ನವದೆಹಲಿ: ಜನತೆಗೆ ಕೇಂದ್ರದ ಮೇಲೆ ವಿಶ್ವಾಸವಿದೆ. ನಾನು ಕಳೆದ 5 ವರ್ಷದ ಹಿಂದೆ ನುಡಿದಿದ್ದ ಭವಿಷ್ಯ ಸತ್ಯವಾಗಿದೆ. ವಿಪಕ್ಷಗಳು ನನ್ನ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ದೇವರ ಆಶೀರ್ವಾದ ಎಂದು ಪರಿಗಣಿಸುತ್ತೇನೆ. ಆದರೆ ದೇಶದ ಜನತೆಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಇಲ್ಲ ಎಂಬುದು ದೇಶದ ಎಲ್ಲೆಡೆ ಸಾಬೀತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:Jayalalithaa ಸೀರೆ ಎಳೆಯಲಾಗಿತ್ತು: ಡಿಎಂಕೆ ವಿರುದ್ಧ ನಿರ್ಮಲಾ ಸೀತಾರಾಮನ್ ಕಿಡಿ
ಅವರು ಗುರುವಾರ(ಆಗಸ್ಟ್ 10) ವಿಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡುತ್ತಾ ಮಾತನಾಡಿದರು. 2018ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಿದ್ದೀರಿ. ಅಂದೇ ನಾನು ಹೇಳಿದ್ದೆ…ಈ ಬಹುಮತದ ಪರೀಕ್ಷೆ ನಮ್ಮ ಸರ್ಕಾರಕ್ಕಲ್ಲ, ಅದು ನಿಮಗೆ (ವಿಪಕ್ಷಗಳಿಗೆ) ಎಂದು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ, ಎನ್ ಡಿಎ ಮೈತ್ರಿಕೂಟಕ್ಕೆ ಭರ್ಜರಿ ಬಹುಮತ ನೀಡುವ ಮೂಲಕ ವಿಪಕ್ಷಗಳ ಮೇಲೆ ವಿಶ್ವಾಸ ಇಲ್ಲ ಎಂಬುದನ್ನು ಸಾಬೀತುಪಡಿಸಿದರು ಎಂದು ಪ್ರಧಾನಿ ಟೀಕಿಸಿದರು.
ಕಳೆದ 20 ವರ್ಷಗಳಿಂದ ನೀವು ನನ್ನ ಬೈಯುತ್ತಲೇ ಇದ್ದೀರಿ. ನಿಮ್ಮ ಎಲ್ಲಾ ಬೈಗುಳ, ಅಸಭ್ಯ ಭಾಷೆ ಎಲ್ಲವನ್ನೂ ವರ ಎಂದೇ ಭಾವಿಸುತ್ತೇನೆ. 2024ರಲ್ಲಿಯೂ ಕೂಡಾ ಭಾರತೀಯ ಜನತಾ ಪಕ್ಷ ಎಲ್ಲಾ ದಾಖಲೆಗಳನ್ನು ಮುರಿದು ಅಧಿಕಾರಕ್ಕೆ ಏರಲಿದೆ. ಆ ನಿಟ್ಟಿನಲ್ಲಿ 2028ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸುವ ಅವಕಾಶ ಸಿಗಲಿ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ.
ನಿಮಗೆ ದೇಶದ ಬಡವರ ಹಸಿವಿನ ಬಗ್ಗೆ ಚಿಂತೆ ಇಲ್ಲ. ನಿಮಗೆ ಕೇವಲ ಅಧಿಕಾರದ ಹಪಾಹಪಿ ಮಾತ್ರ. ಈ ದೇಶದ ಯುವ ಜನತೆ ಬಗ್ಗೆಯೂ ಕಾಳಜಿ ಇಲ್ಲಾ. ಆದರೆ ನಿಮ್ಮ ರಾಜಕೀಯ ಅಧಿಕಾರದ ಬಗ್ಗೆ ಮಾತ್ರ ಆಲೋಚಿಸುತ್ತಿದ್ದೀರಿ ಎಂದು ಪ್ರಧಾನಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.
“ವಿಪಕ್ಷಗಳು ಫೀಲ್ಡಿಂಗ್ ಮಾಡಿದರೂ ಕೂಡಾ ನಾವು ಮಾತ್ರ ಫೋರ್, ಸಿಕ್ಸರ್ ಗಳನ್ನು ಬಾರಿಸುತ್ತಲೇ ಇದ್ದೇವೆ. ನೀವು ನೋ ಬಾಲ್ ಹಾಕುತ್ತಿದ್ದೀರಿ ಎಂದು ವ್ಯಂಗ್ಯವಾಡಿದ ಪ್ರಧಾನಿ, 2018ರಲ್ಲಿಯೇ ನೀವು ಅವಿಶ್ವಾಸ ನಿರ್ಣಯ ಮಂಡಿಸಿದ್ದಾಗ ಹೇಳಿದ್ದೆ. ನೀವು ಪೂರ್ವ ತಯಾರಿ ಮಾಡಿಕೊಂಡು ಬನ್ನಿ ಎಂದು…ನಾನು ನಿಮಗೆ ಐದು ವರ್ಷ ಕಾಲಾವಧಿ ನೀಡಿದ್ದೆ…ಆದರೆ ನೀವು ತಯಾರಿ ಮಾಡಿಕೊಂಡು ಬಂದೇ ಇಲ್ಲಾ…ಎಂತಹ ದಾರಿದ್ರ್ಯ ನಿಮ್ಮದು ಎಂದು ಚಾಟಿ ಬೀಸಿದರು.
ದೇಶದ ಕಡು ಬಡತನ ಕಡಿಮೆಯಾಗಿದೆ ಎಂದು ಐಎಂಎಫ್ ವರದಿ ನೀಡಿದೆ. ಕೆಲವರು ನಮ್ಮ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ವಿಶ್ವದಲ್ಲಿ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಜಲ್ ಜೀವನ್ ಮಿಷನ್ ಯೋಜನೆಯಡಿ 4 ಲಕ್ಷ ಜನರ ಜೀವ ಉಳಿದಿದೆ. ಅವಿಶ್ವಾಸ ಅನ್ನೋದು ವಿಪಕ್ಷಗಳ ರಕ್ತದಲ್ಲೇ ಇದೆ. ಬೇರೆ ದಿಕ್ಕಿನ ಕಡೆ ಕೊಂಡೊಯ್ಯುವುದು ಇವರ ಕೆಲಸವಾಗಿದೆ. ವಿಪಕ್ಷಗಳ ಎಲ್ಲಾ ರೀತಿಯ ಪ್ರಚೋದನೆ ವಿಫಲವಾಗಿದೆ. ಕಾಂಗ್ರೆಸ್ ಗೆ ದೃಷ್ಟಿಕೋನವೂ ಇಲ್ಲ, ನಾಯಕತ್ವವೂ ಇಲ್ಲ. ಕಠಿಣ ಪರಿಶ್ರಮದ ಮೇಲೆ ಕಾಂಗ್ರೆಸ್ ಗೆ ನಂಬಿಕೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.