Advertisement

ಚಿಂತೆ ಯಾತಕೋ ಮನುಜ…

09:39 AM Jan 23, 2020 | mahesh |

ಪ್ರೇಮಾರ ಮನಸ್ಸಿನಲ್ಲಿ – “ನನ್ನ ನಂತರ ಕುಟುಂಬದ ನೇತೃತ್ವ ವಹಿಸುವುದು ಯಾರು?’ ಎಂಬ ಚಿಂತೆ ಕಾಡುತ್ತಿತ್ತು. ಅಕ್ಕನ ನೋವನ್ನೆಲ್ಲಾ ತಾವೇ ಮಾನಸಿಕವಾಗಿ ಅನುಭವಿಸುತ್ತಿದ್ದುದರಿಂದ, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರತೊಡಗಿತು.

Advertisement

ಐವತ್ತೆರಡು ವರ್ಷದ ಹಿರಿಯಕ್ಕ ಪ್ರೇಮಾಗೆ ಕಳೆದ ಎರಡು ವರ್ಷಗಳಿಂದ ಊಟ ಸೇರುತ್ತಿಲ್ಲ. ಊಟ ಮಾಡಿದರೂ ಅಜೀರ್ಣವಾಗಿ, ವಾಂತಿ-ಭೇದಿ ಆಗುತ್ತದೆ. ಹತ್ತು ಹೆಜ್ಜೆ ಹಾಕಿದರೆ ಸುಸ್ತು ಅನಿಸುತ್ತದೆ. ಐವತ್ತೆರಡು ವರ್ಷಕ್ಕೇ ಇಷ್ಟೊಂದು ಸುಸ್ತಾದರೆ, ಮುಂದೆ ತನ್ನ ಗತಿ ಏನಪ್ಪಾ ಎಂದು ಅವರಿಗೆ ಕಾಡತೊಡಗಿದೆ.

ತಂದೆ-ತಾಯಿ ತೀರಿಕೊಂಡ ಮೇಲೆ, ಮನೆಯ ಜವಾಬ್ದಾರಿಯನ್ನೆಲ್ಲಾ ಪ್ರೇಮಾ ಹೊತ್ತಿದ್ದರು. ಮದುವೆಯಾಗುವ ಆಸೆ ಇದ್ದರೂ, ಒಳ್ಳೆ ಕಡೆಯಿಂದ ಗಂಡಿನ ಪ್ರಸ್ತಾಪಗಳು ಬಂದರೂ, ಮದುವೆಯಾಗದೆ, ವೈಯಕ್ತಿಕ ಆಸೆಗಳನ್ನೆಲ್ಲ ಬದಿಗೊತ್ತಿ, ಸಂಸಾರ ನಿರ್ವಹಣೆಗೆ ಮುಂದಾದರು. ಬೇರೆಯವರ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಂಡರು.

ಈಗ ಪ್ರೇಮಾಗೆ ಅವರ ಬಗ್ಗೆ ಚಿಂತೆಗಿಂತ, ಕ್ಯಾನ್ಸರ್‌ಗೆ ತುತ್ತಾಗಿರುವ ಅವರ ಅಕ್ಕನ ಬಗ್ಗೆಯೇ ಹೆಚ್ಚು ಯೋಚನೆ. ಭಾವ, ಬೇಜವಾಬ್ದಾರಿಯ ಮನುಷ್ಯ. ಅಕ್ಕನ ಬಗ್ಗೆ ಅನುಕಂಪವಾಗಲಿ/ ಸಂಯಮವನ್ನಾಗಲಿ ತೋರಿಸುತ್ತಿಲ್ಲ. ಜೊತೆಗೆ, ಮಗಳಿಗೆ ಮದುವೆ ಮಾಡುವ ಬಗ್ಗೆ ಮಾತೇ ಇಲ್ಲ. ಇನ್ನು, ತಮ್ಮನಿಗೆ ಬ್ಯಾಂಕಿನಲ್ಲಿ ಸಾಲ ಮಾಡಿ ಸ್ವ ಉದ್ಯೋಗ ಮಾಡಲು ಅಡಿಪಾಯ ಹಾಕಿಕೊಟ್ಟಿದ್ದರು. ವ್ಯವಹಾರದಲ್ಲಿ ಹಿನ್ನಡೆಯಾಗಿ, ಅವನಿಗೆ ಅವನದ್ದೇ ಚಿಂತೆ. ಮನೆಯ ಜವಾಬ್ದಾರಿಯ ಕಡೆ ಅವನು ಮುಖ ಮಾಡುವುದಿಲ್ಲ. ತಂದೆ-ತಾಯಿಯ ಅಗಲಿಕೆ ಬಾಧಿಸದಂತೆ ಇನ್ನಿಬ್ಬರು ತಂಗಿಯರನ್ನು ಅಕ್ಕರೆಯಿಂದ ಸಾಕಿದರು, ಓದಿಸಿದರು, ಕೆಲಸಕ್ಕೆ ಸೇರಿಸಿ, ಮದುವೆ ಮಾಡಿದ್ದರು. ಈಗ ತಂಗಿಯರಿಗೆ ಪ್ರೇಮಾ ಬಗ್ಗೆ ಕಾಳಜಿಯೇ ಇರಲಿಲ್ಲ.

