Advertisement

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

10:37 AM May 23, 2022 | Team Udayavani |

ಹೊಸದಿಲ್ಲಿ: ಅಕ್ಟೋಪಸ್‌ ಹೆಸರನ್ನು ಕೇಳದವರು ಯಾರು? ಇದಕ್ಕೆ ಎಂಟು ಕಾಲುಗಳು, ಪರಸ್ಪರ ಕೂಡಿದ ಅನಂತರ ತಮ್ಮನ್ನು ತಾವೇ ತಿಂದುಕೊಳ್ಳುತ್ತವೆ… ಹೀಗೆ ನೂರಾಯೆಂಟು ಸಂಗತಿಗಳು ನಮ್ಮೆದುರಿಗಿವೆ. ಆದರೆ ಅವು ಹೀಗೇಕೆ ಮಾಡುತ್ತವೆ? ಲೈಂಗಿಕ ಕ್ರಿಯೆ ಮುಗಿದ ಅನಂತರ ತಮ್ಮನ್ನೇ ತಾವು ಹಿಂಸಿಸಿಕೊಳ್ಳುವುದೇಕೆ? ಈ ಪ್ರಶ್ನೆಗೆ ವಿಜ್ಞಾನಿಗಳು ಇದೀಗ ಒಂದುಹಂತದ ಉತ್ತರ ಕಂಡುಕೊಂಡಿದ್ದಾರೆ. ಇದು ಕರೆಂಟ್‌ ಬಯಾಲಜಿ ಅನ್ನುವ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

Advertisement

ಸಾಮಾನ್ಯವಾಗಿ ಅಕ್ಟೋಪಸ್‌ ಆಯಸ್ಸು 3ರಿಂದ 5 ವರ್ಷ. ಯೌವನಕ್ಕೆ ಬಂದ ಕೂಡಲೇ ಪರಸ್ಪರ ಲೈಂಗಿಕ ಕ್ರಿಯೆ ನಡೆಸುವ ಮನಸ್ಸು ಗಂಡು-ಹೆಣ್ಣು ಅಕ್ಟೋಪಸ್‌ಗಳಿರುತ್ತದೆ. ಆದರೆ ಈ ಕ್ರಿಯೆ ಮುಗಿದ ಕೂಡಲೇ ಹೆಣ್ಣು ಅಕ್ಟೋಪಸ್‌ನ ಸ್ವಭಾವವೇ ಬದಲಾಗುತ್ತದೆ. ಕೂಡಲೇ ಗಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ವಿಫ‌ಲವಾದರೆ ಅದನ್ನು ಹೆಣ್ಣು ತಿಂದು ಮುಗಿಸುತ್ತದೆ. ಇದಕ್ಕೆ ಕಾರಣ ಹೆಣ್ಣಿನ ಶರೀರದಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಗಳು! ಒಂದು ವೇಳೆ ತಪ್ಪಿಸಿಕೊಂಡರೂ ಗಂಡು ಅಕ್ಟೋಪಸ್‌ ಕೆಲವೇ ತಿಂಗಳು ಬದುಕಿರುತ್ತದೆ. ಇದಕ್ಕೆ ಕಾರಣ ಗೊತ್ತಾ? ಅದರ ಕಣ್ಣಿನ ಬಳಿಯಲ್ಲಿರುವ ಗ್ರಂಥಿಯಿಂದ ಒಂದು ಹಾರ್ಮೋನ್‌ ಹೊರಬರುತ್ತದೆ. ಆ ಕಾರಣದಿಂದ ಅದು ತನ್ನ ಆಯಸ್ಸನ್ನು ಕಳೆದುಕೊಳ್ಳುತ್ತದೆ.

ಇನ್ನು ತಾಯಿ ಅಕ್ಟೋಪಸ್‌ ಕೆಲವು ತಿಂಗಳು ಸಮುದ್ರ ದಾಳದಲ್ಲಿ ಸುರಕ್ಷಿತ ಸ್ಥಳದಲ್ಲಿ ಮೊಟ್ಟೆಯಿಡುತ್ತದೆ. ಮೊಟ್ಟೆಯಿಡುವಾಗ ಅದರ ಶರೀರದಲ್ಲಿ ಮೂರು ರೀತಿಯ ರಾಸಾಯನಿಕಗಳು (ಪ್ರಗ್ನೆನೊಲೋನ್‌, ಪ್ರಾಜೆಸ್ಟೆರೋನ್‌, ಡೀಹೈಡ್ರೊಕೊಲೆಸ್ಟೆರಾಲ್‌) ಉತ್ಪತ್ತಿಯಾಗುತ್ತವೆ. ಇದರಿಂದ ಅದು ತನ್ನನ್ನು ತಾನೇ ತಿಂದುಕೊಳ್ಳಲು ಆರಂಭಿಸುತ್ತದೆ. ಇದು ತಗ್ಗಿದ ಕೂಡಲೇ ಅದು ಶಾಂತವಾಗುತ್ತದೆ. ವಿಶೇಷವೇನು ಗೊತ್ತಾ? ಮಾಮೂಲಿ ತಳಿಯ ತಾಯಿ ಅಕ್ಟೋಪಸ್‌ ಕಾವುಕೊಟ್ಟು ಮೊಟ್ಟೆಯಿಡಲು ಕನಿಷ್ಠ 50 ದಿನ ತೆಗೆದುಕೊಂಡರೆ, ಇನ್ನು ಕೆಲವು ವಿಶೇಷ ತಳಿಗಳು 53 ತಿಂಗಳು ಅರ್ಥಾತ್‌ 4 ವರ್ಷ ಸಮಯವನ್ನು ಮರಿಮಾಡಲು ತೆಗೆದುಕೊಳ್ಳುತ್ತವೆ. ಅನಂತರ ತಾಯಿ ಅಕ್ಟೋಪಸ್‌ ಸಾವನ್ನಪ್ಪುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next