ರಾಜನ ಆಸ್ಥಾನದಲ್ಲಿ ನ್ಯಾಯ ತೀರ್ಮಾನ ನಡೆದಿತ್ತು. ಆನಂದಪ್ಪ ತನಗೆ ಅನ್ಯಾಯವಾಗಿದೆ ಎಂದು ದೂರು ನೀಡಿದ್ದ. ಆನಂದಪ್ಪ ಕುರಿಗಳನ್ನು ಸಾಕಿಕೊಂಡಿದ್ದ. ಅದರ ಜೊತೆಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರುತ್ತಿದ್ದ. ನಿನಗಾದ ಅನ್ಯಾಯವೇನು? ಎಂದು ರಾಜ ಕೇಳಿದ. ಆನಂದಪ್ಪ “ಪ್ರಭು, ನನ್ನ ಪಕ್ಕದ ಮನೆಯಲ್ಲಿರುವ ಜಿಪುಣ ಮನುಷ್ಯ ಅವನ ಮನೆಯ ಗೋಡೆಯನ್ನು ರಿಪೇರಿ ಮಾಡಿಸಿರಲಿಲ್ಲ. ನಿನ್ನೆ ಆ ಗೋಡೆ ಕುಸಿದು ಬಿದ್ದು ಅದರಡಿ ಸಿಲುಕಿ ನನ್ನ ಮುದ್ದು ಕುರಿ ಅಸುನೀಗಿದೆ. ಅದು ಬೆಲೆಬಾಳುವ ಕುರಿಯಾಗಿತ್ತು. ನನಗೆ ಅದರ ಹಣವನ್ನು ಕೊಡಿಸಬೇಕು’. ರಾಜ, ಮಂತ್ರಿಯನ್ನು ನೋಡಿದ. ಮಂತ್ರಿ “ಈ ಪ್ರಕರಣವನ್ನು ನಾಳೆಗೆ ಮುಂದೂಡೋಣ. ನನಗೆ ದಣಿವಾಗಿದೆ’ ಎಂದ.
ಮಂತ್ರಿಗೆ ಸ್ವಲ್ಪ ಕಾಲಾವಕಾಶ ಬೇಕಿತ್ತು. ಹೀಗಾಗಿ ರಾಜನಲ್ಲಿ ದಣಿವಾಗಿದೆ ಎಂದು ಸುಳ್ಳು ಹೇಳಿದ್ದ. ಮಂತ್ರಿ ಆ ಆನಂದಪ್ಪನ ಹಿನ್ನೆಲೆಯನ್ನು ತಿಳಿದುಕೊಂಡನು. ಅವನು ಅನೇಕ ಮೋಸ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಿಳಿದು ಬಂತು. ಆದರೆ ಒಂದು ಸಲವೂ ಶಿಕ್ಷೆಯಾಗಿರಲಿಲ್ಲ. ಆ ಕುರಿಗಾಹಿ ತುಂಬಾ ಬುದ್ಧಿವಂತನಾಗಿದ್ದ. ವಾದ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಕಾನೂನನ್ನು ಬಳಸಿಕೊಂಡೇ ತನಗೆ ಅನುಕೂಲವಾಗುವ ಹಾಗೆ ವಾದ ಮಂಡಿಸುತ್ತಿದ್ದ. ಹೀಗಾಗಿಯೇ ಒಂದು ಸಲವೂ ಸಿಕ್ಕಿಬಿದ್ದಿರಲಿಲ್ಲ. ಅವನ ಕುರಿ ಸತ್ತಿದ್ದು ಗೋಡೆ ಬಿದ್ದು ಅಲ್ಲ, ರೋಗದಿಂದ ಎಂಬ ಸತ್ಯವೂ ಅಕ್ಕಪಕ್ಕದವರಿಂದ ಮಂತ್ರಿಗೆ ತಿಳಿಯಿತು.
ಮಾರನೇ ದಿನ ವಿಚಾರಣೆ ಶುರುವಾಯಿತು. ಮಂತ್ರಿ ಕುರಿಗಾಹಿಯ ಪಕ್ಕದಮನೆಯವನನ್ನು ಹಣ ನೀಡಲು ಆಜ್ಞಾಪಿಸಿದ. ಅವನು ಗೋಗರೆಯುತ್ತಾ “ಸ್ವಾಮಿ ಗೋಡೆ ಬಿದ್ದಿದ್ದಕ್ಕೆ ಕಾರಣ ನಾನಲ್ಲ, ಗಾರೆಯವನು’ ಎಂದ. ಗಾರೆಯವನನ್ನು ಕರೆಸಲಾಯಿತು. ಅವನು “ಸ್ವಾಮಿ ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಸಿಮೆಂಟ್ ಕಲಸುವವನು ಸರಿಯಾಗಿ ಮಿಶ್ರಣ ಮಾಡಿಲ್ಲ’. ಸಿಮೆಂಟ್ ಕಲಸಿದವನನ್ನು ಕರೆಸಲಾಯಿತು. ಅವನು “ತಪ್ಪೆಲ್ಲಾ ಸಿಮೆಂಟಿನದ್ದು. ಅದು ಕಲಬೆರಕೆಯ ಸಿಮೆಂಟಾಗಿರಬಹುದು’ ಎಂದನು.
ಸಿಮೆಂಟ್ ತಂದವನನ್ನು ಕೇಳಿದಾಗ ಅವನು ಅದನ್ನು ತಂದಿದ್ದು ಆನಂದಪ್ಪನ ಅಂಗಡಿಯಿಂದಲೇ ಎಂದುಬಿಟ್ಟ. ಅಲ್ಲಿಗೆ ಆನಂದಪ್ಪನ ಕುತಂತ್ರ ಅವನಿಗೇ ತಿರುಗುಬಾಣವಾಗಿತ್ತು. ಕಳಪೆ ಗುಣಮಟ್ಟದ ಸಿಮೆಂಟ್ ಮಾರಿದ್ದಕ್ಕೆ ಆನಂದಪ್ಪನೇ ಪರಿಹಾರ ನೀಡಬೇಕು ಎಂದು ಆಜ್ಞಾಪಿಸಿದ. ಸಭಾಸದರು, ಪ್ರಜೆಗಳೆಲ್ಲರೂ ಚಪ್ಪಾಳೆ ತಟ್ಟಿದರು. ಮಂತ್ರಿಯ ಬುದ್ದಿವಂತಿಕೆಗೆ ಎಲ್ಲರೂ ತಲೆದೂಗಿದರು.
ಕೆ. ಶ್ರೀನಿವಾಸರಾವ್