ಮನುಷ್ಯರಲ್ಲಿ ಚಿಂತೆ ಸಹಜವಾದದ್ದೇ. ಆದರೆ, ಅದು ಮಿತಿ ಮೀರಿದರೆ generalized anxiety disorder ಆಗಿ ಪರಿವರ್ತನೆಗೊಳ್ಳುತ್ತದೆ. ಈ ಕಾರಣದಿಂದಲೇ ಪ್ರೇಮಾ ಅವರನ್ನು ವೈದ್ಯರು ನನ್ನ ಬಳಿ ಕಳಿಸಿದ್ದರು. ಮನಸ್ಸಿನಲ್ಲಿದ್ದ ಚಿಂತೆಯನ್ನು ದೂರ ಮಾಡಿ, ಚಿಂತನೆಗೆ ಒರೆಹಚ್ಚುವುದೇ ಚಿಕಿತ್ಸಾ ಮನೋವಿಜ್ಞಾನ.

Advertisement

ಪ್ರೇಮಾರ ಮನಸ್ಸಿನಲ್ಲಿ – “ನನ್ನ ನಂತರ ಕುಟುಂಬದ ನೇತೃತ್ವ ವಹಿಸುವುದು ಯಾರು?’ ಎಂಬ ಚಿಂತೆ ಕಾಡುತ್ತಿತ್ತು. ಇದು ಅನವಶ್ಯಕ ಚಿಂತೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಿದೆ. ಅವರು, ಅಕ್ಕನ ನೋವನ್ನೆಲ್ಲಾ ತಾವೇ ಮಾನಸಿಕವಾಗಿ ಅನುಭವಿಸುತ್ತಿದ್ದರು. ಈ ಪ್ರಕ್ರಿಯೆಯು ಅವರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ಪ್ರೇಮಾಗೆ ವಿವರಿಸಿದೆ. ಈ ಸಂದರ್ಭದಲ್ಲಿ ಪ್ರೇಮಾ ತಟಸ್ಥ ಮನೋಭಾವ ರೂಢಿಸಿಕೊಂಡರೆ ಮನಸ್ಸು ಹಗುರವಾದೀತು.

ಪ್ರೇಮಾ, ಅತಿಯಾದ ಜವಾಬ್ದಾರಿ ತೆಗೆದುಕೊಂಡಿದ್ದರಿಂದ, ಅವರ ಭಾವನಾಗಲಿ, ತಮ್ಮನಾಗಲಿ, ತಂಗಿಯರಾಗಲೀ ಸೂಕ್ಷ್ಮ ಸಂವೇದನೆಯನ್ನು ಬೆಳೆಸಿಕೊಳ್ಳಲಿಲ್ಲ. ಅದು, ಅವರು ಮತ್ತಷ್ಟು ಬೇಜವಾಬ್ದಾರಿ ಹೊಂದಲು ದಾರಿ ಮಾಡಿಕೊಟ್ಟಿತು. ಜೊತೆಗೆ, ಪ್ರೇಮಾ ಮೇಲೆ ಹೊರೆ/ಒತ್ತಡವೂ ಹೆಚ್ಚಿತು.

ಸಂಸಾರ ಎಂದ ಮೇಲೆ ಸವಾಲುಗಳು ಇದ್ದೇ ಇರುತ್ತದೆ. ಕುಟುಂಬದ ಸದಸ್ಯರಲ್ಲಿ ಸೂಕ್ಷ್ಮ ಸಂವೇದನೆಯನ್ನು ಬೆಳೆಸಿ. ಚಿಕ್ಕಪುಟ್ಟ ಜವಾಬ್ದಾರಿಯನ್ನು ಅವರಿಗೇ ನಿರ್ವಹಿಸಲು ಬಿಡಿ. ಕುಟುಂಬದ ಸದಸ್ಯರಿಗೆ ಸಮಸ್ಯೆ ಕಾಡುವ ಮುಂಚೆಯೇ ಸಹಾಯ ಮಾಡಬಾರದು. ಬಾಯಾರಿಕೆ ಆಗುವ ಮುಂಚೆಯೇ ನೀರು ಕುಡಿಸಿದರೆ, ಬಾಯಾರಿಕೆಯೂ ತಿಳಿಯುವುದಿಲ್ಲ. ನೀರಿನ ಮಹತ್ವವೂ ತಿಳಿಯುವುದಿಲ್ಲ.

ವಿ.ಸೂ: ಕಪ್ಪೆ ನೀರಿನಲ್ಲಿದ್ದ ಮಾತ್ರಕ್ಕೆ ಅದಕ್ಕೆ ಬಾಯಾರಿಕೆ ಆಗುವುದಿಲ್ಲವೇ? ನಿಮ್ಮ ವೈಯಕ್ತಿಕ ಆಸೆಗಳನ್ನು ಬಲಿಕೊಟ್ಟು ಇತರರ ಸೇವೆಗೆ ನಿಲ್ಲಬೇಡಿ. ದ್ವಂದ್ವದ ಬದುಕು ಸಾರ್ಥಕ ಜೀವನವಲ್ಲ. ಅದು ಚಿಂತೆಗೆ ನಾಂದಿಯಾಗುತ್ತದೆ ಅಷ್ಟೇ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next