Advertisement

Yuzi chahal ಗೆ ಯಾಕೆ ಮತ್ತೆ ಮತ್ತೆ ಗೂಗ್ಲಿ ಹಾಕುತ್ತಿದೆ ಬಿಸಿಸಿಐ? ಇಲ್ಲಿದೆ ಹಿಂದಿನ ಕಾರಣ

06:05 PM Aug 24, 2023 | ಕೀರ್ತನ್ ಶೆಟ್ಟಿ ಬೋಳ |

ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿದ್ದ, ಮಧ್ಯದ ಓವರ್ ಗಳಲ್ಲಿ ತನ್ನ ಸ್ಪಿನ್ ಮ್ಯಾಜಿಕ್ ನಿಂದ ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದ ಯುಜುವೇಂದ್ರ ಚಾಹಲ್ ಅವರೇ ಇದೀಗ ಸ್ಪಿನ್ ದಾಳಿಗೆ ತುತ್ತಾದಂತೆ ಕಾಣುತ್ತಿದ್ದಾರೆ. ಒಂದು ಕಾಲದಲ್ಲಿ ತಂಡದ ಪ್ರಮುಖ ಆಟಗಾರನಾಗಿದ್ದ ಯುಜಿ ಇದೀಗ 15ರ ಬಳಗದಲ್ಲೇ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದಾರೆ. ಈ ವಿಚಾರ ಇದೀಗ ಏಷ್ಯಾ ಕಪ್ ವಿಷಯದಲ್ಲಿ ಮತ್ತೆ ಸಾಬೀತಾಗಿದೆ.

Advertisement

ಮುಂಬರುವ ಏಷ್ಯಾ ಕಪ್ ಕೂಟಕ್ಕಾಗಿ ಕಳೆದ ಸೋಮವಾರ ಬಿಸಿಸಿಐ ಪ್ರಕಟಿಸಿದ 17 ಸದಸ್ಯರ ತಂಡದಲ್ಲಿ ಯುಜಿ ಚಾಹಲ್ ಸ್ಥಾನ ಪಡೆದಿಲ್ಲ. ಇದು ಹಲವರ ಅಚ್ಚರಿಗೆ ಕಾರಣವಾಗಿದೆ. ಪ್ರೈಮ್ ಸ್ಪಿನ್ನರ್ ಚಾಹಲ್ ಬದಲಿಗೆ ಅಕ್ಷರ್ ಪಟೇಲ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿರುವುದು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಏಷ್ಯಾ ಕಪ್ ತಂಡದಲ್ಲಿ ಚಾಹಲ್ ಹೆಸರು ಕಾಣೆಯಾಗಿದ್ದರೂ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಗಾಗಿ ಅವರಿಗೆ ತಂಡದ ಬಾಗಿಲು ಮುಚ್ಚಿಲ್ಲ ಎಂದು ಭಾರತದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಯುಜಿ ಚಾಹಲ್ ಅವರನ್ನು 2021ರ ಟಿ20 ವಿಶ್ವಕಪ್ ನಲ್ಲಿಯೂ ಹೊರಗಿಡಲಾಗಿತ್ತು. ವಿಶ್ವಕಪ್ ಮೊದಲು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರೆಂಬ ಕಾರಣದಿಂದ ಚಾಹಲ್ ಬದಲಿಗೆ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ನೀಡಲಾಗಿತ್ತು. ಆದರೆ ಅವರ ಮಿಸ್ಟ್ರಿ ಸ್ಪಿನ್ ಯಾವುದೇ ಪರಿಣಾಮ ಬೀರಲಿಲ್ಲ. ಬಳಿಕ ಅವರೂ ತಂಡದಿಂದ ಹೊರಬಿದ್ದರು. ಮುಂದಿನ 2022ರ ಟಿ20 ವಿಶ್ವಕಪ್ ನಲ್ಲಿ ಚಾಹಲ್ ಗೆ ಅವಕಾಶ ಸಿಕ್ಕರೂ ಅವರು ಒಂದೇ ಒಂದು ಪಂದ್ಯದಲ್ಲಿ ಆಡುವ ಬಳಗದ ಭಾಗವಾಗಿರಲಿಲ್ಲ. ಅಶ್ವಿನ್ ಅವರೇ ಸ್ಪಿನ್ನರ್ ಕೋಟಾದಲ್ಲಿ ಆಡಿದ್ದರು.

ಏಷ್ಯಾ ಕಪ್ ಗೆ ಯಾಕಿಲ್ಲ?

