Advertisement

ಕಾಯ್ದೆ ಇದ್ದರೂ ಬಾಲ್ಯವಿವಾಹ ನಿಷೇಧ ಆಗುತ್ತಿಲ್ಲವೇಕೆ?

04:03 PM Oct 11, 2018 | |

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಇವುಗಳ ಆಶ್ರಯದಲ್ಲಿ ಬುಧವಾರ ಮಕ್ಕಳ ಹಕ್ಕುಗಳು ಹಾಗೂ ವಿಕಲಚೇತನ ಮಕ್ಕಳಿಗೆ ಇರುವ ಸಮಸ್ಯೆಗಳು ಮತ್ತು ಅದರ ಪರಿಹಾರಗಳ ಕುರಿತ ಸಾರ್ವಜನಿಕ ಅಹವಾಲು ಕಾರ್ಯಕ್ರಮ ನಡೆಯಿತು. ಹತ್ತನೇ ತರಗತಿಯೊಳಗಿನ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗಳಿಗೆ ಆಯೋಗದ ಸದಸ್ಯರು ಸೇರಿದಂತೆ ಯಾವುದೇ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದೇ ಇದ್ದುದು ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. 

Advertisement

ಮೊಳಕಾಲ್ಮೂರು ತಾಲೂಕಿನ ಕೋನಸಾಗರದ ವಿದ್ಯಾರ್ಥಿನಿ ಕಮಲಾ, ನನ್ನ ನಾಲ್ಕು ಗೆಳತಿಯರಿಗೆ 8ನೇ ತರಗತಿಯಲ್ಲಿದ್ದಾಗ ಮದುವೆ ಆಗಿದೆ. ಬಾಲ್ಯವಿವಾಹ ಅಪರಾಧ ಎನ್ನುವ ಕಾಯ್ದೆ ಇದೆ. ಆಯೋಗ ಈ ಬಗ್ಗೆ ಅರಿವು
ಮೂಡಿಸುತ್ತಿದೆ. ಎಲ್ಲ ಹಂತದ ಅಧಿಕಾರಿಗಳು ಬಾಲ್ಯ ವಿವಾಹ ತಡೆಗೆ ಕೆಲಸ ಮಾಡುತ್ತಾರೆ. ಆದರೂ ಬಾಲ್ಯವಿವಾಹಗಳನ್ನು ನಿಲ್ಲಿಸಲು ಏಕೆ ಆಗುತ್ತಿಲ್ಲ, ಇಂತಹ ಕಾಯ್ದೆಗಳು ಏಕೆ ಬೇಕು, ಮಕ್ಕಳ ಹಕ್ಕುಗಳು ರಕ್ಷಣೆ ಆಗುತ್ತಿಲ್ಲವೇಕೆ, ಮಕ್ಕಳು ಹೇಳಿಕೊಳ್ಳುವ ಸಮಸ್ಯೆಗಳಿಗೆ ಯಾವ ಅಧಿಕಾರಿಗಳಿಂದ ಪರಿಹಾರ ದೊರಕಿದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ತಬ್ಬಿಬ್ಬುಗೊಳಿಸಿದಳು. 

ಚಿತ್ರದುರ್ಗ ತಾಲೂಕಿನ ಐನಹಳ್ಳಿ-ಕುರುಬರಹಟ್ಟಿಯ ವೀರೇಶ್‌, ನಮ್ಮಲ್ಲೂ ಬಾಲ್ಯವಿವಾಹ ಆಗುತ್ತಿವೆ. ಪ್ರಸಕ್ತ
ವರ್ಷದಲ್ಲೇ ನಾಲ್ಕು ಬಾಲ್ಯವಿವಾಹಗಳು ನಡೆದಿವೆ ಎಂದು ಆರೋಪಿಸಿದ. ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿಯ ವೈಶಾಲಿ, ನಾನು 9ನೇ ತರಗತಿ ಓದುತ್ತಿದ್ದೇನೆ. ನಮ್ಮ ಶಾಲೆಯಲ್ಲಿ ಓದುತ್ತಿದ್ದ ಸುಚಿತ್ರ ಎನ್ನುವ ಗೆಳತಿ ಶಾಲೆಗೆ
ಬರುತ್ತಿಲ್ಲ. ಅವರ ಮನೆಯಲ್ಲಿ ವಿಚಾರಿಸಿದೆ. ಅಜ್ಜಿ ಮನೆಯಲ್ಲಿ ಓದಲು ಬಿಟ್ಟಿದ್ದೇವೆ ಎಂದರು. 

ಆದರೆ ಶಿರಾ ತಾಲೂಕಿನ ಹಳ್ಳಿಗೆ ಮದುವೆ ಮಾಡಿಕೊಡಲಾಗಿದೆ. ಚಿಕ್ಕ ಮಕ್ಕಳಿಗೆ ಮದುವೆ ಮಾಡಿದರೆ ಸಂಸಾರದ ಹೊರೆ ಹೊರಲು ಸಾಧ್ಯವೇ, ಮನೆಯಲ್ಲಿ ಮಕ್ಕಳು ತಂದೆ, ತಾಯಿಗಳ ವಿರುದ್ಧ ಮಾತನಾಡಲು ಸಾಧ್ಯವೇ,
ಶಾಲೆಗಳಲ್ಲಿ ಅರಿವು ಮೂಡಿಸಿದರೆ ಸಾಲದು, ಪೋಷಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ನಮ್ಮ ಅಹವಾಲುಗಳನ್ನು ಹೇಳಿಕೊಳ್ಳೋಣ ಎಂದರೆ ಜಿಲ್ಲಾಧಿಕಾರಿ, ಎಸ್ಪಿ, ಸಿಇಒ ಯಾರೊಬ್ಬರೂ ಇಲ್ಲಿಲ್ಲ ಎಂದು ಆಕ್ರೋಶ
ವ್ಯಕ್ತಪಡಿಸಿದಳು. ಮೇಲಾಧಿಕಾರಿಗಳನ್ನ ಕರೆಸಬೇಕು. 

