ಅಹಮದಾಬಾದ್: ಹಿಂದುತ್ವದ ಅಸಲಿ ಬೆಂಬಲಿಗ ಪಕ್ಷ ಕಣ್ಮುಂದೆಯೇ ಇರುವಾಗ ಜನತೆಯೇಕೆ ಅಸಲಿಯನ್ನು ಹೋಲುವ ಪಕ್ಷದತ್ತ ಹೋಗಬೇಕು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಶ್ನೆ ಮಾಡಿದ್ದಾರೆ. ಸೂರತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಕಾಲೆಳೆದಿದ್ದು ಹೀಗೆ.
ಆನಂತರ, ಈ ಹಿಂದಿದ್ದ ಯುಪಿಎ ಸರಕಾರದ ವಿರುದ್ಧ ಆರೋಪ ಮಾಡಿದ ಅವರು, 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಇದ್ದ 10 ವರ್ಷಗಳ ಯುಪಿಎ ಸರಕಾರ, ದೇಶ ಕಂಡ ಅತ್ಯಂತ ಭ್ರಷ್ಟ ಸರಕಾರ. ಆ ಸರಕಾರಕ್ಕೆ ನಾಯಕನೇ ಇರಲಿಲ್ಲ. ಪ್ರಧಾನಿ ಹುದ್ದೆಯಲ್ಲಿ ಹೆಸರಿಗಷ್ಟೇ ಒಬ್ಬ ವ್ಯಕ್ತಿಯಿದ್ದರು. ಆದರೆ, ಅವರಿಗೆ ಪ್ರಧಾನಿಗಿರಬೇಕಾದ ಯಾವುದೇ ಅಧಿಕಾರ ಇರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಲೆಕ್ಕಾಚಾರ: 2012ರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗಿಂತ ಶೇ.9ರಷ್ಟು ಮತಗಳ ಕೊರತೆಯನ್ನು ಕಾಂಗ್ರೆಸ್ ಹೊಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ಅದನ್ನು ಗಳಿಸುವ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ. ಕಳೆದ ಹಣಾಹಣಿಯಲ್ಲಿ, ಬಿಜೆಪಿ ಶೇ. 47.85ರಷ್ಟು ಮತ ಗಳಿಸಿದ್ದರೆ, ಕಾಂಗ್ರೆಸ್ ಶೇ. 38.93ರಷ್ಟು ಮತ ಗಳಿಸಿತ್ತು. ಅಂದರೆ, ಬಿಜೆಪಿಗಿಂತ ಶೇ.9ರಷ್ಟು ಮತಗಳ ಹಿನ್ನಡೆ ಗಳಿಸಿತ್ತು. ಈ ಬಾರಿ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರು ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ. ಇನ್ನು, ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದು, ಕಳೆದ ಬಾರಿ ಮತಗಳಿಗಿಂತ ಹೆಚ್ಚಿನ ಮತಗಳನ್ನು ಪಡೆಯುವ ವಿಶ್ವಾಸವನ್ನು ಕಾಂಗ್ರೆಸ್‌ನಲ್ಲಿ ತುಂಬಿದೆ.
ದಿನಕ್ಕೊಂದು ಪ್ರಶ್ನೆ: ಪ್ರಧಾನಿ ಮೋದಿ ವಿರುದ್ಧ ತಾವು ಆರಂಭಿಸಿರುವ “ದಿನಕ್ಕೊಂದು ಪ್ರಶ್ನೆ’ ಮಾಲಿಕೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಶಿಕ್ಷಣಕ್ಕೆ ಅನುದಾನ ನೀಡುವ ವಿಚಾರದಲ್ಲಿ ಗುಜರಾತ್ ದೇಶದಲ್ಲಿ 26ನೇ ಸ್ಥಾನ ಹೊಂದಿದೆ. ರಾಜ್ಯದ ಶಾಲೆಗಳನ್ನು ವಾಣಿಜ್ಯೀಕರಣಗೊಳಿಸಿ, ವಿದ್ಯಾರ್ಥಿಗಳ ಮೇಲೆ ದುಬಾರಿ ಶುಲ್ಕ ಹೇರಲಾಗಿದೆ. ಹೀಗಾದರೆ, ನವ ಭಾರತದ ಕನಸು ಹೇಗೆ ನನಸಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.
“ಅಮಾನ್ಯದಿಂದ ಲಾಭವಾಗಿದ್ದು ಚೀನಗೆ’
ಪ್ರಧಾನಿ ಮೋದಿಯವರ ಅಪನಗದೀ ಕರಣ ನಿರ್ಧಾರದಿಂದ ಹೆಚ್ಚು ಅನುಕೂಲ ವಾಗಿದ್ದು ಚೀನಾಕ್ಕೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ. ಅಪನಗದೀಕರಣ ಸಂದರ್ಭದಲ್ಲಿ ಚೀನಾದ ವಸ್ತುಗಳನ್ನು ಹಿಂದೆಂದೂ ಕಾಣದ ಮಟ್ಟಕ್ಕೆ ಆಮದು ಮಾಡಿಕೊಳ್ಳಲಾಗಿದೆ ಎಂದರು. ಅಪನಗದೀಕರಣದ ನಿರ್ಧಾರವನ್ನು ಮತ್ತಷ್ಟು ಟೀಕಿಸಿದ ಅವರು, “”ಅಪನಗದೀಕರಣದಿಂದ ಬಡವರು ಸಂಕಷ್ಟಕ್ಕೊಳಗಾದರು. ಬೊಕ್ಕಸಕ್ಕೆ 1.5 ಲಕ್ಷ ಕೋಟಿ ರೂ. ಹೊರೆ ಬಿತ್ತು. ಮೊದಲ ಮೂರು ತಿಂಗಳ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ. 5.7ಕ್ಕೆ ಕುಸಿಯಿತು. ನಂತರದ ತ್ತೈಮಾಸಿಕದಲ್ಲಿ ಇದು ಶೇ. 6.7ಕ್ಕೆ ಏರಿದರೂ ಇದು 10 ವರ್ಷಗಳ ಯುಪಿಎ ಅವಧಿಯ ಸರಾಸರಿ ಜಿಡಿಪಿಗಿಂತಲೂ ಹಿಂದಿದೆ. ಆದರೆ, ಶೇ. 6.7 ಬೆಳವಣಿಗೆ ಆಗೇ ಆಗುತ್ತದೆ ಎಂದೂ ಕರಾರುವಾಕ್ಕಾಗಿ ಹೇಳುವಂತಿಲ್ಲ” ಎಂದರು.
ರಾಮಸೇತು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಶ್ರೀರಾಮ ಎಂಬ ವ್ಯಕ್ತಿ ಅಸ್ತಿತ್ವದಲ್ಲೇ ಇರಲಿಲ್ಲ ಎಂದಿತ್ತು. ಈಗ ತಮ್ಮನ್ನು ಶಿವಭಕ್ತರೆಂದು ಘೋಷಿಸಿಕೊಂಡಿರುವ ರಾಹುಲ್ ಗಾಂಧಿ, ಶಿವಭಕ್ತ ಶ್ರೀರಾಮನನ್ನು ಸಮರ್ಥಿಸಿಕೊಳ್ಳುವರೇ?
– ಮೀನಾಕ್ಷಿ ಲೇಖೀ, ಬಿಜೆಪಿ ಸಂಸದೆ