Advertisement

ಟುಡೇ ಸ್‌ ಹೋಮ್‌ ವರ್ಕ್‌: ನೀವೇಕೆ ಅಡುಗೆ ಮಾಡಬಾರದು?

02:29 PM May 05, 2020 | mahesh |

ಹೆಂಡತಿಯೋ, ಅಮ್ಮನೋ ರುಚಿರುಚಿಯಾಗಿ ಅಡುಗೆ, ತಿಂಡಿ ಮಾಡಿಹಾಕಿದ ನಂತರ- “ಅಯ್ಯೋ, ಖಾರ ಜಾಸ್ತಿ, ಉಪ್ಪೇ ಹಾಕಿಲ್ಲ. ದೋಸೆ, ಚಿಕ್ಕಣ್ಣನ ಹೋಟೆಲ್‌ ದೋಸೆ ಥರ ಇಲ್ಲ,
ಸಾಂಬಾರ್‌ ವಿದ್ಯಾರ್ಥಿ ಭವನ್‌ ರೀತಿ ಇಲ್ಲ’- ಹೀಗೆಲ್ಲ ರುಚಿವಿಮರ್ಶೆ ಮಾಡುತ್ತೀರ, ಅಲ್ವೇ? ಮನೆಯಲ್ಲಿ ಇದ್ದವರು ಕೂಡ, ಈ ಮಾತು ಕೇಳಿ ಬೇಜಾರಾದರೂ- “ಪಾಪ, ಮಗ/ ಗಂಡ ಹೊರಗೆ ದುಡಿದು ಬರ್ತಾನೆ. ಏನೋ ಹೇಳ್ತಾನೆ ಬಿಡಿ’ ಅಂತ ಸಹಿಸಿಕೊಂಡಿರುತ್ತಾರೆ. ನೀವು ಎಂದಾದರೂ ಸೌಟು ಹಿಡಿದು ನಳಮಹರಾಜರಾಗಿರುವ ಉದಾಹರಣೆ ಇದೆಯೇ? ಇಲ್ಲ ಅನ್ನುವುದಾದರೆ, ಈಗ ಆ ಕೆಲಸ ಮಾಡಿ. ಜೀವನ ಪರ್ಯಂತ ಅವರು ಮಾಡಿ ಹಾಕಿದ್ದನ್ನು ನೀವು ತಿನ್ನುತ್ತಿದ್ದಿರಲ್ಲ… ಈಗ ಅವರನ್ನು ಕೂಡ್ರಿಸಿ, ನೀವು ಮಾಡಿ ಹಾಕಿ ನೋಡೋಣ.

Advertisement

ಅಡುಗೆ ಮನೆಯಲ್ಲಿ ಬೇಯೋದು, ಕಿರಿಕಿರಿ ಮಾಡೋ ಬಾಸ್‌ ಎದುರಿಗೆ ನಿಲ್ಲೋದಕ್ಕಿಂತ ಕಷ್ಟ. ಲಾಕ್‌ಡೌನ್‌ ಸಮಯದಲ್ಲಿ, ದಿನಕ್ಕೆ ಒಂದು ಹೊತ್ತು ಅಡುಗೆ ಮನೆಯ ಕೆಲಸ ಇಟ್ಟುಕೊಳ್ಳಿ. ಒಂದುವೇಳೆ, ಅಡುಗೆ ಮಾಡುವ ವಿಚಾರದಲ್ಲಿ ನೀವು ಅನಕ್ಷರಸ್ಥರಾದರೆ, ಅಡುಗೆ ಮಾಡೋರಿಗೆ ಸಹಾಯಕರಾಗಬಹುದು. ಆ ಸಂದರ್ಭದಲ್ಲಿಯೇ, ಹೇಗೆ ಅಡುಗೆ ಮಾಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳಿ. ಅಡುಗೆ ಮಾಡಲು ಗೊತ್ತಿದ್ದರೆ, ಒಂದು ಹೊತ್ತಿನ ಅಡುಗೆ ಕೆಲಸವನ್ನು ವಹಿಸಿಕೊಳ್ಳಿ. ಇದರಿಂದ ಮನೆಯವರಿಗೂ ಸ್ವಲ್ಪ ಶ್ರಮ ಕಡಿಮೆಯಾಗುತ್ತದೆ. ಮೊದಲ ಬಾರಿ ಅಡುಗೆ ಮಾಡುವಾಗ, ನೀವು ದೊಡ್ಡ ಚೆಫ್ ಅಂತೆಲ್ಲ ಅಂದುಕೊಳ್ಳಬೇಡಿ. ನೀವು ಪಂಟರ್‌ ಆಗಿರೋದು, ಆಫೀಸ್‌ ಕೆಲಸದಲ್ಲಿ. ಮನೆಯಲ್ಲಲ್ಲ. ಹೀಗಾಗಿ, ಉಪ್ಪು ಜಾಸ್ತಿನೋ, ಹುಳಿ ಕಡಿಮೆಯೋ ಆಗಬಹುದು. ಅಡುಗೆ ಮಾಡೋದು, ಸಿನಿಮಾ ಮಾಡೋದು ಎರಡೂ ಒಂದೇ ಅನ್ನೋದು ತಿಳಿದಿರಲಿ.

ಏಕೆಂದರೆ, ಎರಡಕ್ಕೂ ವಿಮರ್ಶೆಗಳೇ ಜಾಸ್ತಿ. ಒಂದು ಪಕ್ಷ ಹಿಂಜರಿಕೆಯಾದರೆ ಚಿಂತೆ ಇಲ್ಲ. ಕಾಫಿ, ಟೀ, ಕಷಾಯ ಮಾಡುವ ಮೂಲಕ ಅಡುಗೆ ಮನೆಗೆ ಕಾಲಿಡಿ. ಒಂದು ಅಡುಗೆ ಮಾಡುವ ರುಚಿ ಸಿಕ್ಕರೆ, ಅದರ ಜಗತ್ತೇ ಬೇರೆ.

Advertisement

Udayavani is now on Telegram. Click here to join our channel and stay updated with the latest news.

Next