ಇಲ್ಲವಾದರೆ ನಾವ್ಯಾರು ಇಲ್ಲಿಂದ ಕದಲುವುದಿಲ್ಲ. ನೂರಾರು ಕಿಮೀ ದೂರದಿಂದ ನೋವು ಹೇಳಿಕೊಳ್ಳಲು ಬಂದಿದ್ದೇವೆ. ಮಕ್ಕಳಿಗೆ ನ್ಯಾಯ ಕೊಡಿಸಿ ಎಂದು ಪಟ್ಟು ಹಿಡಿದಳು.
 
ವಿದ್ಯಾರ್ಥಿ ವೀರೇಶ್‌ ಮಾತನಾಡಿ, ನಮ್ಮ ಶಾಲೆಯಲಿ ಕೇವಲ ಎರಡು ಶೌಚಾಲಯವಿದ್ದು, 170 ಮಕ್ಕಳು ಹೇಗೆ ಬಳಕೆ ಮಾಡಬೇಕು, ಕೆರೆಯಂಗಳಕ್ಕೆ ಹೋಗಿ ಮೂತ್ರ ವಿಸರ್ಜನೆ ಮಾಡಬೇಕಿದೆ. ಜಿಪಂ ಸಿಇಒ ಸೇರಿದಂತೆ ಎಲ್ಲರಿಗೂ ಮನವಿ ಮಾಡಿದ್ದೇವೆ. ಇಂದಿಗೂ ಶೌಚಾಲಯ ನಿರ್ಮಿಸಿಲ್ಲ. ಇನ್ನೂ ಶಾಲೆಯ 2 ಕಿಮೀ ದೂರದಲ್ಲಿ ಜೆಲ್ಲಿ ಕ್ರಷರ್‌ ಇದ್ದು ಅದು
ಹೊರ ಸೂಸುವ ಧೂಳಿನಿಂದ ನಾಲ್ಕು ಮಕ್ಕಳು ಅಸ್ತಮಾ ಸೇರಿದಂತೆ ನಾನಾ ರೀತಿಯ ಕಾಯಿಲೆಗೆ ತುತ್ತಾಗಿ ಶಾಲೆ ಬಿಟ್ಟಿದ್ದಾರೆಂದು ನೋವು ತೋಡಿಕೊಂಡ.

Advertisement

ಮಕ್ಕಳ ಸಮಸ್ಯೆ ಆಲಿಸಿದ ಆಯೋಗದ ಸದಸ್ಯ ರೂಪ ನಾಯ್ಕ, ಯಾವ್ಯಾವ ಊರುಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎದ್ದು ನಿಲ್ಲಿ ಎಂದು ಸೂಚಿಸಿದರು. ಅಹವಾಲುಗಳನ್ನು ಹೇಳಿಕೊಳ್ಳಲು ಆಗಮಿಸಿದ್ದ ಶೇ. 90 ರಷ್ಟು ಮಕ್ಕಳು ಎದ್ದು ನಿಂತು ಬಾಲ್ಯವಿವಾಹಗಳು ನಡೆಯುತ್ತಿವೆ ಎಂದು ಕೂಗಿ ಹೇಳಿದರು.

ನಮ್ಮೂರಿಗೆ ಬಸ್‌ ಸೌಲಭ್ಯವಿಲ್ಲ, ರಸ್ತೆಯಿಲ್ಲ, ಶಾಲೆಗೆ ಕಾಂಪೌಂಡ್‌ ಇಲ್ಲ, ಕುಡಿಯುವ ನೀರಿಲ್ಲ, ಶಿಕ್ಷಕರಿಲ್ಲ, ಕ್ರೀಡಾಂಗಣವಿಲ್ಲ, ಶಾಲಾ ಕಟ್ಟಡ ಬೀಳುವಂತಿದೆ. ಕೊಠಡಿಗಳ ಸಮಸ್ಯೆ ಇದೆ ಎಂದು ನೂರಾರು ದೂರುಗಳನ್ನು ಹೇಳಿಕೊಂಡರು. ಆಯೋಗದ ಸದಸ್ಯರು, ನಾವೆಲ್ಲ ಮಕ್ಕಳ ಹಣದಲ್ಲಿ ಸಂಬಳ ಪಡೆಯುತ್ತಿದ್ದೇವೆ. ಮಕ್ಕಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ನಮಗೆಲ್ಲ ನಾಚಿಕೆ ಆಗಬೇಕು. ಕಾಟಾಚಾರಕ್ಕೆ ಸಭೆ ಆಗುತ್ತಿದೆ, ಯಾವ ಅಧಿ ಕಾರಿಗಳೂ ಸಭೆಗೆ ಆಗಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಪಂ ಉಪ ಕಾರ್ಯದರ್ಶಿ ಬಸವರಾಜಪ್ಪ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ, ಐಎಎಸ್‌ ಪ್ರೊಬೆಷನರಿ ಅಧಿಕಾರಿ ಡಾ| ನಂದಿನಿ ದೇವಿ, ಸಿಪಿಐ ಪ್ರಕಾಶ್‌ ಪಾಟೀಲ್‌, ವಿಶ್ವಸಾಗರ್‌, ವಿಕಲಚೇತನ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next