ಈ ಹಿಂದೆ “ಹುಚ್ಚ ವೆಂಕಟ್’ ಸಿನಿಮಾ ಬಿಡುಗಡೆ ದಿನ ನಿರ್ದೇಶಕ ವೆಂಕಟ್, ಸಿಕ್ಕಾಪಟ್ಟೆ ಗರಂ ಆಗಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಕಾರಣ, ಆ ಚಿತ್ರ ವೀಕ್ಷಿಸಲು ಜನರು ಬರದೇ ಇದ್ದದ್ದು. ಈಗ ಪುನಃ ಗರಂ ಆಗಿದ್ದಾರೆ ವೆಂಕಟ್. ಅವರ ಆ ಬೇಸರಕ್ಕೆ ಕಾರಣ, ಶುಕ್ರವಾರ ತೆರೆಕಂಡಿರುವ ಅವರ ನಿರ್ದೇಶನದ “ಪೊರ್ಕಿ ಹುಚ್ಚ ವೆಂಕಟ್’. ಹೌದು, ಈ ಚಿತ್ರ ನೋಡುವುದಕ್ಕೂ ಜನ ಬಂದಿರಲಿಲ್ಲ.
ಎರಡನೆಯ ಬಾರಿಗೆ ಪ್ರೇಕ್ಷಕರ ಅಭಾವದಿಂದ ತಾಳ್ಮೆ ಕಳೆದುಕೊಂಡ ವೆಂಕಟ್, ಸಿಕ್ಕಾಪಟ್ಟೆ ಗರಂ ಆಗಿ ಬೇಸರದ ಮಾತುಗಳ್ನಾಡಿದ್ದಾರೆ. “ನನ್ನ ಪ್ರಯತ್ನವನ್ನು ಯಾರೂ ಮೆಚ್ಚಿಕೊಳ್ಳುತ್ತಿಲ್ಲ. ಚಿತ್ರ ನೋಡೋಕೆ ಯಾರೂ ಬರುತ್ತಿಲ್ಲ. ನಮ್ಮವರೇ ನನ್ನನ್ನು ತುಳಿಯುತ್ತಿದ್ದಾರೆ. ಅದರಲ್ಲೂ ಬೆಂಗಳೂರು ಕನ್ನಡಿಗರು ಸರಿ ಇಲ್ಲ’ ಎಂದು ತಮ್ಮ ಎಂದಿನ ಶೈಲಿಯಲ್ಲೇ ಮಾತುಗಳನ್ನು ಹೊರಹಾಕಿದ್ದಾರೆ ವೆಂಕಟ್.
ಈ ಕುರಿತು ತಮ್ಮ ಅಳಲನ್ನು ತೋಡಿಕೊಳ್ಳುವುದಕ್ಕೆ ಸಂಜೆ ಪತ್ರಿಕಾಗೋಷ್ಠಿ ಕರೆದಿದ್ದರು ವೆಂಕಟ್. ಈ ಸಂದರ್ಭದಲ್ಲಿ ಪ್ರೇಕ್ಷಕರ ಅಭಾವದ ಕುರಿತು ಮಾತನಾಡಿದ ವೆಂಕಟ್, “ಬಾಹುಬಲಿ 2′ ಚಿತ್ರವನ್ನು ನೋಡುವ ಪ್ರೇಕ್ಷಕರು, ತಮ್ಮ ಚಿತ್ರವನ್ನು ನೋಡುವುದಕ್ಕೆ ಯಾಕೆ ಬರುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವರ ಮಾತುಗಳನ್ನು ತಾಳ್ಮೆಯಿಂದಲೇ ಆಲಿಸಿದ ಪತ್ರಕರ್ತರು, “ಶುಕ್ರವಾರವಷ್ಟೇ ಚಿತ್ರ ಬಿಡುಗಡೆಯಾಗಿದೆ. ಯಾಕಿಷ್ಟು ತಾಳ್ಮೆ ಕಳೆದುಕೊಳ್ಳುತ್ತಿದ್ದೀರಿ. ಜನರು ಬರುವವರೆಗೆ ಕಾಯಬೇಕು.
ಹೀಗೆ ಜನರಿಗೆ ಅವಾಜ್ ಹಾಕಿದರೆ ಯಾರು ಬರುತ್ತಾರೆ ಹೇಳಿ? ಎಂಬ ಪ್ರಶ್ನೆಗೆ, “ಬಾಹುಬಲಿ 2′ ಬಿಡುಗಡೆಗೆ ಕನ್ನಡಿಗರು ವಿರೋಧಿಸಿದ್ದರು. ಆದರೆ, ಎಲ್ಲರೂ ಆ ಚಿತ್ರ ನೋಡಿದ್ದಾರೆ. ನೋಡಲಿ, ಬೇಜಾರಿಲ್ಲ. ಆದರೆ, ನಾನು ಕನ್ನಡದವನು. ಕನ್ನಡಕ್ಕಾಗಿ ದನಿ ಎತ್ತಿದವನು. ಎಂತಹ ಸಮಸ್ಯೆ ಇದ್ದರೂ ಮುಂದೆ ಬಂದು ನೇರವಾಗಿ ಹೇಳ್ಳೋನು. ಸಮಾಜ ಸೇವೆ ಮಾಡುತ್ತಿರುವ ನನಗೆ ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ. ಇಷ್ಟೆಲ್ಲಾ ಇದ್ದರೂ ನನ್ನನ್ನು ಯಾರೂ ಬೆಂಬಲಿಸುತ್ತಿಲ್ಲ’ ಎಂದು ಬೇಸರ ಹೊರಹಾಕಿದರು ವೆಂಕಟ್.
“ನಾನು ರಾತ್ರೋ ರಾತ್ರಿ ಸೂಪರ್‌ಸ್ಟಾರ್ ಆಗಿದ್ದೀನಿ ಎಂಬ ಹೊಟ್ಟೆ ಕಿಚ್ಚಾ? ಜನ ಬರಲಿ, ಬಿಡಲಿ, ನಾನು ಯಾವತ್ತೂ ಸೂಪರ್‌ಸ್ಟಾರೇ, ನನಗೆ ನನ್ನದೇ ಆದ ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ನಮ್ಮವರು ತೆಲುಗು,ತಮಿಳು ಸಿನಿಮಾ ನೋಡಲಿ. ಆದರೆ, ಬರೀ ಗ್ರಾಫಿಕ್ ಇಟ್ಟುಕೊಂಡು ಸಿನಿಮಾ ಮಾಡೋದು ದೊಡ್ಡ ವಿಷಯ ಅಲ್ಲ. ಭಾವನೆಗಳನ್ನಿಟ್ಟುಕೊಂಡು ಸಿನಿಮಾ ಮಾಡೋದು ದೊಡ್ಡದು. ಒಮ್ಮೆ ನನ್ನ ಚಿತ್ರ ನೋಡಿ, ಕೆಟ್ಟದ್ದಾಗಿದ್ದರೆ, ಬೈದು ತಿದ್ದಿ ಹೇಳಿ’ ಎಂದು ಹೇಳಿದರು ವೆಂಕಟ್.