Advertisement

ಟೀಂ ಇಂಡಿಯಾಗೆ ಕೇನ್ ಬಳಗ ಕಬ್ಬಿಣದ ಕಡಲೆಯಾಗುತ್ತಿರುವುದ್ಯಾಕೆ?

08:47 AM Jun 26, 2021 | ಕೀರ್ತನ್ ಶೆಟ್ಟಿ ಬೋಳ |

ಕಳೆದೆರಡು ಎರಡು ವರ್ಷಗಳಲ್ಲಿ ಉಪಖಂಡದ ಹೊರಗಡೆಯೂ ವಿಕ್ರಮ ಸಾಧಿಸಿದ್ದ ವಿರಾಟ್ ಬಳಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. ಫೈನಲ್ ಆರಂಭಕ್ಕೂ ಮುನ್ನ ಫೇವರೆಟ್ಸ್ ಆಗಿದ್ದ ತಂಡವು ಕೇನ್ ವಿಲಿಯಮ್ಸನ್ ಬಳಗದ ವಿರುದ್ಧ ಸೋಲನುಭವಿಸಿತು.

Advertisement

ಅಂದಹಾಗೆ 2019ರ ಏಕದಿನ ವಿಶ್ವಕಪ್ ನಲ್ಲೂ ಸೆಮಿ ಫೈನಲ್ ವರೆಗೆ ಅದ್ಭುತವಾಗಿ ಆಡಿದ್ದ ವಿರಾಟ್ ಕೊಹ್ಲಿ ತಂಡ ಮುಗ್ಗರಿಸಿದ್ದು ಅದೇ ಕೇನ್ ವಿಲಿಯಮ್ಸನ್ ನಾಯತ್ವದ ನ್ಯೂಜಿಲ್ಯಾಂಡ್ ತಂಡದೆದುರು! ವಿಶ್ವ ಟೆಸ್ಟ್ ಚಾಂಪಿಯನ್ ನಲ್ಲಿ ಸೋತ ಏಕೈಕ ಸರಣಿಯೂ ಅದೇ ಕಿವೀಸ್ ತಂಡದೆದುರು. ಎಲ್ಲಾ ತಂಡದ ವಿರುದ್ಧ ಗೆದ್ದು ಬೀಗುವ ವಿರಾಟ್ ಹುಡುಗರಿಗೆ ಕೇನ್ ಬಳಗ ಮಾತ್ರ ಯಾಕೆ ಕಬ್ಬಿಣದ ಕಡಲೆಯಾಗತ್ತಿದೆ?

ಈ ವರ್ಷದ ಆರಂಭದಲ್ಲಿ ಅಸಾಧ್ಯ ಎನ್ನುವಂತಿದ್ದ ಗಾಬ್ಬಾ ಟೆಸ್ಟ್ ಪಂದ್ಯದಲ್ಲಿ ಗೆದ್ದ ಹುಡುಗರಿಗೆ ಸೌಥಂಪ್ಟನ್ ಟೆಸ್ಟ್ ಪಂದ್ಯ ಯಾಕೆ ದುಸ್ವಪ್ನವಾಯಿತು! ಬಲಿಷ್ಠ ತಂಡವಿದ್ದರೂ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ಯಾಕೆ ಮರೀಚಿಕೆಯಾಗುತ್ತಿದೆ! ಐಸಿಸಿ ಕೂಟಗಳಲ್ಲಿ ನ್ಯೂಜಿಲ್ಯಾಂಡ್ ತಂಡದೆದುರು ಭಾರತದ ಸೋಲಿನ ಸರಣಿಯ ಬಗ್ಗೆ ಇಲ್ಲಿದೆ ಮಾಹಿತಿ.

 ಐಸಿಸಿ ನಾಕೌಟ್ ಫೈನಲ್ 2000

Advertisement

ಅದು 2000ನೇ ಇಸವಿಯ ಐಸಿಸಿಯ ನಾಕೌಟ್ ಕೂಟ. ಬಲಿಷ್ಠ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದ ಸೌರವ್ ಗಂಗೂಲಿ ಬಳಗ ಫೈನಲ್ ತಲುಪಿತ್ತು. ಇದೇ ಸರಣಿಯಲ್ಲಿ ಯುವರಾಜ್ ಸಿಂಗ್, ಜಹೀರ್ ಖಾನ್ ರಂತಹ ಮ್ಯಾಚ್ ವಿನ್ನರ್ ಗಳು ಭಾರತಕ್ಕೆ ಸಿಕ್ಕಿದ್ದು. ಫೈನಲ್ ತಲುಪಿದ್ದ ಭಾರತಕ್ಕೆ ಎದುರಾಗಿದ್ದ ನ್ಯೂಜಿಲ್ಯಾಂಡ್ ತಂಡ. ಆದರೂ ಗೆಲುವಿನ ಫೇವರೆಟ್ ಭಾರತವೇ ಆಗಿತ್ತು.

ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಭಾರತವನ್ನು ಬ್ಯಾಟಿಂಗ್ ಗೆ ಆಮಂತ್ರಿಸಿತ್ತು. ಮೊದಲ ವಿಕೆಟ್ ಗೆ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಭರ್ಜರಿ 141 ರನ್ ಪೇರಿಸಿದ್ದರು. 69 ರನ್ ಗಳಿಸಿದ ಸಚಿನ್ ರನೌಟ್ ಆಗಿ ಮರಳಿದರೆ ನಂತರ ಬಂದ ದ್ರಾವಿಡ್ 35 ಎಸೆತ ಎದುರಿಸಿ 22 ರನ್ ಅಷ್ಟೇ ಗಳಿಸಿದರು. ನಾಯಕ ಗಂಗೂಲಿ ಶತಕ ಗಳಿಸಿದರು. ಒಂದು ಹಂತದಲ್ಲಿ 300 ರನ್ ಗಳಿಸಬಹುದು ಎಂದುಕೊಂಡಿದ್ದ ತಂಡ ಕೊನೆಗೆ ಕಲೆಹಾಕಿದ್ದು ಆರು ವಿಕೆಟ್ ನಷ್ಟಕ್ಕೆ 264 ರನ್ ಮಾತ್ರ.

ಆರಂಭದಲ್ಲೇ ಸ್ಟೀಫನ್ ಫ್ಲೆಮಿಂಗ್ ಮತ್ತು ಕ್ರೇಗ್ ಸ್ಪಿಯರ್ ಮನ್ ವಿಕೆಟ್ ಪಡೆದ ವೆಂಕಟೇಶ್ ಪ್ರಸಾದ್ ಭಾರತಕ್ಕೆ ಮೇಲುಗೈ ಒದಗಿಸಿದ್ದರು. ಒಂದು ಹಂತದಲ್ಲಿ ಬ್ಲ್ಯಾಕ್ ಕ್ಯಾಪ್ಸ್ 132 ರನ್ ಗೆ ಐದು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಆದರೆ ಕ್ರಿಸ್ ಕ್ರೈನ್ಸ್ ಬ್ಯಾಟಿಂಗ್ ಬಾಕಿಯಿತ್ತು.

ಆ ಒತ್ತಡದ ಪರಿಸ್ಥಿತಿಯಲ್ಲಿ ಕ್ರಿಸ್ ಕ್ರೈನ್ಸ್ ತನ್ನ ವೃತ್ತಿ ಜೀವನದ ಅತ್ಯುನ್ನತ ಇನ್ನಿಂಗ್ಸ್ ಆಡಿದ್ದರು. ಮತ್ತೋರ್ವ ಆಲ್ ರೌಂಡರ್ ಕ್ರಿಸ್ ಹ್ಯಾರಿಸ್ ಜೊತೆ ಬ್ಯಾಟಿಂಗ್ ನಡೆಸಿದ ಕ್ರೈನ್ಸ್ 113 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದ್ದರು. ಕೇವಲ ಎರಡು ಎಸೆತ ಬಾಕಿಯಿರುವಾಗ ತಂಡವನ್ನು ಗೆಲ್ಲಿಸಿದ್ದರು ಕ್ರಿಸ್ ಕ್ರೈನ್ಸ್. ಅದು ನ್ಯೂಜಿಲ್ಯಾಂಡ್ ಜಯಿಸಿದ ಮೊತ್ತ ಮೊದಲ ಐಸಿಸಿ ಟ್ರೋಫಿ.

2016 ಟಿ20 ವಿಶ್ವಕಪ್ ಪಂದ್ಯ

ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಕೂಟವದು. ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಆಘಾತಕಾರಿ ಸೋಲನುಭವಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲ್ಯಾಂಡ್ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 126 ರನ್ ಮಾತ್ರ. 34 ರನ್ ಗಳಿಸಿದ್ದ ಕೋರಿ ಆ್ಯಂಡರ್ಸನ್ ಅವರೇ ಕಿವೀಸ್ ಪಾಳಯದ ಹೆಚ್ಚಿನ ಸ್ಕೋರರ್.

ಸುಲಭ ಗುರಿ ಬೆನ್ನತ್ತಿದ್ದ ಭಾರತಕ್ಕೆ ಕಿವೀಸ್ ಸ್ಪಿನ್ನರ್ ಗಳು ನರಕ ದರ್ಶನ ಮಾಡಿಸಿದ್ದರು. ನಥನ್ ಮೆಕಲಮ್, ಇಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಭಾರತಕ್ಕೆ ಭಾರತೀಯ ಪಿಚ್ ನಲ್ಲೇ ಸ್ಪಿನ್ ಜಾದೂ ತೋರಿಸಿದ್ದರು. ಭಾರತ ತಂಡ ಕೇವಲ 12 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿತ್ತು. 23 ರನ್ ಗಳಿಸಿದ್ದ ವಿರಾಟ್ ಔಟಾದಾಗ ತಂಡದ ಮೊತ್ತ 39ಕ್ಕೆ ಐದು!

