Advertisement

ದ್ವೇಷಿಸುವುದೇಕೆ, ಪ್ರೀತಿಸುವುದ ಬಿಟ್ಟು !

06:00 AM Aug 03, 2018 | |

ಆವತ್ತು ಬೆಳಿಗ್ಗೆ ಬಹಳ ಉತ್ಸಾಹದಿಂದ ಅದೆಲ್ಲಿಗೋ ಹೊರಟಿದ್ದೆ. ಆವತ್ತು ನಾನು ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ ಅನೇಕ ವಿಷಯಗಳಿದ್ದವು. ಬ್ಯಾಂಕಿಗೆ ಹಣ ಹಾಕುವುದು, ಬಹಳ ದಿನಗಳ ನಂತರ ಹಳೆಯ ಗೆಳೆಯರನ್ನು ಭೇಟಿಯಾಗುವುದು, ಹೀಗೆ ಒಟ್ಟಿನಲ್ಲಿ ನನ್ನ ಆವತ್ತಿನ ದಿನಚರಿ ಆಕರ್ಷಣೀಯವಾಗಿತ್ತು. ಅಷ್ಟರಲ್ಲಿ ಅಮ್ಮನಿಂದ ಒಂದು ಕರೆ. ಯಾರೋ ಸಂಬಂಧಿಕರು ತೀರಿಕೊಂಡಿದ್ದಾರೆ. ಅಲ್ಲಿಗೆ ಹೋಗು ಎಂಬುದು! ಸಾವಿಗೆ ದಿನಚರಿ ಇಲ್ಲ. ಅದು ಹೇಳಿಕೇಳಿ ಬರುವುದಿಲ್ಲ. ಒಟ್ಟಿನಲ್ಲಿ ನನ್ನ ಆವತ್ತಿನ ದಿನಚರಿ ಸಂಪೂರ್ಣ ಬದಲಾಗಿತ್ತು.

Advertisement

ಸಾವಿಗಿರೋ ಶಕ್ತಿ ಅಂಥಾದ್ದು. ನಮ್ಮೆಲ್ಲ ಯೋಜನೆಗಳನ್ನು, ನಮ್ಮೆಲ್ಲ ಕನಸುಗಳನ್ನ ನಾವು ನಿರೀಕ್ಷೆ ಮಾಡದ ಸಾವೊಂದು ನುಚ್ಚುನೂರು ಮಾಡುತ್ತದೆ. ಬಹುಶಃ ನಾವು ಯಾವಾಗ ಸಾಯುತ್ತೇವೆ ಅಂತ ನಿಖರವಾಗಿ ಗೊತ್ತಾಗುವಂತಿದ್ದರೆ, ನಾವು ಕಾಣುವ ಕನಸುಗಳಿಗೆಲ್ಲ ಅರ್ಥವಿರುತ್ತಿತ್ತೋ ಏನೋ. ಮುಂದೊಂದು ದಿನ ಸಾಯುತ್ತೇವೆ ಅಂತ ಗೊತ್ತಿದ್ದೂ ನಾವು ಬದುಕಿನ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಅದು ಬದುಕಿನ ಬಗ್ಗೆ ನಮಗಿರಬಹುದಾದ ನಂಬಿಕೆ ಅಥವಾ ಮೂಢನಂಬಿಕೆ.

ಸಾವಿನ ಅನಂತತೆ ಅಂಥಾದ್ದು. ಅದು ಯಾರನ್ನೂ ಉಳಿಸೋದಿಲ್ಲ. ದೊಡ್ಡವರ ಸಾವುಗಳು ಸ್ವಲ್ಪ ಸುದ್ದಿಯಾಗುತ್ತವೆ ಅನ್ನೋದನ್ನು ಬಿಟ್ಟರೆ ಸಾವು ಎಲ್ಲರಿಗೂ ಒಂದೇ. ಅಲ್ಲಿ ಬೇಧಭಾವ ಇಲ್ಲ. ಸಾವು ಯಾವತ್ತಿಗೂ ಸರಳವಾಗಿರುವುದಿಲ್ಲ. ನಾವು ಮನಸಾರೆ ದ್ವೇಷಿಸುವ ವ್ಯಕ್ತಿ ಸತ್ತಾಗಲೂ ಒಂದು ಕ್ಷಣ ಆ ವಿವರಣೆಯಿಲ್ಲದ ಶೂನ್ಯ ನಮ್ಮನ್ನು ಆವರಿಸಿಕೊಳ್ಳುತ್ತದೆ. ನಮ್ಮೆಲ್ಲರ ಬದುಕು ಒಂದರ್ಥದಲ್ಲಿ ಸಾವಿನತ್ತಲೇ ಚಲಿಸುತ್ತಿದೆ. ಪ್ರತಿಸಾವು ಕೂಡ ಮನದ ಮೂಲೆಯಲ್ಲಿ ಎಲ್ಲೋ ಒಂದು ಕ್ಷಣ ನಮ್ಮನ್ನು ಕಾಡುತ್ತದೆ, ನಮಗೆ ಮನಸ್ಸು ಇರೋದೇ ನಿಜವಾದರೆ…

