ಬಾಗಲಕೋಟೆ: ಮೇಕೆದಾಟು ಯೋಜನೆಗೆ 2014ರಲ್ಲೇ ಅನುಮೋದನೆ ನೀಡಲಾಗಿತ್ತು. ಆಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ನಾಲ್ಕು ವರ್ಷ ಯೋಜನೆಯನ್ನೇ ಆರಂಭಿಸಲಿಲ್ಲ. ಇದನ್ನೇ ನಾನು ದಾಖಲೆ ಸಮೇತ ಪ್ರಶ್ನೆ ಮಾಡಿದ್ದೆ. ಆದರೆ, ಜಲಸಂಪನ್ಮೂಲ ಇಲಾಖೆಯ ಮಾಜಿ ಸಚಿವ ಎಂ.ಬಿ. ಪಾಟೀಲ, ಹರಿಕಥೆ ಭಟ್‌ರು ಹೇಳುವಂತೆ ಪುರಾಣ ಹೇಳುತ್ತಿದ್ದಾರೆ. ಪಾಟೀಲರ ಪುರಾಣ ರಾಜ್ಯದ ಜನರಿಗೆ ಬೇಕಾಗಿಲ್ಲ. ಏಕೆ ಯೋಜನೆ ಆರಂಭಿಸಲಿಲ್ಲ ಎಂಬುದು
ಹೇಳಲಿ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಿಂದ 2014ರವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. 2013ರ ಜನವರಿ 12ರಂದು ಯೋಜನೆಗೆ ಅನುಮೋದನೆ ನೀಡಿದ್ದರು. ಹಲವಾರು ವರ್ಷ ಅಧಿಕಾರ ನಡೆಸಿದರೆ ಕನಿಷ್ಠ ಜ್ಞಾನ ಇರಬೇಕು. ಯೋಜನಾ ವರದಿ ಸಲ್ಲಿಸುವ ಮೊದಲು ಪಿಎಫ್‌ಆರ್ ಸಲ್ಲಿಸಬೇಕು. ಪಿಎಫ್‌ಆರ್ ಸಲ್ಲಿಸದೇ ಡಿಎಫ್‌ಆರ್ ಸಲ್ಲಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಯೋಜನೆ ಏಕೆ ಆರಂಭಿಸಲಿಲ್ಲ ಎಂದು ಕೇಳಿದರೆ, ನಾನು ನಾರಿಮನ್ ಅವರನ್ನು ಭೇಟಿ ಮಾಡಿದೆ. ಅವರಿವರನ್ನು ಭೇಟಿ ಮಾಡಿದೆ ಎಂದು ಹರಿಕಥೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ಆಗ ನಮಗೆ ಲಭಿಸಿರುವ 130 ಟಿಎಂಸಿ ಅಡಿ ನೀರು ಬಳಸುವ ಜತೆಗೆ ಪ್ರತಿವರ್ಷ 10 ಸಾವಿರ ಕೋಟಿ ಕೃಷ್ಣೆಗೆ ಕೊಡುವುದಾಗಿ ಹೇಳಿದ್ದರು.
ಆದರೆ, ಕೃಷ್ಣೆಗೆ ಎಷ್ಟು ಕೊಟ್ಟರು. 130 ಟಿಎಂಸಿ ಅಡಿ ನೀರು ಬಳಕೆ ಆಗಿದೆಯೇ. ಆಗ ಕೃಷ್ಣೆಯ ಹೆಸರಿನಲ್ಲಿ ಪಾದಯಾತ್ರೆ ಮಾಡಿ, ರೈತರಿಗೆ ಮೋಸ ಮಾಡಿದರು. ಈಗ ಮೇಕೆದಾಟು ವಿಷಯದಲ್ಲಿ ಪಾದಯಾತ್ರೆ ಎಂಬ ಬುಡಬುಡಕೆ ಆಟ ನಡೆಸಿದ್ದಾರೆ. ಕೊರೊನಾ ಸಂದರ್ಭದಲ್ಲಿ 50 ಜನರೊಂದಿಗೆ ಬೇಕಾದರೆ ಪ್ರತಿಭಟನೆ ಮಾಡಿ ಎಂದು ಹೇಳಿದ್ದೇವು. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು. ಆದರೆ, ಇಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಸಾವಿರಾರು ಜನ ಸೇರಿ ಪಾದಯಾತ್ರೆ ಮಾಡುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಇದಕ್ಕಾಗಿ ಕೂಡಲೇ ರಾಜ್ಯದ ಜನರ ಕ್ಷಮೆ ಕೋರಿ, ಪಾದಯಾತ್ರೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಶಾಸಕ ಡಾ|ವೀರಣ್ಣ ಚರಂತಿಮಠ, ಬಿಜೆಪಿ ಬೆಳಗಾವಿ ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ, ಮಾಧ್ಯಮ ಸಂಚಾಲಕ ಸತ್ಯನಾರಾಯಣ ಹೇಮಾದ್ರಿ ಮುಂತಾದವರಿದ್ದರು.
