Advertisement

ಚುನಾವಣೆಗೆ 2 ದಿನ ಇದ್ದಂತೆ ಬಿಜೆಪಿ ಆಭ್ಯರ್ಥಿ ತಟಸ್ಥವಾಗಿದ್ದೇಕೆ?

02:06 PM May 20, 2018 | Team Udayavani |

ತಿ.ನರಸೀಪುರ: ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿ ಅಭ್ಯರ್ಥಿ ಎಸ್‌.ಶಂಕರ್‌ ಚುನಾವಣೆಗೆ 2 ದಿನ ಬಾಕಿ ಇರುವಂತೆ ತಟಸ್ಥವಾಗಿದ್ದು ಏಕೆ ಎಂಬ ವಿಷಯ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಫ‌ಲಿತಾಂಶ ಪ್ರಕಟಗೊಂಡು ಜೆಡಿಎಸ್‌ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿ, ಪ್ರತಿಸ್ಪರ್ಧಿಯಾಗಿದ್ದ ಮಹದೇವಪ್ಪಗೆ ಬಾರಿ ಮುಖಭಂಗವೂ ಆಗಿದೆ. ಆದರೆ, ಬಿಜೆಪಿ ಅಭ್ಯರ್ಥಿ ಎಸ್‌.ಶಂಕರ್‌ ಚುನಾವಣೆ ಎರಡು ದಿನ ಎಂಬಂತೆ ತಟಸ್ಥರಾಗಿ ಉಳಿದುಕೊಂಡಿದ್ದೇಕೆ ಎಂಬ ಪ್ರಶ್ನೆ ಆ ಪಕ್ಷದ ಕಾರ್ಯಕರ್ತರು, ಮತದಾರರನ್ನು ಕಾಡುತ್ತಿದೆ.

ಮೂಲತಃ ಕಾಂಗ್ರೆಸ್‌ ನಾಯಕರಾಗಿದ್ದ ಎಸ್‌.ಶಂಕರ್‌, ಪಕ್ಷದಲ್ಲಿ ಸೂಕ್ತ ಸ್ಥಾನ ಸಿಗದೇ ಜೆಡಿಎಸ್‌ ಸೇರಿದ್ದರು. ಅಲ್ಲಿಯೂ ಎಚ್‌.ಡಿ.ಕುಮಾರಸ್ವಾಮಿ ಮನ್ನಣೆ ನೀಡದ ಕಾರಣ, ಬೇಸತ್ತು ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಟಿಕೆಟ್‌ ಪಡೆದರು.

ನಂತರದಲ್ಲಿ ಮಾಜಿ ಶಾಸಕಿ ಸುನೀತಾವೀರಪ್ಪಗೌಡ, ಚಿಕ್ಕಮಾದನಾಯ್ಕ ಅವರನ್ನು ಪಕ್ಷಕ್ಕೆ ಕರೆತಂದು ಭರ್ಜರಿ ಪ್ರಚಾರ ನಡೆಸಿದ್ದರು. ಇವರ ವೇಗ ಗಮನಿಸಿದ ವೀರಶೈವ ಲಿಂಗಾಯತರು ಮಹದೇವಪ್ಪಸೋಲಿಸಲು ಈತನೇ ಸರಿಯಾದ ವ್ಯಕ್ತಿ ಎಂಬ ತೀರ್ಮಾನಕ್ಕೆ ಬಂದಿದ್ದರು.

ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್‌ ತಪ್ಪುತ್ತಿದಂತೆ ಆಕ್ರೋಶಗೊಂಡ ವೀರಶೈವ ಲಿಂಗಾಯತರು ಜೆಡಿಎಸ್‌ ಅಭ್ಯರ್ಥಿ ಎಂ.ಅಶ್ವಿ‌ನ್‌ಕುಮಾರ್‌ ಬೆಂಬಲಕ್ಕೆ ನಿಂತರು. ಲಿಂಗಾಯತ ಸಮುದಾಯದ ನಿರ್ಧಾರದಿಂದ ಗೆದ್ದೇ ಗೆಲ್ಲುತ್ತೇನೆಂಬ ಹಂಬಲ ಹೊಂದಿದ್ದ ಬಿಜೆಪಿ ಅಭ್ಯರ್ಥಿಗೆ ನಿರಾಶೆಯುಂಟಾಯಿತು.

Advertisement

ಚುನಾವಣೆ ಮೂರು ದಿನ ಬಾಕಿ ಎಂಬಂತೆ ಪ್ರಚಾರ ಕೈಗೊಳ್ಳುತ್ತಿದ್ದ ಎಸ್‌.ಶಂಕರ್‌, ಕೊನೆಯ ಎರಡು ದಿನ ಕಾರ್ಯಕರ್ತರ ಕೈಗೂ ಸಿಗದೇ ನಾಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಶಂಕರ್‌ ಈ ನಡೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಟೀಕೆಗೂ ಗುರಿಯಾಗಿದೆ.

ಈ ನಡುವೆ ಅಮಿಷಕ್ಕೆ ಒಳಗಾಗಿ ಎಸ್‌.ಶಂಕರ್‌ ಪರೋಕ್ಷವಾಗಿ ಮಹದೇವಪ್ಪಗೆ ಅನುಕೂಲ ಮಾಡಿಕೊಡಲು ಚುನಾವಣಾ ಕಣದಿಂದ ಸರಿದರೆಂಬ ಆರೋಪ ಕೂಡ ಕೇಳಿಬಂದಿದೆ. ಇದಕ್ಕೆ ಉತ್ತರ ನೀಡಲು ಎಸ್‌.ಶಂಕರ್‌ ಮುಂದಾಗಲಿಲ್ಲ. ಪರಿಣಾಮ ಇದನ್ನೇ ನಂಬಿದ ಕಾರ್ಯಕರ್ತರು ಶಂಕರ್‌ ಅವರನ್ನು ಶಪಿಸುತ್ತಿದ್ದು, ಈಗಲೂ ಶಂಕರ್‌ ನಡೆಗೆ ಕಾರಣ ಸಿಕ್ಕಿಲ್ಲ. ಇವರ ಈ ನಡೆ ಜೆಡಿಎಸ್‌ ಅಭ್ಯರ್ಥಿಗೆ ವರದಾನವಾಗಿರುವುದಂತೂ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next