Advertisement

ಬಿಸಿಸಿಐ ಪ್ರಕಟಿಸಿದ 17 ಸದಸ್ಯರ ತಂಡದಲ್ಲಿ ಕುಲದೀಪ್ ಯಾದವ್ ಅವರ ಏಕಮಾತ್ರ ರಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಉಳಿದ ಇಬ್ಬರು ಸ್ಪಿನ್ನರ್ ಗಳೆಂದರೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಂಡದಲ್ಲಿ ಸ್ಥಾನ ಪಡೆದಿರುವ ಮೂವರೂ ಎಡಗೈ ಸ್ಪಿನ್ನರ್ ಗಳು ಮತ್ತು ಯಾವುದೇ ಆಫ್ ಸ್ಪಿನ್ನರ್ ಸ್ಥಾನ ಪಡೆದಿಲ್ಲ.

ಈ ತಂಡ ಪ್ರಕಟ ಮಾಡುವಾಗ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಅದೆಂದರೆ ಆಳವಾದ ಬ್ಯಾಟಿಂಗ್. ಇದೇ ಕಾರಣಕ್ಕೆ ಅಕ್ಷರ್ ಪಟೇಲ್ ಅವರು ಚಾಹಲ್ ವಿರುದ್ಧ ರೇಸ್ ಗೆದ್ದಿರುವುದು.

ಚಾಹಲ್ ಕಳೆದ ವರ್ಷದ ಆರಂಭದಿಂದ 16 ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು ಪಡೆದಿದ್ದಾರೆ. ಆದರೆ ಎಡಗೈ ಸ್ಪಿನ್ನರ್ ಅಕ್ಷರ್ 14 ಪಂದ್ಯಗಳಲ್ಲಿ 13 ವಿಕೆಟ್ ಮಾತ್ರ ಪಡೆದಿದ್ದಾರೆ. 2022 ರ ಆರಂಭದಿಂದಲೂ 50-ಓವರ್ ಮಾದರಿಯಲ್ಲಿ ಚಾಹಲ್ ಹೆಚ್ಚು ವಿಕೆಟ್ ಗಳನ್ನು ಪಡೆದಿದ್ದರೂ ಬಿಸಿಸಿಐ ಅಕ್ಷರ್ ಅವರ ಉತ್ತಮ ಬ್ಯಾಟಿಂಗ್ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ.

ಅಕ್ಷರ್ ಪಟೇಲ್ ಅವರು ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ನಲ್ಲಿ ಭಾರಿ ಸುಧಾರಣೆ ಕಂಡಿದ್ದಾರೆ. ಅಲ್ಲದೆ ಜಡೇಜಾ ಅವರೂ ಪರಿಪೂರ್ಣ ಬ್ಯಾಟರ್ ನಂತೆ ಬ್ಯಾಟ್ ಬೀಸುತ್ತಿದ್ದಾರೆ. ಅದ್ಭುತ ಫೀಲ್ಡರ್ ಕೂಡಾ ಆಗಿರುವ ಜಡ್ಡು ಈಗ ತಂಡದ ಪ್ರಮುಖ ಸದಸ್ಯ. ಅಲ್ಲದೆ ಶಾರ್ದೂಲ್ ಠಾಕೂರ್ ಅವರನ್ನು ಬ್ಯಾಟಿಂಗ್ ಕೌಶಲದ ಕಾರಣದಿಂದಲೇ ಆಲ್ ರೌಂಡರ್ ಕೋಟಾದಡಿ ಆಯ್ಕೆ ಮಾಡಲಾಗಿದೆ.

“ನಾವು ಆಫ್-ಸ್ಪಿನ್ನರ್ ಗಳಾಗಿ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಬಗ್ಗೆಯೂ ಯೋಚಿಸಿದ್ದೇವೆ, ಆದರೆ ಇದೀಗ ನಾವು 17 ಆಟಗಾರರನ್ನು ಮಾತ್ರ ಆಯ್ಕೆ ಮಾಡುವ ಕಾರಣ ಚಾಹಲ್ ಅವರನ್ನು ಕಳೆದುಕೊಳ್ಳಬೇಕಾಯಿತು” ಎಂದು ತಂಡದ ಪ್ರಕಟಣೆಯ ನಂತರ ರೋಹಿತ್ ಹೇಳಿದರು.

