Advertisement

ಕಾರಣ ಹೇಳದೇ ನೀನ್ಯಾಕೆ ಮೌನಿಯಾದೆ ?

10:07 AM Mar 18, 2020 | mahesh |

ಗೆಳತಿ,

Advertisement

ಪಕ್ಕದ ಮನೆಯ ಮಯೂರಿ ಕಾಲ್‌ಚೈನು ತೆಗೆದುಕೊಂಡಿದ್ದಕ್ಕೆ, ರಚ್ಚೆ ಹಿಡಿದು ಕಾಲ್‌ಚೈನುಗಳನ್ನು ನೀನೂ ತೆಗೆದುಕೊಂಡೆ. ಕಾಡಿ ಬೇಡಿ ತಂದ ನಿನ್ನ ಕಾಲ್‌ಚೈನುಗಳ ಸದ್ದು, ಎನ್ನ ಮನಸ್ಸಿನಾಳದ ಸ್ವರ ವೀಣೆ ಮೀಟುತ್ತಿತ್ತು. ಗಲ್‌ ಗಲ್‌ ಎಂಬ ಕಾಲ್ಗೆಜ್ಜೆಯ ನಾದ ನಿದ್ದೆಗೆ ಜಾರಿದ ಕ್ಷಣದಲ್ಲೂ, ತಲೆಯಲ್ಲಿ ಸುತ್ತುತ್ತಿತ್ತು. ನೆನಪಿದೆಯಾ ನಿಂಗೆ…!? ಮಾಮೂಲಿ ಕೂಡಿ ನಡೆದಾಡುತ್ತಿದ್ದ ಕಾಲ್ದಾರಿ ಅದು. ಕಾಲ್ದಾರಿ ಅಂಚಲ್ಲಿ ಕಾಲು ತಾಸು ನಡೆದುಕೊಂಡು ಹೋದರೆ, ಹಚ್ಚ ಹಸಿರಿನ ಹೊದಿಕೆಯ ಮಧ್ಯೆ ಹರಿಯುತ್ತಿರುವ ನದಿಯ ಮೇಲೊಂದು ತೂಗುಸೇತುವೆ. ಮನಸ್ಸಿಗೆ ಮುದ ನೀಡುವ ಹೂದೋಟ. ಜೊತೆಗೆ, ಹಗಲಿರುಳು ದುಡಿದು ಬಳಲಿದ ಜೀವಗಳು, ದಣಿವರಿಯದೇ ಕೆಲಸ ಮಾಡಿದ ಶ್ರಮಿಕರು, ಶ್ರೀಮಂತರು, ಹಿರಿಯರು, ಮಕ್ಕಳು, ಮತ್ತೂಂದಿಷ್ಟು ನಮ್ಮಂತವರು ನಡೆದಾಡಲೆಂದೇ ನಿರ್ಮಿಸಿದ ವಾಕಿಂಗ್‌ ಪಾಥ್‌..! ಸುಸ್ತಾದ ನಂತರ ಕುಳಿತುಕೊಳ್ಳಲು ಅಲ್ಲಲ್ಲಿ ನಿರ್ಮಿಸಿದ ಕುರ್ಚಿಯಂತಿರುವ ಕಲ್ಲಿನ ಆಸನಗಳು.

ಅಂಥ ಮನಮೋಹಕ ಪರಿಸರದಲ್ಲಿ ಹೀಗೆ, ಒಂದು ದಿನ ಇಳಿ ಸಂಜೆಯ ಹೊತ್ತು. ಕಾಲ್ದಾರಿಯನ್ನು ಸವೆಸಿ, ಹೂದೋಟಕ್ಕೆ ಹೋಗಿ ಒಂದಿಪ್ಪತ್ತು ನಿಮಿಷ ಆಗಿತ್ತು ಅನ್ಸುತ್ತೆ, ಸರೋವರದ ಸೇತುವೆ ಹತ್ತಿ, ಎರಡೂ¾ರು ರೌಂಡ್‌ ವಾಕಿಂಗ್‌ ಮಾಡಿ ಆಸನದಲ್ಲಿ ಕುಳಿತಿದ್ದೆವು. ಗಾಳಿಯ ಜೊತೆಗೆ ಗಲಾಟೆ ಮಾಡುತ್ತಿದ್ದ ನಿನ್ನ ನವಿರಾದ ಕೂದಲು ಅಂದೇಕೋ ಗರಬಡಿದಂತಿತ್ತು. ನಾ ಕಾಣುತ್ತಿದ್ದ ಕನಸಿನ ಕಲ್ಪನೆಯ ಆಸೆಗಳನ್ನು ತಿಳಿಸಿದ ಕೂಡಲೇ ಥೂ! ಹೋಗೋ..ಆಸೆ ನೋಡು ಆಸೆ ಎಂದೆಯಾದರೂ, ಅಲ್ಲಿ ತುಂಟತನ ಇರಲಿಲ್ಲ. ನಿನ್ನ ಕಂಗಳ ನೋಟ ಕಳೆಗುಂದಿತ್ತು. ಕಾರಣ ಏನು ಅಂತ ನಾನು ಕೇಳಿರಲಿಲ್ಲ. ಆದರೆ, ಇವಾಗ್ಲೂ ಕೇಳದೆ ಇರೋಕೆ ಮನಸ್ಸು ಬರಲಿಲ್ಲ. ಆದದ್ದಾಗಲಿ ಎಂದು ಕೇಳಿಯೇಬಿಟ್ಟೆ…! ನಿನ್ನ ಉತ್ತರ ಮೌನವಾಗಿತ್ತು. ಈ ಮೌನದ ಹಿಂದಿನ ಮರ್ಮವೇನು ಎಂದು ಎಷ್ಟೇ ಪ್ರಯತ್ನಿಸಿದರೂ ತಿಳಿಯಲೇ ಇಲ್ಲ.

ಅಂದು ಕಾರಣ ಹೇಳದೇ ನೀನ್ಯಾಕೆ ಮೌನಿಯಾದೆ…?

ಗಿರೀಶ್‌ ಕುಂಬಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next