ನಾನು ಅದುವರೆಗೂ ನೋಡದೇ ಇದ್ದ ಯಾರೋ ಒಬ್ಬರು ನನ್ನನ್ನು ಭೇಟಿಯಾಗಬೇಕೆಂದು ಒಂದೆರಡು ಬಾರಿ ಹೇಳಿದ್ದರಂತೆ. ಆದರೆ, ಕಾಲದ ಆಟವೋ, ನನ್ನ ನಿರ್ಲಕ್ಷ್ಯವೋ ನಾನು ಅವರನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ಅವರ ಸಾವಿನ ಸುದ್ದಿ ಬಂದೆರಗಿತ್ತು.
ನಾನವರನ್ನು ಮೊದಲ ಬಾರಿ ನೋಡಿದ್ದು ಅವರ ಸಾವಿನ ದಿನ. ಇಷ್ಟೇ ಬದುಕು. ಅದು ಭಯಂಕರ ಅನಿರೀಕ್ಷಿತ. ನಾವು ಒಬ್ಬರ ಬಗ್ಗೆ ಏನೇನೋ ಕನಸು ಕಂಡಿರುತ್ತೇವೆ. ಆದರೆ, ನಿನ್ನೆ ಇದ್ದ ಅವರು ಈಗ ಇಲ್ಲ ಅನ್ನುವಾಗ ಒಂದು ವಿಚಿತ್ರ ಮೌನ ಆವರಿಸಿಕೊಳ್ಳುತ್ತದೆ. ಸಾವು ಅಷ್ಟು ಶಕ್ತಿಶಾಲಿ.

ಆದರೆ, ಮುಂದೊಂದು ದಿನ ಸಾಯಲೇಬೇಕಾದ ನಾವು ಒಬ್ಬರ ನೋವಿನಲ್ಲಿ ಏಕೆ ನಮ್ಮ ಸಂತೋಷವನ್ನು ಕಾಣುತ್ತೇವೆ, ಅದೇಕೆ ಬರೀ ಮತ್ತೂಬ್ಬರನ್ನ ದೂರುವುದರಲ್ಲಿಯೇ ಕಾಲ ಕಳೆಯುತ್ತೇವೆ, ಏಕೆ ಕೆಲವೊಮ್ಮೆ ಮತ್ತೂಬ್ಬರ ಸೋಲನ್ನು ಸಂಭ್ರಮಿಸುತ್ತೇವೆ, ಅದೇಕೆ ದ್ವೇಷವನ್ನ ನಂಬುತ್ತೇವೆ? ನಮ್ಮ ದ್ವೇಷ ನಮ್ಮ ಸಾವಿನಲ್ಲಿ ಅಂತ್ಯವಾಗಬಹುದು. ಆದರೆ, ಪ್ರೀತಿ ನಾವು ಸತ್ತ ಮೇಲೂ ಉಳಿಯುತ್ತದೆ. ದ್ವೇಷದಿಂದ ಪಡೆದುಕೊಳ್ಳುವಂಥಾದ್ದು ಏನೂ ಇಲ್ಲ. ನಿಜವಾದ ಪ್ರೀತಿ ಯಾವತ್ತೂ ಸಾಯುವುದಿಲ್ಲ. ಅದೇನೇ ಇರಲಿ, ಸಾವಿನಷ್ಟು ಶಾಶ್ವತ ಬೇರಾವುದೂ ಇಲ್ಲ. ಸಾವು ಮಾತ್ರ ಶಾಶ್ವತ.

Advertisement

ಅಥಿಕ್‌ ಕುಮಾರ್‌, 
ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next