Advertisement

ತಪ್ಪು ಮಾಡದಿದ್ರೆ “ಇ.ಡಿ’ಗೆ ಡಿಕೆಶಿ ಹೆದರುವುದೇಕೆ?

11:38 PM Aug 31, 2019 | Lakshmi GovindaRaj |

ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದೆಹಲಿಯ ಮನೆಯಲ್ಲಿ 8.59 ಕೋಟಿ ರೂ. ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಇ.ಡಿ ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿರುವ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಕ್ಕೆ ಪ್ರಕರಣ ವೇದಿಕೆ ಕಲ್ಪಿಸಿದೆ. ಬಿಜೆಪಿ ನಾಯಕರು ಇಡಿ ಕ್ರಮವನ್ನು ಸಮರ್ಥಿಸಿಕೊಂಡರೆ, ಕಾಂಗ್ರೆಸ್‌ನ ಧುರೀಣರು ಇದೊಂದು ರಾಜಕೀಯ ಸೇಡಿನ ಕ್ರಮ ಎಂದು ಟೀಕಿಸಿದ್ದಾರೆ.

Advertisement

ಡಿಕೆಶಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ
ಮಂಡ್ಯ: ಬೇನಾಮಿ ಹಣ ಮತ್ತು ಆಸ್ತಿ ದಾಖಲೆಗಳ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರು ವಿಚಾರ ವನ್ನು ರಾಜಕೀಯಕರಣಗೊಳಿ ಸುವ ಅಗತ್ಯವಿಲ್ಲ. ಕಾನೂನು ಅದರ ದಾರಿಯನ್ನು ಅದೇ ತೆಗೆದುಕೊಳ್ಳುತ್ತದೆ. ಈ ಪ್ರಕರಣ ಇವತ್ತು ನಿನ್ನೆಯದಲ್ಲ.

ಅಕ್ರಮವಾಗಿ ಹಣ, ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದೇಶದಲ್ಲಿ ಯಾರು ಅಕ್ರಮವಾಗಿ ಹಣ ಮಾಡಿದ್ದಾರೋ ಅವರೆಲ್ಲರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳುತ್ತೆ. ಡಿಕೆಶಿ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಕೋರ್ಟ್‌ ಅವರ ಅರ್ಜಿ ವಜಾ ಮಾಡಿದ ಹಿನ್ನೆಲೆಯಲ್ಲಿ ಇಡಿ ಮುಂದೆ ಹಾಜರಾಗಿದ್ದಾರೆ. ಯಾರೇ ಆಗಲಿ ಕಾನೂನಿಗೆ ತಲೆಬಾಗಲೇಬೇಕು ಎಂದು ಹೇಳಿದರು.

ಡಿಕೆಶಿ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸ್ತಾರೆ: ಕಾರಜೋಳ
ಬಾಗಲಕೋಟೆ: ದೇಶದ 130 ಕೋಟಿ ಜನರಿಗೂ ಕಾನೂನು ಒಂದೇ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸ ಲೇಬೇಕು. ಐಟಿ ಮತ್ತು ಇಡಿ ಇಲಾಖೆಗಳು ಈ ದೇಶದ ಸ್ವಾಯತ್ತ ಸಂಸ್ಥೆಗಳು. ತಮ್ಮ ಕೆಲಸ ಮಾಡುತ್ತವೆ. ಇದರಲ್ಲಿ ದ್ವೇಷದ ರಾಜಕಾರಣ ಬರಲ್ಲ ಎಂದು ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ದೇಶ ಹಾಗೂ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಇನ್ನಾದರೂ ಇದನ್ನು ಅರಿತು ಮಾತನಾಡಬೇಕು ಎಂದರು.

ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ ಮೇಲಿನ ಇಡಿ ತನಿಖೆ ಕಾನೂನು ಪ್ರಕ್ರಿಯೆ. ಅವರು ತಪ್ಪು ಮಾಡದಿದ್ದರೆ ಏನೂ ಆಗಲ್ಲ. ತಪ್ಪು ಮಾಡದೇ ಇರುವವರನ್ನು ಜೈಲಿಗೆ ಹಾಕಲ್ಲ. ತಪ್ಪು ಕಂಡಾಗ ಮಾತ್ರ ಈ ಪ್ರಶ್ನೆ ಬರುತ್ತದೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಹಾಗೂ ಕಾಂಗ್ರೆಸ್‌ನವರ ಆರೋಪ ಸತ್ಯಕ್ಕೆ ದೂರ. 70 ವರ್ಷಗಳಲ್ಲಿ ಯಾರ, ಯಾರ ಮೇಲೆ ತನಿಖೆ ಆಗಿವೆ, ಯಾರ ಮೇಲೆ ಪ್ರಕರಣ ದಾಖಲಾಗಿದೆ. ಯಾರು ಜೈಲಿಗೆ ಹೋಗಿ ಬಂದಿದ್ದಾರೆ.

Advertisement

ಅದನ್ನೆಲ್ಲ ಕಾಂಗ್ರೆಸ್‌ನವರು ಮಾಡಿದ್ದಾರೆಂದು ನಾವು ಹೇಳಬೇಕಾ ಎಂದು ಪ್ರಶ್ನಿಸಿದ ಅವರು, ಹತಾಶೆಯ ಭಾವದಿಂದ ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರೆ ಎಂದು ಟೀಕಿಸಿದರು. ಗುಜರಾತ್‌ನ ಕಾಂಗ್ರೆಸ್‌ ಶಾಸಕರನ್ನು ರಕ್ಷಣೆ ಮಾಡಿದ್ದಕ್ಕೆ ನನ್ನನ್ನು ಗುರಿ ಮಾಡಲಾಗಿದೆ ಎಂಬ ಶಿವಕುಮಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ವಾರಸುದಾರರು ಇರಲಿಲ್ಲವೇ? ಅವರಿಗೆ ಬಂಧು-ಬಳಗ ಇರಲಿಲ್ಲವೇ? ಅವರನ್ನೇಕೆ ಇವರು ರಕ್ಷಿಸಿದರು. ತಪ್ಪು ಮಾಡಿದವರು, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.

ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ
ಬೆಳಗಾವಿ: ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸೇರಿ ಕೇಂದ್ರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿರೋಧ ಪಕ್ಷಗಳ ಮೇಲೆ ಇವುಗಳನ್ನು ದಾಳವಾಗಿ ಪ್ರಯೋಗಿಸಲಾಗುತ್ತಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಡಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ನೂರಕ್ಕೆ ನೂರರಷ್ಟು ಇಡಿ ಹಾಗೂ ಐಟಿಗಳ ದುರ್ಬಳಕೆಯಾಗುತ್ತಿವೆ. ಅದು ನಿಲ್ಲಬೇಕು. ಪ್ರಬಲರ ಮೇಲೆ ಇವುಗಳನ್ನು ಪ್ರಯೋಗಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.

“ಡಿ.ಕೆ.ಶಿವಕುಮಾರ್‌ ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ’
ಕೊಪ್ಪಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ. ವಿನಾಕಾರಣ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದರು. ಮುನಿರಾಬಾದ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಮುಖಂಡರು ಈ ಹಿಂದೆ ನಮ್ಮ ಪಕ್ಷಕ್ಕೆ ಬಾ, ಇಲ್ಲವೆಂದರೆ ಬಿಡಲ್ಲ ಎಂದು ಒತ್ತಡ ಹೇರಿದ್ದರು. ಆದರೆ ಡಿಕೆಶಿ ಇದಕ್ಕೆ ಬಗ್ಗಿಲ್ಲ. ಹೀಗಾಗಿ, ಬಿಜೆಪಿ ಅವರ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ.

ಡಿಕೆಶಿ ಅವರು ಇವತ್ತು ಆಸ್ತಿ ಸಂಪಾದನೆ ಮಾಡಿಲ್ಲ. ಈ ಹಿಂದಿನಿಂದಲೂ ಅವರ ಆಸ್ತಿ ಇದೆ ಎಂದರು. ಮೋದಿ ಸರ್ಕಾರ ಅಧಿ ಕಾರಕ್ಕೆ ಬಂದ ಬಳಿಕ ಯಡಿಯೂರಪ್ಪ , ಅಮಿತ್‌ ಶಾ ಅವರ ಮೇಲಿನ ಪ್ರಕರಣಗಳು ಕ್ಲೋಸ್‌ ಆಗುತ್ತಿವೆ. ಆದರೆ, ಕಾಂಗ್ರೆಸ್‌ ನಾಯಕರ ಮೇಲೆ ಕೇಸ್‌ಗಳನ್ನು ಹೆಚ್ಚು ಮಾಡಲಾಗುತ್ತಿದೆ. ಬಿಜೆಪಿಯವರು ಮಾತ್ರ ಸತ್ಯ ಹರಿಶ್ಚಂದ್ರರು, ಉಳಿದವರೆಲ್ಲ ಕೆಟ್ಟವರು ಎನ್ನುವ ರೀತಿ ಬಿಂಬಿಸುತ್ತಿದ್ದಾರೆ. ಡಿಕೆಶಿ ಜತೆ ಕಾಂಗ್ರೆಸ್‌ ಇದೆ ಎಂದರು.

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು. ಡಿ.ಕೆ.ಶಿವಕುಮಾರ್‌ ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆಯಾಗುತ್ತದೆ. ಈ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಸರಿಯಲ್ಲ. ಹಿಂದೆ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದಾಗ ಬಿಜೆಪಿ ಅದನ್ನು ವಿರೋಧಿ ಸಲಿಲ್ಲ.
-ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ

ರಾಜಕೀಯ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಲಾಗುತ್ತಿದೆ. ಶಿವಕುಮಾರ್‌ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಆದರೆ ರಾಜಕೀಯ ದ್ವೇಷದಿಂದ ಈ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ಧ ಕಾನೂನು ಮೂಲಕವೇ ಹೋರಾಟ ಮಾಡಲಾಗುವುದು.
-ಸಿದ್ದರಾಮಯ್ಯ, ಮಾಜಿ ಸಿಎಂ

ಡಿಕೆಶಿಗೆ ಇ.ಡಿ ನೋಟಿಸ್‌ ನೀಡಿದ ನಂತರ ಅವರು ಕೋರ್ಟ್‌ಗೆ ಹೋದರು. ಕೋರ್ಟ್‌ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಭಾವ ಬೀರುತ್ತವೆ ಎಂಬ ಅಂಶವನ್ನು ಕಾಂಗ್ರೆಸ್‌ನವರು ಒಪ್ಪುತ್ತಾರೆಯೇ. ಒಂದು ವೇಳೆ ಇಡಿಯಿಂದ ತಪ್ಪು ಆಗಿದ್ದರೆ ನ್ಯಾಯಾಲಯ ಛೀಮಾರಿ ಹಾಕುತ್ತಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ನೀಡಲು ನಿರಾಕರಿಸಿರುವುದನ್ನು ಗಮನಿಸಿದರೆ ಡಿಕೆಶಿ ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೂ ಕಾನೂನಾತ್ಮಕ ಹೋರಾಟ ಮಾಡಿ ಈ ಪ್ರಕರಣದಿಂದ ಹೊರ ಬರುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ.
-ಕೆ.ಎಸ್‌.ಈಶ್ವರಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next