ಜಗತ್ತಿನ ನಕ್ಷೆಯಲ್ಲಿ ಪುಟ್ಟ ರಾಷ್ಟ್ರವಾಗಿರುವ ಪಪುವಾ ನ್ಯೂಗಿನಿ ಕೆಲವು ದಿನಗಳಿಂದ ದೊಡ್ಡ ದೇಶಗಳಲ್ಲಿಯೂ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಈ ದೇಶದ ಮೇಲೆ ಚೀನ ಹೊಂದುತ್ತಿರುವ ಪ್ರಭಾವ. ಈ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ ದೇಶಗಳು ಈಗ ಅದರತ್ತ ದೃಷ್ಟಿ ನೆಟ್ಟಿವೆ. ಕ್ವಾಡ್ ಶೃಂಗ ನಡೆದಿದ್ದರೆ ಬೇರೆ ಬೇರೆ ದೇಶಗಳು ಅಲ್ಲಿನ ಬೆಳವಣಿಗೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿತ್ತು. ಅಮೆರಿಕದ ಅಧ್ಯಕ್ಷರಿಗೆ ಬರಲಿಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಶೃಂಗ ರದ್ದುಗೊಂಡಿದೆ. ಈ ದ್ವೀಪ ರಾಷ್ಟ್ರದಲ್ಲಿ ಶೇ. 80ಕ್ಕೂ ಅಧಿಕ ಮಂದಿ ಬಡತನ ರೇಖೆಯ ಆಸುಪಾಸಿನಲ್ಲಿದ್ದಾರೆ. ಇಲ್ಲಿ ನೈಸರ್ಗಿಕ ಸಂಪನ್ಮೂಲಗಳು ಅಧಿಕವಾಗಿದೆ. ಚೀನದ ಪ್ರಭಾವದಿಂದ ವಿಚಲಿತ ಗೊಂಡಿರುವ ಕ್ವಾಡ್ ರಾಷ್ಟ್ರಗಳು, ಈ ದೇಶದ ಜತೆ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿವೆ. ಶೃಂಗ ರದ್ದಾಗಿದ್ದರೂ ಭಾರತದ ಪ್ರಧಾನಿ ತನ್ನ ಕಾರ್ಯಸೂಚಿಯಂತೆ ಈ ದೇಶಕ್ಕೆ ಭೇಟಿ ನೀಡಿದ್ದಾರೆ. ಭಾರತವು ದ್ವೀಪ ರಾಷ್ಟ್ರಗಳ “ವಿಶ್ವಾಸಾರ್ಹ ಪಾಲುದಾರ” ಎಂದು ಹೇಳಿರುವ ಮೋದಿ ಅಲ್ಲಿನ ರಾಷ್ಟ್ರಗಳಿಗೆ ವಿವಿಧ ಸೇವೆಗಳನ್ನು ಘೋಷಿಸಿದ್ದಾರೆ.
ಭಾರತ ಮತ್ತು ಪಪುವಾ ನ್ಯೂಗಿನಿ
ಭಾರತವು 27 ಎಪ್ರಿಲ್ 1996ರಲ್ಲಿ ಪಪುವಾ ನ್ಯೂಗಿನಿಯಲ್ಲಿ ಆಯೋಗವನ್ನು ಆರಂಭಿಸಿತು. ಇದಾದ ಹತ್ತು ವರ್ಷಗಳ ಬಳಿಕ 2006ರಲ್ಲಿ ಭಾರತದಲ್ಲಿ ನ್ಯೂಗಿನಿಯ ರಾಯಭಾರ ಕಚೇರಿ ತೆರೆಯಲಾಯಿತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಪುವಾ ನ್ಯೂಗಿನಿಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿಯಾಗಿದ್ದರು. 2006ರಲ್ಲಿ ಪ್ರಣಬ್ ಮುಖರ್ಜಿ ಭೇಟಿ ನೀಡಿದ್ದರು.
ಭೇಟಿ ಯಾಕೆ ಪ್ರಮುಖ ?
ಪ್ರಧಾನಿ ಮೋದಿ ಸಹಿತ ಪೆಸಿಫಿಕ್‌ನ 14 ದ್ವೀಪ ರಾಷ್ಟ್ರಗಳ ನಾಯಕರು ಫಿಪಿಕ್ ಶೃಂಗದಲ್ಲಿ ಭಾಗವಹಿಸಿದ್ದಾರೆ. ಭಾರತದೊಂದಿಗೆ ಕ್ವಾಡ್ ರಾಷ್ಟ್ರಗಳಾದ ಆಸ್ಟ್ರೇಲಿಯ, ಜಪಾನ್ ಹಾಗೂ ಅಮೆರಿಕಕ್ಕೂ ಈ ಭೇಟಿ ಬಹಳ ಪ್ರಮುಖವಾಗಿದೆ. ಇದಕ್ಕೆ ಕಾರಣ ಚೀನ.
