀಶ್ ಕುಮಾರ್ ಮತ್ತು ಉದ್ಧವ್ ಠಾಕ್ರೆ ವಿಚಾರದಲ್ಲಿ ಒಂದು ಸಾಮಾನ್ಯ ಸಂಗತಿ ಅಡಗಿದೆ. ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ವಿಧಾನಪರಿಷತ್ ನ ಸದಸ್ಯರೇ ಹೊರತು, ವಿಧಾನಸಭೆಯ ಸದಸ್ಯರಲ್ಲ!

Advertisement

ಇವರಲ್ಲಿ ಯಾರೊಬ್ಬರೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲ. ನಿತೀಶ್ ಕುಮಾರ್ ಸುಮಾರು 35 ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು, ಆ ನಂತರ ಅವರು ಯಾವತ್ತೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ ಪುರ್ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಜಯ ಸಾಧಿಸಿದ್ದರು. 1998ರಲ್ಲಿ ಪ್ರಥಮ ಬಾರಿಗೆ ಲೋಕಸಭೆಗೆ ಆಯ್ಕೆಯಾದಾಗ ಯೋಗಿ ವಯಸ್ಸು ಕೇವಲ 26ವರ್ಷ! ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ಇಲ್ಲ. ಯೋಗಿ ಆದಿತ್ಯನಾಥ್ ಕೂಡಾ ಯಾವತ್ತೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ.

ಏತನ್ಮಧ್ಯೆ ನಿತೀಶ್ ಕುಮಾರ್ 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸುವ ಸಿದ್ಧತೆಯಲ್ಲಿದ್ದಾರೆ. ಆದರೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಐದು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2000, 2005, 2010 ಹಾಗೂ 2015ರಲ್ಲಿ ಎರಡು ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಇದನ್ನೂ ಓದಿ:ಸುಶಾಂತ್ ಸಿಂಗ್ ರಜಪೂತ್ ಕೇಸ್: ರಿಯಾ ಚಕ್ರವರ್ತಿಗೆ ಅ.20ರವರೆಗೆ ಜೈಲೇ ಗತಿ!

Advertisement

1985ರಲ್ಲಿ ನಿತೀಶ್ ಕುಮಾರ್ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಇದಕ್ಕೂ ಮೊದಲು 1977ರಲ್ಲಿ ಹರ್ನೌತ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ನಿತೀಶ್ ಪರಾಜಯಗೊಂಡಿದ್ದರು. ನಂತರ ನಿತೀಶ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. 1989ರಿಂದ 2004ರವರೆಗೆ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 2004ರಲ್ಲಿ ನಲಂದಾ ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ್ದು, ಬಾರ್ಹ ಕ್ಷೇತ್ರದಲ್ಲಿ ಸೋತಿದ್ದರು. ನಂತರ 2005ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

2005ರಿಂದ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ರಾಜಕೀಯ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ನಿತೀಶ್ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜಿತನ್ ರಾಮ್ ಮಾಂಜಿಯನ್ನು ಬಿಹಾರ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಮಾಂಜಿ ಬಿಜೆಪಿ ಜತೆ ಕೈಜೋಡಿಸಿದ್ದರು. ಹೀಗೆ 2015ರ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ನಿತೀಶ್ ಕುಮಾರ್ ಮತ್ತೆ ಸಿಎಂ ಆಗಿ ನೇಮಕವಾಗಿದ್ದರು. ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಜತೆಗಿನ ಮೈತ್ರಿಯಿಂದ ನಿತೀಶ್ ಪೂರ್ಣ ಪ್ರಮಾಣದ ಬಹುಮತ ಪಡೆದಿದ್ದರು. 2017ರಲ್ಲಿ ನಿತೀಶ್ ಮತ್ತೆ ಎನ್ ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ:ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಾಜಲ್ ಅಗರ್ವಾಲ್!  ಮದುವೆಗೆ ಡೇಟ್ ಫಿಕ್ಸ್

ನಿತೀಶ್ ಕುಮಾರ್ ಅವರು ಯಾವಾಗ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೋ ಆಗ ಅವರು ಬಿಹಾರ ವಿಧಾನಸಭೆಯ ಸದಸ್ಯರಾಗಿಲ್ಲ. ಮುಖ್ಯಮಂತ್ರಿಯಾಗಲಿ ಅಥವಾ ಸಚಿವರಾಗಲಿ ಆರು ತಿಂಗಳೊಳಗೆ ವಿಧಾನಸಭೆ ಅಥವಾ ಪರಿಷತ್ ನ ಸದಸ್ಯರಾಗಬೇಕು ಎಂಬುದು ಕಾನೂನು. ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಆರು ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ಗಳಿವೆ.

ಮೇಲ್ಮನೆ ಗೌರವಾನ್ವಿತ ಸದನವಾಗಿದೆ. ಹೀಗಾಗಿ ನಾನು ಎಂಎಲ್ ಸಿ ಆಗುವುದು ನನ್ನ ಆಯ್ಕೆಯಾಗಿದೆಯೇ ವಿನಃ ಇದರಲ್ಲಿ ಬೇರೆ ಯಾವುದೇ ಪ್ರೇರಣೆ ಇಲ್ಲ ಎಂಬುದಾಗಿ ನಿತೀಶ್ ಅವರು 2012ರಲ್ಲಿ ನಡೆದ ಶಾಸಕಾಂಗ ಮಂಡಳಿಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದರು.

2015ರ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ತಾನು ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ತಾನು ಕೇವಲ ಒಂದು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲ್ಲ ಎಂದು ತಿಳಿಸಿದ್ದರು. 2018ರಲ್ಲಿ ನಿತೀಶ್ ಕುಮಾರ್ ಮೂರನೇ ಬಾರಿಗೆ ಎಂಎಲ್ ಸಿ ಆಗಿ ನೇಮಕವಾಗಿದ್ದರು. ಇವರ ಅವಧಿ 2024ಕ್ಕೆ ಮುಕ್ತಾಯವಾಗಲಿದೆ. 74 ವರ್ಷದ ನಿತೀಶ್ ಬಹುತೇಕ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ಸಾಧ್ಯತೆ ಇದ್ದಿರುವುದಾಗಿ ರಾಜಕೀಯ ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

(ಮಾಹಿತಿ ಇಂಡಿಯಾ ಟುಡೇ ಹಾಗೂ ಇತರ ಮೂಲಗಳಿಂದ)

Advertisement

Udayavani is now on Telegram. Click here to join our channel and stay updated with the latest news.

Next