Advertisement

ದಿಗ್ಬಂಧನದಲ್ಲಿ ರಷ್ಯಾ; ಉಕ್ರೇನ್‌ ಮೇಲೆ ದಾಳಿಗೆ ಸಜ್ಜು; ಐರೋಪ್ಯ ದೇಶಗಳಿಂದ ನಿರ್ಬಂಧ

01:58 AM Feb 24, 2022 | Team Udayavani |

ಮಾಸ್ಕೋ/ವಾಷಿಂಗ್ಟನ್‌: ಉಕ್ರೇನ್‌ಗೆ ಸೇರಿದ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ರಷ್ಯಾ ಘೋಷಿಸುತ್ತಿದ್ದಂತೆ, ಅಮೆರಿಕ  ಸಹಿತ ಐರೋಪ್ಯ ದೇಶಗಳು ರಷ್ಯಾದ ಮೇಲೆ ದಿಗ್ಬಂಧನ ಹೇರಿವೆ.

Advertisement

ಉಕ್ರೇನ್‌ನ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ದೊನೆಸ್ಕ್ ಮತ್ತು ಲುಹಾನ್ಸ್ಕ್ ಗಳನ್ನು ಸ್ವತಂತ್ರ ಪ್ರದೇಶಗಳು ಎಂದು ರಷ್ಯಾ ಘೋಷಿಸಿರುವ ಕ್ರಮಕ್ಕೆ ಎಲ್ಲೆಡೆ  ಆಕ್ಷೇಪ ವ್ಯಕ್ತವಾಗಿದೆ. ಉಕ್ರೇನ್‌ ಅನ್ನು ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ರಷ್ಯಾ ತೆಗೆದುಕೊಂಡ ಮೊದಲ ಕ್ರಮ ಎಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ಅಮೆರಿಕ, ಕೆನಡಾ, ಬ್ರಿಟನ್‌, ಆಸ್ಟ್ರೇಲಿಯಾ, ಜಪಾನ್‌  ಹಾಗೂ ಐರೋಪ್ಯ ದೇಶಗಳು ರಷ್ಯಾ ವಿರುದ್ಧ  ದಿಗ್ಬಂಧನ ಹೇರಿವೆ.

ಈ ಮಧ್ಯೆ ರಷ್ಯಾ ಗಡಿಗೆ ಹೊಂದಿಕೊಂಡಂತಿರುವ ನ್ಯಾಟೋ ದೇಶಗಳಿಗೆ ಅಮೆರಿಕ ಇನ್ನಷ್ಟು ಸೇನೆಯನ್ನು ಕಳುಹಿಸಿದೆ. ರಷ್ಯಾ ಸೇನೆಯೂ ಪ್ರತ್ಯೇಕತಾವಾದಿಗಳ ವಶದಲ್ಲಿರುವ ಉಕ್ರೇನ್‌ ಭಾಗಕ್ಕೆ ಪ್ರವೇಶಿಸಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಉಕ್ರೇನ್‌ನಿಂದ ರಷ್ಯಾ ಅಧಿಕಾರಿಗಳು ವಾಪಸ್‌
ಯುದ್ಧದ ಭೀತಿ ನಡುವೆಯೇ ರಷ್ಯಾ ಉಕ್ರೇನ್‌ನಲ್ಲಿರುವ ರಾಯಭಾರ ಕಚೇರಿ ಸಿಬಂದಿಯನ್ನು ವಾಪಸ್‌ ಕರೆಸಿಕೊಳ್ಳುತ್ತಿದೆ. ಇನ್ನು ಮುಂದೆ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿರುವ ರಾಯಭಾರ ಕಚೇರಿ ಮೇಲೆ ರಷ್ಯಾ ಧ್ವಜ ಹಾರಾಟ ನಡೆಸುವುದಿಲ್ಲ. ಹಾಗೆಯೇ, ಉಕ್ರೇನ್‌ನಲ್ಲಿರುವ ಎಲ್ಲ ರಷ್ಯನ್ನರು ಕೂಡಲೇ ಸ್ವದೇಶಕ್ಕೆ ಮರಳಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.

