ಚಿಕ್ಕಮಗಳೂರು : ಮುಸ್ಲಿಮರಿಗೆ ವಕ್ಫ್ ಬೋರ್ಡ್ ಇದೆ, ಕ್ರಿಶ್ಚಿಯನ್ನರಿಗೆ ಅವರ ಬೋರ್ಡ್ ಇದೆ, ಅಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ, ಹಿಂದೂಗಳ ದೇವಾಲಯಕ್ಕೆ ಏಕೆ ಸರ್ಕಾರದ ಹಸ್ತಕ್ಷೇಪ ಇರಬೇಕು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಹಿಂದೂ ದೇವಾಲಯದ ಹಣವನ್ನ ಹಿಂದೂ ದೇವಾಲಯಕ್ಕೆ ಬಳಕೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು. ದೇವಾಲಯಗಳು ಪರಾವಲಂಬಿಯಾಗದೆ ನಡೆದುಕೊಂಡು ಹೋಗಬೇಕು. ಕೆಲವು ದೇವಸ್ಥಾನಗಳಿಗೆ ದೀಪ ಹಚ್ಚಲು ಕೊಡ ಸರಕಾರವನ್ನು ಕೇಳಬೇಕಾದಂತಹ ಪರಿಸ್ಥಿತಿ ಇದೆ ಎಂದರು.
ಯಾರೋ ಮೇಸೆಜ್ ಹಾಕಿದ್ದರು. ಕರೆಂಟ್ ಬಿಲ್‍ನಲ್ಲೂ ಮಸೀದಿ-ದೇವಸ್ಥಾನಕ್ಕೆ ಒಂದೊಂದು ರೇಟ್ ಎಂದು ಹೇಳಿದ್ದಾರೆ. ಸುಳ್ಳೋ-ಸತ್ಯವೋ ಎಂದು ಪರಿಶೀಲನೆ ಮಾಡಬೇಕು. ಸಚಿವ ಸುನಿಲ್ ಕುಮಾರ್ ಗೆ ಫೋನ್ ಮಾಡಿದೆ, ಅವರು ನಾಟ್ ರೀಚೆಬಲ್‍ನಲ್ಲಿ ಇದ್ದರು. ಪರ್ ಯೂನಿಟ್ ರೇಟ್ ಎಷ್ಟು ಬಳಸುತ್ತಾರೋ ಅಷ್ಟು, ಎಲ್ಲರಿಗೂ ಒಂದೇ ಇರಬೇಕು ಎಂದರು.
ದೇವಸ್ಥಾನಗಳು ಸಮಾಜದ ಸ್ವತ್ತು, ದೇಶಾದ್ಯಂತ ಸಮಾಜಕ್ಕೆ ವಾಪಸ್ ಕೊಡುವ ಕೆಲಸವಾಗಬೇಕು. ಭಕ್ತರು ದಾನ-ದತ್ತಿ ನೀಡಿದ್ದಾರೆ, ಭಾವನೆ ಬೆರೆಸಿ ಕಾಣಿಕೆ ಹಾಕಿದ್ದಾರೆ ಎಂದರು.
ಬ್ರಿಟಿಷರು ಹಿಂದೂ ದೇವಾಲಯದ ಆದಾಯಕ್ಕೆ ಕೈಹಾಕಿದಾಗ ಸರ್ಕಾರದ ಕಪಿಮುಷ್ಠಿಗೆ ಬಂತು ಎಂದರು.