ಅಹ್ಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟ ಗೊಂಡ ಬೆನ್ನಲ್ಲೇ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಅಹ್ಮದಾಬಾದ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ, ಹಾಗೆಯೇ ದೇಶದ ಬಹುತೇಕ ಕ್ರಿಕೆಟ್ ಕೇಂದ್ರ ಗಳನ್ನು ನಿರ್ಲಕ್ಷಿಸಲಾಗಿದೆ, ರಾಜಕೀಯ ಹಿತಾಸಕ್ತಿಯೇ ಇಲ್ಲಿ ಮುಖ್ಯವಾದಂತಿದೆ ಎಂಬ ಆರೋಪ ಕೇಳಿಬಂದಿದೆ.
ಅವಕಾಶ ವಂಚಿತ ಪ್ರಮುಖ ಕೇಂದ್ರಗಳೆಂದರೆ ಮೊಹಾಲಿ, ನಾಗ್ಪುರ, ಇಂದೋರ್, ರಾಜ್‌ಕೋಟ್, ರಾಂಚಿ ಮತ್ತು ತಿರುವನಂತಪುರ. ಭಾರತ ಆಯೋಜಿಸಿದ ಹಿಂದಿನೆರಡು ವಿಶ್ವಕಪ್ ಪಂದ್ಯಾವಳಿಯ ವೇಳೆ ಮೊಹಾಲಿಗೆ ಮನ್ನಣೆ ನೀಡಲಾಗಿತ್ತು. ಇಲ್ಲಿ ಭಾರತ-ಪಾಕಿಸ್ಥಾನ ಪಂದ್ಯ ವನ್ನೂ ಆಯೋಜಿಸಲಾಗಿತ್ತು. ಈ ಬಾರಿ ಮೊಹಾಲಿ ಯನ್ನು ಮೂಲೆಗುಂಪು ಮಾಡಲಾಗಿದೆ. ಕೇರಳದ ತಿರುವನಂತಪುರ ಕೂಡ ಭಾರೀ ನಿರೀಕ್ಷೆಯಲ್ಲಿತ್ತು. ಅದಕ್ಕೆ ನಿರಾಸೆಯೇ ಗತಿಯಾಗಿದೆ. ಧರ್ಮ ಶಾಲಾದಲ್ಲಿ 5 ಪಂದ್ಯಗಳನ್ನು ಆಡಿಸುವ ಬದಲು ಕೆಲವನ್ನು ಬೇರೆ ನಗರಗಳಿಗೆ ಹಂಚಿಕೊಡಬಹುದಿತ್ತು ಎಂಬುದು ಕೆಲವು ಕ್ರಿಕೆಟ್ ಮಂಡಳಿಗಳ ವಾದ.
“1987ರಲ್ಲಿ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ಪಂದ್ಯವನ್ನು ಇಂದೋರ್ ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಈ ಬಾರಿ ನಿರ್ಲಕ್ಷಿಸಲಾಗಿದೆ. ಇಂದೋರ್ ಅಮೋಘ ಕ್ರಿಕೆಟ್ ಇತಿಹಾಸವನ್ನು ಹೊಂದಿರುವ ನಗರ’ ಎಂದಿದ್ದಾರೆ ಮಧ್ಯಪ್ರದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಭಿಲಾಷ್ ಖಾಂಡೇಕರ್.
1996ರಿಂದಲೂ ವಿಶ್ವಕಪ್ ಆತಿಥ್ಯ ಪಡೆಯುತ್ತ ಬಂದ ಮೊಹಾಲಿಯನ್ನು ಕಡೆಗಣಿಸಿದ್ದಕ್ಕೆ ಪಂಜಾಬ್ ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯದ ಆಟ ಎಂದು ಕಿಡಿಕಾರಿದ್ದಾರೆ.
“ಭಾರತದಲ್ಲೇ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಂ ಹೊಂದಿರುವ, ದಕ್ಷಿಣದ ಸ್ಪೋರ್ಟ್ಸ್ ಹಬ್ ಆಗಿರುವ ತಿರುವನಂತಪುರಕ್ಕೆ ವಿಶ್ವಕಪ್ ಪಂದ್ಯದ ಆತಿಥ್ಯ ಲಭಿಸದಿದ್ದುದಕ್ಕೆ ತೀವ್ರ ನಿರಾಸೆಯಾಗಿದೆ’ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.