ಬೆಂಗಳೂರು: ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಗಾಯಗೊಂಡವರಿಗೆ ಪರಿಹಾರ ನೀಡುವ ಕುರಿತ ನ್ಯಾಯಾಲಯದ ಆದೇಶ ಪಾಲನೆ ಮಾಡದ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ ವಿವರಣೆ ನೀಡುವಂತೆ ಆದೇಶಿಸಿದೆ.
ಈ ಕುರಿತಂತೆ ಕೋರಮಂಗಲದ ನಿವಾಸಿ ವಿಜಯನ್ ಮೆನನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಗಾಯಗೊಂಡವರಿಗೆ ಪರಿಹಾರ ನೀಡುವ ಕುರಿತಂತೆ “ಕರ್ನಾಟಕ ಪೌರಾಡಳಿತ ಕಾಯ್ದೆ’ಯಲ್ಲಿ ಯಾವುದೇ ಸ್ಪಷ್ಟ ವಿವರಣೆ ಇಲ್ಲ. ಈ ವಿಚಾರವಾಗಿ ಪಾಲಿಕೆ ಇನ್ನೂ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕಿದೆ. ಇದಕ್ಕಾಗಿ ತಜ್ಞರ ಅಭಿಪ್ರಾಯದ ನಿರೀಕ್ಷೆಯಲ್ಲಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.
ಅಪಘಾತಗಳು ರಸ್ತೆ ಗುಂಡಿಗಳಿಂದಲೇ ಆಗಿವೆ ಎಂಬ ಬಗ್ಗೆ ನಿರ್ದಿಷ್ಟ ಸಾಕ್ಷ್ಯಾಗಳಿರಬೇಕು ಮತ್ತು ಇಂತಹ ಅರ್ಜಿಗಳನ್ನು ಸ್ವೀಕರಿಸುವ ಹಾಗೂ ವಿಲೇವಾರಿ ಮಾಡುವ ಬಗ್ಗೆ ಸ್ಪಷ್ಟ ಕಾನೂನುಗಳಿಲ್ಲ. ಆದಾಗ್ಯೂ, ನ್ಯಾಯಪೀಠದ ಆದೇಶದ ಅನುಸಾರ ಶೇ.100ರಷ್ಟು ಗುಂಡಿ ಮುಕ್ತ ಮಾಡಲು ಪಾಲಿಕೆ ಶ್ರಮ ವಹಿಸುತ್ತದೆ. ಆದ್ದರಿಂದ ಅಪಘಾತ ಪರಿಹಾರ ನೀಡಿಕೆ ಕುರಿತಂತೆ ಜಾಹೀರಾತು ಮೂಲಕ ಸಾರ್ವಜನಿಕರಿಗೆ ಪ್ರಚಾರ ನೀಡಬೇಕೆಂಬ ಆದೇಶ ವಾಪಸ್ ಪಡೆಯಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಕುರಿತಂತೆ ಈ ಹಿಂದೆ ನೀಡಿರುವ ಆದೇಶಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಬಿಬಿಎಂಪಿ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
1,337 ರಸ್ತೆ ಗುಂಡಿ ಬಾಕಿ: ರಸ್ತೆ ಗುಂಡಿ ಭರ್ತಿ ಮಾಡಲು ಪಾಲಿಕೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಆಗಾಗ ಮಳೆ ಬಿದ್ದಿದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ 2019ರ ಅ.1ರಿಂದ ನ.8ರವರೆಗೆ ಇದ್ದ ವಸ್ತುಸ್ಥಿತಿ ವರದಿಯಂತೆ 10,656 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 9,319 ಭರ್ತಿ ಮಾಡಲಾಗಿದೆ.
ಇನ್ನೂ 1,337 ಗುಂಡಿಗಳು ಬಾಕಿ ಇವೆ. ನವೆಂಬರ್ ಅಂತ್ಯಕ್ಕೆ ಎಲ್ಲ ರಸ್ತೆ ಗುಂಡಿ ಮುಕ್ತ ಮಾಡಲಾಗುವುದು. ಗುಂಡಿ ಭರ್ತಿ ಮಾಡಲು ಬಳಸುವ “ಹಾಟ್ ಮಿಕ್ಸ್’ (ಜಲ್ಲಿ ಕಲ್ಲು ಮತ್ತು ಟಾರು ಮಿಶ್ರಣ) ಘಟಕವನ್ನು ಬಿಬಿಎಂಪಿ ವತಿಯಿಂದಲೇ ಸ್ಥಾಪಿಸಲಾಗಿದೆ. ಡಿಸೆಂಬರ್ ನಂತರ ಈ ಘಟಕ ಕಾರ್ಯಾರಂಭಿಸಲಿದೆ ಎಂದು ಬಿಬಿಎಂಪಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.