ಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೈಯಲು ಸುಪಾರಿ ಕೊಟ್ಟಿರುವ ರವಿ ಬೆಳಗೆರೆ ಅವರೇ ಆರೋಪಿಗೆ ಗನ್ ಮತ್ತು ಚಾಕು ನೀಡಿದ್ದರೆಂಬ ವಿಚಾರ ಚರ್ಚೆಗೆ ಕಾರಣವಾಗಿದೆ.
ಸುಪಾರಿ ಹಂತಕರಾದ ಶಶಿಧರ್ ಮತ್ತು ಬಡಿಗೇರ್ ಅವರಿಗೆ ರವಿ ಬೆಳಗೆರೆ ಅವರೇ ಗನ್, ಗುಂಡುಗಳು ಹಾಗೂ ಚಾಕು ನೀಡಿದ್ದರು. ಹತ್ಯೆ ಸಂಚು ವಿಫಲವಾದ ನಂತರ ಆರೋಪಿಗಳು ಅದನ್ನು ರವಿ ಬೆಳಗೆರೆಗೆ ವಾಪಸ್ ಮಾಡಿದ್ದರೆಂದು ಸಿಸಿಬಿ ಪೊಲೀಸರು ಹೇಳುತ್ತಾರೆ. ಆದರೆ, ಸುಪಾರಿ ಹಂತಕನ ಬಳಿ ಗನ್ ಇರಲಿಲ್ಲವೇ? ಎಂಬ ಪ್ರಶ್ನೆ ಉದ್ಭವವಾಗಿದೆ.
ಈ ಮಧ್ಯೆ ಪಿಸ್ತೂಲ್ ಖರೀದಿಸಲು ತಾಹೀರ್ ಹುಸೇನ್‌ನನ್ನು ಶಶಿಧರ್ ಮುಂಡೆವಾಡಿ ಸಂಪರ್ಕಿಸಿದ್ದು ಈ ಸಂದರ್ಭದಲ್ಲಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳುತ್ತಾರೆ. ಸುನೀಲ್ ಹೆಗ್ಗರವಳ್ಳಿ ಹತ್ಯೆ ಯತ್ನ ವಿಫಲವಾದ ಮೇಲೆ ಗನ್, ಗುಂಡು ಮತ್ತಿತರ ಆಯುಧಗಳನ್ನು ರವಿ ಬೆಳಗೆರೆಗೆ ವಾಪಸ್ ಮಾಡಿದ್ದ ಶಶಿಧರ್ ಮುಂಡೆವಾಡಿ ಮತ್ತೆ ಯಾವ ಕಾರಣಕ್ಕಾಗಿ ಪಿಸ್ತೂಲ್ ಖರೀದಿಸಲು ಮುಂದಾಗಿದ್ದನೆಂಬ ಅನುಮಾನ ಕಾಡತೊಡಗಿದೆ.
ಮಾರಾಟಗಾರನ ಬಳಿ ಪಿಸ್ತೂಲ್ ಇಲ್ವಾ?: ಸಾಮಾನ್ಯವಾಗಿ ಸುಪಾರಿ ಹಂತಕರು ಸುಪಾರಿ ಪಡೆದ ಬಳಿಕ ತಾವೇ ಶಸ್ತ್ರಾಸ್ತ್ರಗಳನ್ನು ತಂದು ಕೃತ್ಯವೆಸಗುತ್ತಾರೆ. ಅಲ್ಲದೇ ಶಶಿಧರ್ ಮುಂಡೆವಾಡಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಹಾಗೂ ಪಿಸ್ತೂಲ್‌ನಿಂದಲೇ ಕೊಲೆಗೈದಿರುವ ಪ್ರಕರಣಗಳು ದಾಖಲಾಗಿದೆ. ಪಿಸ್ತೂಲ್ ಮಾರಾಟಗಾರ ಸುಪಾರಿ ಹಂತಕ ಶಶಿಧರ್ ಬಳಿ ಪಿಸ್ತೂಲ್ ಇರಲಿಲ್ವಾ ಎಂಬ ಅನುಮಾನ ಉಂಟಾಗಿದೆ.
ಹಾಗಾದರೇ ರವಿ ಬೆಳಗೆರೆ ಅಂದು ಶಶಿಧರ್ ಮುಂಡೆವಾಡಿಗೆ ಕೊಟ್ಟ ಗನ್ ಯಾರದ್ದು? ಸುನೀಲ್ ಕೊಲ್ಲಲು ರವಿ ಬೆಳಗೆರೆ ಮೊದಲೇ ಗನ್ ಖರೀದಿಸಿದ್ದರಾ ಅಥವಾ ತಮ್ಮ ಭದ್ರತೆಗಾಗಿ ಇಟ್ಟುಕೊಂಡಿದ್ದ ಪರವಾನಿಗೆ ಗನ್‌ಅನ್ನೇ ಸುಪಾರಿ ಹಂತಕರಿಗೆ ಕೊಟ್ಟಿದ್ದರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮತ್ತೂಂದೆಡೆ ರವಿ ಬೆಳಗೆರೆ ಪುತ್ರಿ ಭಾವನಾ ಮಾತನಾಡಿ, ನಮ್ಮಪ್ಪ ಸುನೀಲ್ ಕೊಲ್ಲೋಕೆ ಪರಿಚಯಸ್ಥರನ್ನೇ ಯಾಕೆ ಕರೆಸುತ್ತಿದ್ದರು. ಅಷ್ಟೋಂದು ದಡ್ಡನೇ ನಮ್ಮಪ್ಪ? ಗೊತ್ತಿಲ್ಲದವರನ್ನು ಬಿಟ್ಟು ಕೊಲ್ಲಿಸುತ್ತಿದ್ದರು. ಇದರ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದ್ದಾರೆ.