ಸಂಕ್ರಾಂತಿ ಬಳಿಕ ಸಚಿವ ಸಂಪುಟ ಬದಲಾವಣೆ ಕುರಿತು ನನಗೆ ಗೊತ್ತಿಲ್ಲ. ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ನೀಡುವ ಸೂಚನೆ ಪಾಲಿಸುವೆ. ಸಂಕ್ರಾಂತಿ ಬಳಿಕ ಸಚಿವ ಸಂಪುಟ ಬದಲಾವಣೆ ಆಗಬಹುದು. ಆಗದೇ ಇರಬಹುದು. ನನಗೆ ಮಾಹಿತಿ ಇಲ್ಲ ಎಂದು ಸಚಿವ ಕಾರಜೋಳ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಗುಜರಿ ಪಕ್ಷ
ಜನರಿಗೆ ಸುಳ್ಳು ಹೇಳಿ, ಮೋಸ ಮಾಡಿ ಅಧಿಕಾರ ನಡೆಸಿದ್ದಕ್ಕೆ ಕಾಂಗ್ರೆಸ್ ಈಗ ದೊಡ್ಡ ದುರಂತ ಎದುರಿಸುತ್ತಿದೆ. ಇನ್ನೂ ದೊಡ್ಡ ದುರಂತ ಆ ಪಕ್ಷಕ್ಕೆ ಕಾದಿದೆ. ಈಗಾಗಲೇ 26 -27 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಗುಜರಿ ಪಕ್ಷವಾಗಿದೆ.
ಗೋವಿಂದ ಕಾರಜೋಳ,
ಜಲ ಸಂಪನ್ಮೂಲ ಸಚಿವ
ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಬಿ. ಪಾಟೀಲ ಮತ್ತು ನಾನು ಈಗಲೂ ಅನ್ಯೋನ್ಯವಾಗಿದ್ದೇವೆ. ಆದರೆ, ಸರ್ಕಾರ, ನನ್ನ ಇಲಾಖೆಯ ಮೇಲೆ ಆರೋಪ ಮಾಡಿದಾಗ ಸುಮ್ಮನೆ ಇರಲು ಸಾಧ್ಯವಿಲ್ಲ. ರಾಜಕೀಯ-ಟೀಕೆ-ಆರೋಪಗಳೇ ಬೇರೆ. ವೈಯಕ್ತಿಕವೇ ಬೇರೆ. ಎಂ.ಬಿ. ಪಾಟೀಲರ ತಂದೆ ಬಿ.ಎಂ. ಪಾಟೀಲ ಹಾಗೂ ನಾವು ಜನತಾ ದಳದಲ್ಲಿದ್ದವರು. ಅವರು ನಾನು ಅತ್ಯಂತ ಪ್ರೀತಿ-ವಿಶ್ವಾಸ-ಗೌರವದಿಂದ ಇದ್ದೇವು. ಅವರೂ ನಮ್ಮನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದೇವು. ಮುಂದೆ ಅವರು ಕಾಂಗ್ರೆಸ್‌ಗೆ ಹೋದರು ಎಂದು ಸಚಿವ ಕಾರಜೋಳ ಹೇಳಿದರು.