ಕೋಲ್ಕತ್ತಾ: ಹಾಲಿ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವು ಈ ಬಾರಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಕೈಬಿಡಲು ನಿರ್ಧರಿಸಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ರಿಟೆನ್ಶನ್ ಪಟ್ಟಿಯಲ್ಲಿ ಅಯ್ಯರ್ ಅವರ ಹೆಸರಿಲ್ಲ. ಈ ಮೂಲಕ ಟೈಟಲ್ ವಿನ್ನಿಂಗ್ ನಾಯಕ ಈ ಬಾರಿ ಮೆಗಾ ಹರಾಜಿಗೆ ಬರುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಿಇಒ ವೆಂಕಿ ಮೈಸೂರು ಅವರು ಮೆಗಾ ಹರಾಜಿನ ಮೊದಲು ಐಪಿಎಲ್ 2024-ವಿಜೇತ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳದ ಹಿಂದಿನ ಚಿಂತನೆಯ ಪ್ರಕ್ರಿಯೆಯನ್ನು ಬಹಿರಂಗಪಡಿಸಿದ್ದಾರೆ.
ತಂಡದಲ್ಲಿ ಮುಂದುವರಿಯದೆ ಇರುವುದು ಶ್ರೇಯಸ್ ಅಯ್ಯರ್ ಅವರ ನಿರ್ಧಾರವೇ ಹೊರತು ಕೆಕೆಆರ್ ಫ್ರಾಂಚೈಸಿಯದ್ದಲ್ಲ ಎಂದು ವೆಂಕಿ ಮೈಸೂರು ಅವರು ಹೇಳಿದರು. ಹರಾಜಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯವನ್ನು ಪರೀಕ್ಷಿಸಲು ಶ್ರೇಯಸ್ ಬಯಸಿದ್ದರು ಎಂದು ಅವರು ಪರೋಕ್ಷವಾಗಿ ಹೇಳಿದರು.
“ಅವರು ನಮ್ಮ ರಿಟೆನ್ಶನ್ ಪಟ್ಟಿಯಲ್ಲಿ ನಂಬರ್ 1 ಆಗಿದ್ದರು. ಅವರು ನಾಯಕರಾಗಿದ್ದರು, ನಾವು ಅವರ ನಾಯಕತ್ವದ ಸುತ್ತಲೂ ತಂಡವನ್ನು ನಿರ್ಮಿಸಬೇಕಿತ್ತು. ಈ ನಿರ್ದಿಷ್ಟ ಕಾರಣಕ್ಕಾಗಿ ನಾವು 2022 ರಲ್ಲಿ ಅವರನ್ನು ಆಯ್ಕೆ ಮಾಡಿದ್ದೇವೆ” ಎಂದು ರೆವ್‌ಸ್ಪೋರ್ಟ್ಜ್ ನೊಂದಿಗೆ ಮಾತನಾಡುತ್ತಾ ವೆಂಕಿ ಮೈಸೂರು ಹೇಳಿದರು.
“ರಿಟೆನ್ಶನ್ ನ ಮೂಲಭೂತ ವಿಷಯವೆಂದರೆ ಅದು ಪರಸ್ಪರ ಒಪ್ಪಿಕೊಳ್ಳುವ ವಿಷಯವಾಗಿದೆ. ಇದು ಫ್ರಾಂಚೈಸ್ ಹೊಂದಿರುವ ಏಕಪಕ್ಷೀಯ ಹಕ್ಕಲ್ಲ, ಆಟಗಾರನು ವಿವಿಧ ಅಂಶಗಳನ್ನು ಪರಿಗಣಿಸಬೇಕು ಮತ್ತು ಒಪ್ಪಿಕೊಳ್ಳಬೇಕು” ಎಂದು ಅವರು ಹೇಳಿದರು.
“ಆ ಒಪ್ಪಂದವು ಹಣದಂತಹ ಅಂಶಗಳಿಂದ ಕಾರ್ಯಗತವಾಗದಿದ್ದರೆ ಅಥವಾ ಯಾರಾದರೂ ತಮ್ಮ ಮೌಲ್ಯವನ್ನು ಪರೀಕ್ಷಿಸಲು ಬಯಸಿದರೆ, ಅದು ನಿರ್ಧಾರಕ್ಕೆ ಪ್ರಭಾವ ಬೀರುತ್ತದೆ” ಎಂದು ವೆಂಕಿ ಮೈಸೂರು ಹೇಳಿದರು.