ನಾಯಕ ಧೋನಿ 30 ರನ್ ಗಳಿಸಿದರೂ ಉಳಿದವರ ಬ್ಯಾಟ್ ನಿಂದ ರನ್ ಬರಲಿಲ್ಲ. ಸ್ಯಾಂಟ್ನರ್ 11 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಇಶ್ ಸೋಧಿ 18 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಭಾರತ ತಂಡ 18.1 ಓವರ್ ನಲ್ಲಿ ಕೇವಲ 79 ರನ್ ಗೆ ಸರ್ವಪತನ ಕಂಡಿತ್ತು!

2019 ವಿಶ್ವಕಪ್ ಸೆಮಿ ಫೈನಲ್

ಕೂಟದ ಆರಂಭದಿಂದಲೂ ಸತತ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಟೀಂ ಇಂಡಿಯಾದ ಓಟಕ್ಕೆ ತಡೆ ಹಾಕಿದ್ದು ಮತ್ತದೇ ಕಿವೀಸ್. ಈ ವಿಶ್ವಕಪ್ ನಲ್ಲಿ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ಎದುರು ಸೋಲನುಭವಿಸಿತ್ತು. ನಂತರ ಲೀಗ್ ಹಂತದಲ್ಲಿ ಕೇನ್ ಬಳಗದೆದುರಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದೊಂದಿಗೆ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದ ಭಾರತಕ್ಕೆ ಎದುರಾಗಿದ್ದು ಮತ್ತದೇ ಬ್ಲ್ಯಾಕ್ ಕ್ಯಾಪ್ಸ್.

ಮೊದಲು ಬ್ಯಾಟಿಂಗ್ ಗೆ ಇಳಿದ ನ್ಯೂಜಿಲ್ಯಾಂಡ್ ಸತತ ವಿಕೆಟ್ ಕಳೆದುಕೊಂಡಿತ್ತು. ವಿಲಿಯಮ್ಸನ್ 67 ರನ್ ರಾಸ್ ಟೇಲರ್ 74 ರನ್ ಗಳಿಸಿದ್ದರು. ಮಳೆಯಿಂದಾಗಿ ಎರಡು ದಿನ ನಡೆದ ಪಂದ್ಯದಲ್ಲಿ ವಿಲಿಯಮ್ಸನ್ ಬಳಗ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 239 ರನ್ ಅಷ್ಟೇ ಗಳಿಸಿತ್ತು.

ಸುಲಭ ಗುರಿ ಬೆನ್ನತ್ತಿದ್ದ ಭಾರತೀಯ ಆಟಗಾರರಿಗೆ ಕಿವೀಸ್ ಬೌಲರ್ ಗಳು ದುಸ್ವಪ್ನವಾಗಿ ಕಾಡಿದ್ದರು. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಒಂದಂಕಿಗೆ ಆಟ ಮುಗಿಸಿದ್ದರು. ತಂಡದ ಮೊತ್ತ 24 ರನ್ ಆಗುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಾಗಿತ್ತು. ಪಂತ್ ಮತ್ತು ಪಾಂಡ್ಯ  ತಲಾ 32 ರನ್ ಗಳಿಸಿ ಔಟಾದರು.

92 ರನ್ ಗೆ ಆರು ವಿಕೆಟ್ ಕಳೆದುಕೊಂಡಲ್ಲಿಂದ ಧೋನಿ ಮತ್ತು ಜಡೇಜಾ ಜೊತೆಯಾದರು. 59 ಎಸೆತದಲ್ಲಿ 77 ರನ್ ಗಳಿಸಿದ್ದ ಜಡೇಜಾ ಔಟಾದರೂ ಧೋನಿ ಕ್ರೀಸ್ ನಲ್ಲಿದ್ದ ಕಾರಣ ಅಭಿಮಾನಿಗಳಿಗೆ ಇನ್ನೂ ಗೆಲುವಿನ ವಿಶ್ವಾಸವಿತ್ತು. ಆದರೆ 50 ರನ್ ಗಳಿಸಿದ್ದ ಧೋನಿ ಎರಡು ರನ್ ಕಸಿಯಲು ಹೋಗಿ ಗಪ್ಟಿಲ್ ಎಸೆದ ಥ್ರೋ ಗೆ ರನ್ ಔಟ್ ಆಗುತ್ತಿದ್ದಂತೆ ಭಾರತದ ವಿಶ್ವಕಪ್ ಪಯಣ ಅಂತ್ಯವಾಯಿತು.

ಅತಿರಥ ತಂಡಗಳನ್ನು ಅವರ ನೆಲದಲ್ಲೇ ಮಣ್ಣು ಮುಕ್ಕಿಸಿರುವ ವಿರಾಟ್ ತಂಡಕ್ಕೆ ಕೇನ್ ವಿಲಿಯಮ್ಸನ್ ಬಳಗ ಮಾತ್ರ ಕಬ್ಬಿಣದ ಕಡಲೆಯಾಗುತ್ತಿದೆ. ಸತತ ಎರಡು ಐಸಿಸಿ ಕಪ್ ಗಳನ್ನು ಜಯಿಸುವ ಸಮೀಪ ಬಂದಿದ್ದ ಟೀಂ ಇಂಡಿಯಾಗೆ ಇದೇ ನ್ಯೂಜಿಲ್ಯಾಂಡ್ ಅಡ್ಡಿಯಾಗಿದೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next