ಏನೇನು ದಿಗ್ಬಂಧನ?
ರಷ್ಯಾ ಮೇಲೆ ದಿಗ್ಬಂಧನ ಹೇರಿದ ಮೊದಲ ರಾಷ್ಟ್ರವಾಗಿ ಅಮೆರಿಕ ಗುರುತಿಸಿಕೊಂಡಿದೆ. ಇದು ರಷ್ಯಾದ ವಿಇಬಿ ಮತ್ತು ಪ್ರೋಮೊ ಬ್ಯಾಂಕುಗಳ ಮೇಲೆ ನಿರ್ಬಂಧ ಹೇರಿದೆ. ಈ ಬ್ಯಾಂಕುಗಳು ಅಮೆರಿಕ ಮತ್ತು ಐರೋಪ್ಯ ದೇಶಗಳ ಮಾರುಕಟ್ಟೆಯಲ್ಲಿ ಯಾವುದೇ  ವಹಿವಾಟು ನಡೆಸದಂತೆ ತಡೆ ಹಿಡಿದಿದೆ. ಈ ಎರಡೂ ಬ್ಯಾಂಕುಗಳು ರಷ್ಯಾ ಸರಕಾರ ಮತ್ತು ಸೇನೆಗೆ ಹತ್ತಿರವಾಗಿವೆ ಎಂಬ ಕಾರಣಕ್ಕಾಗಿ  ನಿರ್ಬಂಧ ವಿಧಿಸಲಾಗಿದೆ. ಜತೆಗೆ ಅಮೆರಿಕದಲ್ಲಿರುವ ಈ ಬ್ಯಾಂಕುಗಳಿಗೆ ಸೇರಿದ ಎಲ್ಲ ಆಸ್ತಿಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement

ಬ್ರಿಟನ್‌ ದೇಶವು ರಷ್ಯಾದ ಐದು ಬ್ಯಾಂಕು ಮತ್ತು ಮೂವರು ಬಿಲಿಯ ನೇರ್‌ಗಳ ಮೇಲೆ ನಿರ್ಬಂಧ ಹಾಕಿದೆ. ಲಂಡನ್‌ನಲ್ಲಿ ರಷ್ಯಾದ ಸಾವರಿನ್‌ ಬಾಂಡ್‌ ಮಾರಾಟವನ್ನೂ ನಿಷೇಧಿಸಿದೆ.  ಜರ್ಮನಿಯು ನಾರ್ಡ್‌ ಸ್ಟ್ರೀಮ್‌ 2 ಗ್ಯಾಸ್‌ ಪೈಪ್‌ಲೈನ್‌ ಯೋಜನೆಯನ್ನು ನಿಲ್ಲಿಸಿದೆ.

ಉಕ್ರೇನ್‌ ಕೂಡ  ರಷ್ಯಾದ 351 ಮಂದಿ ಪ್ರಮುಖರ ಮೇಲೆ ನಿಷೇಧ ಹೇರಿದೆ. ರಷ್ಯಾದವರು ಉಕ್ರೇನ್‌ ಪ್ರವೇಶಿಸುವಂತಿಲ್ಲ, ಯಾವುದೇ ಆಸ್ತಿ ಮೇಲೆ ಅಧಿಕಾರ ಚಲಾಯಿಸುವಂತಿಲ್ಲ, ವ್ಯಾಪಾರ ನಡೆಸುವಂತಿಲ್ಲ ಎಂದು ಹೇಳಿದೆ.

ಐರೋಪ್ಯ ಒಕ್ಕೂಟವು 351 ಮಂದಿ ರಷ್ಯಾದ ರಾಜಕಾರಣಿಗಳ ಮೇಲೆ ದಿಗ್ಬಂಧನ ಹೇರಿದೆ. ಇವರು ಉಕ್ರೇನ್‌ನ ಎರಡು ಭಾಗಗಳಿಗೆ ಸ್ವಾತಂತ್ರ್ಯ ನೀಡುವುದಕ್ಕೆ ಮತ ಹಾಕಿದ್ದರು. ಅಲ್ಲದೆ, ರಷ್ಯಾದ 27 ಅಧಿಕಾರಿಗಳು, ರಕ್ಷಣ ಮತ್ತು ಬ್ಯಾಂಕಿಂಗ್‌ ಅಧಿಕಾರಿಗಳ ವಿರುದ್ಧವೂ ನಿರ್ಬಂಧ ಹೇರಿದೆ.  ಜಪಾನ್‌ನಲ್ಲಿ ರಷ್ಯಾದ ಸಾವರಿನ್‌ ಬಾಂಡ್‌ ಮಾರಾಟವನ್ನೂ ನಿರ್ಬಂಧಿಸಲಾಗಿದೆ.