“ಚಾಹಲ್ ರನ್ನು ಸೇರಿಸಲು ನಾವು ಸೀಮರ್‌ ಗಳಲ್ಲಿ ಒಬ್ಬರು ಕೈಬಿಡಬೇಕಿತ್ತು. ನಮಗೆ ಏಕೈಕ ಮಾರ್ಗ ಅದೇ ಆಗಿತ್ತು. ನಾವು ಅದನ್ನು ಮಾಡಲು ಸಾಧ್ಯವಿಲ್ಲ ಏಕೆಂದರೆ ಮುಂದಿನ ಎರಡು ತಿಂಗಳಲ್ಲಿ ಸೀಮರ್‌ ಗಳು ದೊಡ್ಡ ಪಾತ್ರವನ್ನು ವಹಿಸಲಿದ್ದಾರೆ. ಅವರಲ್ಲಿ ಕೆಲವರು ಬಹಳ ಸಮಯದ ನಂತರ ಹಿಂತಿರುಗುತ್ತಿದ್ದಾರೆ. ಅವರಿಗೆ ಸ್ವಲ್ಪ ಆಟದ ಸಮಯವನ್ನೂ ನೀಡಬೇಕಿದೆ’ ಎಂದರು.

ಏಷ್ಯಾ ಕಪ್ ತಂಡದಲ್ಲಿ ಚಾಹಲ್ ಅವರ ಹೆಸರು ಇಲ್ಲದೇ ಇರುವುದು ದೊಡ್ಡ ಆಶ್ಚರ್ಯವೇನಲ್ಲ. ಯಾಕೆಂದರೆ ಕಳೆದ ವೆಸ್ಟ್ ಇಂಡೀಸ್‌ ನಲ್ಲಿ ನಡೆದ ಏಕದಿನ ಸರಣಿಯಲ್ಲಿ ಅವರು ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದಿಲ್ಲ. ಮುಂದಿನ ಟಿ20 ಸರಣಿಯಲ್ಲಿ ಅವಕಾಶ ಸಿಕ್ಕರೂ ಯಾಕೋ ಆಯ್ಕೆಗಾರರ ಮನಸ್ಸು ಕರಗಿದಂತೆ ಕಾಣುತ್ತಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ನಾಯಕ ರೋಹಿತ್ ಮತ್ತೊಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. “ಯಾರಿಗೂ ಬಾಗಿಲು ಮುಚ್ಚಿಲ್ಲ. ಯಾರು ಬೇಕಾದರೂ ಒಳಗೆ ಬರಬಹುದು. ನಮಗೆ ವಿಶ್ವಕಪ್‌ ಗೆ ಚಾಹಲ್ ಅಗತ್ಯವಿದೆ ಎಂದು ನಮಗೆ ಅನಿಸಿದರೆ, ನಾವು ಅವನನ್ನು ಹೇಗೆ ಒಳಗೊಳ್ಳಬಹುದು ಎಂಬುದನ್ನು ನಾವು ನೋಡುತ್ತೇವೆ, ವಾಷಿಂಗ್ಟನ್ ಸುಂದರ್ ಅಥವಾ ಅಶ್ವಿನ್‌ ವಿಚಾರದಲ್ಲೂ ಇದೇ ನಡೆಯುತ್ತದೆ” ಎಂದಿದ್ದಾರೆ.

ಆದರೆ ಪುನರಾಗಮನವು ಕಷ್ಟ ಎನ್ನಲಾಗುತ್ತಿದೆ. ಯಾಕೆಂದರೆ ಇದು ಮುಖ್ಯವಾಗಿ ಆಗಸ್ಟ್ 31 ರಿಂದ ಪ್ರಾರಂಭವಾಗುವ ಏಷ್ಯಾ ಕಪ್‌ನಲ್ಲಿ ಆಯ್ಕೆಯಾದ ಮೂವರ ಪ್ರದರ್ಶನವನ್ನು ಅವಲಂಬಿಸಿರುತ್ತದೆ. ಅಲ್ಲದೆ ಸೆಪ್ಟೆಂಬರ್ 5 ರೊಳಗೆ ತಾತ್ಕಾಲಿಕ ವಿಶ್ವಕಪ್ ತಂಡವನ್ನು ಘೋಷಿಸಬೇಕಿದೆ. ಹೀಗಾಗಿ ಯುಜಿ ಚಾಹಲ್ ತವರಿನಲ್ಲಿ ವಿಶ್ವಕಪ್ ಆಡುವ ಕನಸು ಮರೀಚಿಕೆಯಾಗಿಯೇ ಉಳಿಯುವ ಸಾಧ್ಯತೆಯಿದೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next