ಆರ್ಥಿಕವಾಗಿ 1980ರಿಂದ ದ್ವೀಪದೊಂದಿಗೆ ಹೊಂದಿಕೊಂಡಿರುವ ಚೀನ ತನ್ನ ಆಕ್ರಮಣಕಾರಿ ವರ್ತನೆಯಿಂದ ಈ ದ್ವೀಪ ರಾಷ್ಟ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದೆ. ಚೀನ ತನ್ನ “ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್” ಅಡಿಯಲ್ಲಿ ಇಲ್ಲಿ ಹೂಡಿಕೆ ಮಾಡಿದೆ. ಚೀನದ ಬೆಳೆಯುತ್ತಿರುವ ಈ ಪ್ರಭಾವ ಭದ್ರ ತೆಯ ದೃಷ್ಟಿಯಿಂದ ದ್ವೀಪ ರಾಷ್ಟ್ರಗಳಿಗೆ ಅಪಾಯಕಾರಿಯಾಗಬಹುದು ಎಂದು ಊಹಿಸಲಾಗಿದೆ. ಅದಲ್ಲದೇ ಇಲ್ಲಿ ಯಥೇಚ್ಚವಾಗಿರುವ ಚಿನ್ನ ಹಾಗೂ ತಾಮ್ರದ ಸಂಪನ್ಮೂಲಗಳ ಮೇಲೂ ಚೀನ ಕಣ್ಣಿರಿಸಿದೆ.
Related Articles
ಕ್ವಾಡ್ ರಾಷ್ಟ್ರಗಳಲ್ಲಿ ಒಂದಾದ ಆಸ್ಟ್ರೇಲಿಯದ ಸಮೀಪದಲ್ಲಿರುವ ಪಪುವಾ ನ್ಯೂಗಿನಿಯ ಮೇಲೆ ಚೀನದ ಪ್ರಭಾವ ಬಿಗಿಯಾದರೆ ಆಸ್ಟ್ರೇಲಿಯದೊಂದಿಗೆ ಕ್ವಾಡ್ ರಾಷ್ಟ್ರಗಳಿಗೆ ಇದು ಅಪಾಯಕಾರಿಯಾಗಲಿದೆ. ಪಪುವಾ ನ್ಯೂಗಿನಿಯ ಮೇಲೆ ಕ್ವಾಡ್ ರಾಷ್ಟ್ರಗಳು ಮೊದಲಿನಿಂದಲೂ ಅಷ್ಟು ಗಮನ ಹರಿಸದೇ ಇರುವುದು ಚೀನ ಪ್ರಭಾವ ಬೆಳೆಯಲು ಕಾರಣ ಎನ್ನಲಾಗಿದೆ. ಪಪುವಾ ನ್ಯೂಗಿನಿಯಲ್ಲಿ ಚೀನದ ಪ್ರಭಾವವನ್ನು ಕಡಿಮೆ ಮಾಡಲು ಇದೀಗ ಕ್ವಾಡ್ ರಾಷ್ಟ್ರ ಗಳು ಸಂಬಂಧವನ್ನು ಗಟ್ಟಿಕೊಳಿಸಿಗೊಳ್ಳಲು ಪ್ರಯತ್ನಿಸುತ್ತಿದ್ದು, ಈ ಭೇಟಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.
ದ್ವೀಪ ರಾಷ್ಟ್ರ ಗಳಿಗೆ ಮೋದಿ ಘೋಷಿಸಿರುವ ಪ್ರಮುಖ ಯೋಜನೆಗಳು
ರಿಜಿನಲ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ವಿವಿಧ ಆರೋಗ್ಯ ಸೇವೆ
ಸೈಬರ್ ಟ್ರೈನಿಂಗ್ ಹಬ್
1 ಸಾವಿರ ಸಾಗರ ಅಮೃತ ಸ್ಕಾಲರ್‌ಶಿಪ್
ಸರಕಾರಿ ಕಚೇರಿಗಳಿಗೆ ಸೋಲಾರ್ ಪ್ರೊಜೆಕ್ಟ್ರ್
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಸಮುದ್ರ ಆ್ಯಂಬುಲೆನ್ಸ್
ಜನ ಔಷಧ ಕೇಂದ್ರ
ಯೋಗ ಕೇಂದ್ರ