ಬೆಲಾರಸ್‌ನಲ್ಲಿ  ರಷ್ಯಾ ಸೇನಾಪಡೆ ಹೆಚ್ಚಳ
ಉಕ್ರೇನ್‌ ಗಡಿಯ ಬೆಲಾರಸ್‌ನಲ್ಲಿ ರಷ್ಯಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಕಂಪೆನಿ ಮ್ಯಾಕ್ಸರ್‌ ತನ್ನ  ಉಪಗ್ರಹ ಚಿತ್ರಗಳ ಮೂಲಕ ತಿಳಿಸಿದೆ.  100 ಮಿಲಿಟರಿ ವಾಹನಗಳು, ಸೇನಾಪಡೆಯ ಟೆಂಟ್‌ಗಳು  ಚಿತ್ರದಲ್ಲಿವೆ.  ಒಂದು ತಾತ್ಕಾಲಿಕ ಸೇನಾ ಆಸ್ಪತ್ರೆಯನ್ನೂ ನಿರ್ಮಿಸಲಾಗಿದೆ ಎಂದು ತಿಳಿಸಿದೆ.

ಯುದ್ಧ ತಪ್ಪಿಸಲು ಮೂರು ಷರತ್ತು
ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ಪರಿಸ್ಥಿತಿಯನ್ನು ಶಾಂತಗೊಳಿಸುವುದಕ್ಕಾಗಿ ಮೂರು ಷರತ್ತು ವಿಧಿಸಿದ್ದಾರೆ. ಕ್ರಿಮಿಯಾವನ್ನು ರಷ್ಯಾದ ಪ್ರದೇಶವೆಂದು ಗುರುತಿಸಬೇಕು; ಕಪ್ಪು ಸಮುದ್ರದ ಪೆನಿನ್ಸುಲಿಯಾವನ್ನು ರಷ್ಯಾದ್ದೆಂದು ಹೇಳಬೇಕು ಮತ್ತು ಉಕ್ರೇನ್‌ ನ್ಯಾಟೋಗೆ ಸೇರಬಾರದು ಎಂಬ ಷರತ್ತು ಇಟ್ಟಿದ್ದಾರೆ.  ಈ ಷರತ್ತುಗಳನ್ನು ಉಕ್ರೇನ್‌ ಮತ್ತು ಪಾಶ್ಚಿಮಾತ್ಯ ದೇಶಗಳು ತಿರಸ್ಕರಿಸಿವೆ.

ನಿರ್ಬಂಧಕ್ಕೆ ಚೀನ ಟೀಕೆ
ಆರಂಭದಿಂದಲೂ ರಷ್ಯಾ ಬೆನ್ನಿಗೆ ನಿಂತಿರುವ ಚೀನ, ವಿವಿಧ ದೇಶಗಳ ದಿಗ್ಬಂಧನವನ್ನು ಟೀಕಿಸಿದ್ದು, ಇಂಥ ಕ್ರಮಗಳಿಂದ  ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಹೇಳಿದೆ. ಚೀನದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಈ ಬಗ್ಗೆ ಮಾತನಾಡಿದ್ದು, ಮೊದಲಿನಿಂದಲೂ ಇಂಥ ದಿಗ್ಬಂಧನಗಳನ್ನು ಚೀನ ವಿರೋಧಿಸುತ್ತದೆ ಎಂದು ಹೇಳಿದ್ದಾರೆ. 2011ರಿಂದಲೂ ಅಮೆರಿಕ, ರಷ್ಯಾ ಮೇಲೆ ದಿಗ್ಬಂಧನ ಹೇರುತ್ತಲೇ ಇದೆ. ಇದರಿಂದ  ಏನನ್ನಾದರೂ ಸಾಧಿಸಲಾಗಿದೆಯೇ ಎಂದು  ಪ್ರಶ್ನಿಸಿದ್ದಾರೆ.

ಉಕ್ರೇನ್‌ನಿಂದ ವಿದ್ಯಾರ್ಥಿಗಳು ವಾಪಸ್‌
ಯುದ್ಧದ ಆತಂಕ ಕವಿದಿರುವ ಉಕ್ರೇನ್‌ನಿಂದ ಹೊರಟಿದ್ದ ಭಾರತೀಯ ವಿದ್ಯಾರ್ಥಿಗಳು ಹೊಸದಿಲ್ಲಿಗೆ ಆಗಮಿಸಿದ್ದಾರೆ. ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೋಗಿದ್ದ ಬಹುತೇಕ ವಿದ್ಯಾರ್ಥಿಗಳು ಮಂಗಳವಾರ ಮಧ್ಯರಾತ್ರಿಯೇ ಬಂದರು.

Advertisement

Udayavani is now on Telegram. Click here to join our channel and stay updated with the latest news.

Next