Advertisement

ಕಾಣದೆ ಹೀಗೇಕೆ ಮರೆಯಾಗಿ ಹೋದೆ? ಮರೆಯಾಗಿ ಹೋದೆ…

04:00 AM Nov 06, 2018 | |

ಆದ್ರೆ, ರಜೆಗೆಂದು ಊರಿಗೆ ಹೋಗಿ ಬರುವಷ್ಟರಲ್ಲಿ ಇಲ್ಲಿ ಎಲ್ಲವೂ ಬದಲಾಗಿದೆ. ಎಲ್ಲಿಯೂ ನಿನ್ನ ಸುಳಿವಿಲ್ಲ. ಬಟ್ಟೆ ಹರಡಲು, ತಲೆಗೂದಲು ಒಣಗಿಸಲು ನೀನು ಹೊರಗೆ ಬರುತ್ತಿಲ್ಲ. ಮಹಡಿ ಮನೆಯ ಕಿಟಕಿ ಮುಚ್ಚಿಕೊಂಡಿದೆ. ಫೋನ್‌ ಮಾಡಿದ್ರೆ ಸ್ವಿಚ್‌ಆಫ್! 

Advertisement

ಗೆಳತಿ, ಹಳ್ಳಿಯಲ್ಲಿ ಓದುತ್ತಿದ್ದ ನಾನು ಪಿಯುಸಿಯಲ್ಲಿ ಹೆಚ್ಚು ಮಾರ್ಕ್ಸ್ ಪಡೆದಿದ್ದೆ. ಮಗ ಚೆನ್ನಾಗಿ ಓದಿ ಉದ್ಧಾರವಾಗಲಿ ಅಂತ ಮನೆಯವರು ಪಟ್ಟಣದ ಕಾಲೇಜಿಗೆ ಸೇರಿಸಿದರು. ಹಾಗೆ ಪಟ್ಟಣದ ಪಾಲಾದವನು ನಾನು. ಇಲ್ಲಿಗೆ ಬಂದ ಮೇಲೆ, ಸ್ನೇಹಿತನೊಂದಿಗೆ ಸೇರಿ ಪಟ್ಟಣದ ಒಂದು ಸಣ್ಣ ವಠಾರದಲ್ಲಿ ರೂಂ ಮಾಡಿದೆ. ಅವತ್ತು ಕಾಲೇಜಿನ ಮೊದಲ ದಿನ. ಬೇಗ ಹೋಗಬೇಕಿದ್ದರಿಂದ, ಆರು ಗಂಟೆಗೆಲ್ಲಾ ಎದ್ದು, ಸೂರ್ಯನಿಗೆ ನಮಸ್ಕರಿಸೋಣವೆಂದು ಹೊರಗೆ ಬಂದೆ.

ಆಗಲೇ ನೀನು ಕಾಣಿಸಿದೆ. ಮೊದಲ ನೋಟದಲ್ಲೇ ನಿನಗೆ ಸಂಪೂರ್ಣ ಶರಣಾಗಿ, ಈಗ ಯಾರಿಗೆ ನಮಸ್ಕರಿಸೋದು ಅಂತ ಒಂದು ಸೆಕೆಂಡ್‌ ಕನ್‌ಫ್ಯೂಸ್‌ ಆಗಿಬಿಟ್ಟೆ ನಾನು. ಹೃದಯದೊಳಗೆ ಗೆಜ್ಜೆನಾದದ ಭರತನಾಟ್ಯ ಶುರುವಾಗಿತ್ತು. ನನಗೆ ಅರಿವಿಲ್ಲದೆಯೇ, ನಾನು ನಿನ್ನ ಒಲವ ಕೊಳದಲ್ಲಿ ಮುಳುಗಿಹೋಗಿದ್ದೆ. ಅಂದಿನಿಂದ, ಕಾಲೇಜಿನ ಜೊತೆಜೊತೆಗೇ ಪ್ರೇಮೋದ್ಯೋಗವೂ ಶುರುವಾಯ್ತು.

ದಿನಾ ಕಾಲೇಜು ಮುಗಿಸಿ ರೂಮ್‌ಗೆ ಬಂದಮೇಲೆ ನಿಮ್ಮ ಮಹಡಿಮನೆಯನ್ನು ದಿಟ್ಟಿಸುವುದೇ ನನ್ನ ಕಾಯಂ ಕೆಲಸವಾಯ್ತು. ಕದ್ದುಮುಚ್ಚಿ ನಿನ್ನನ್ನು ನೋಡುತ್ತಿರುವಾಗಲೇ ಒಂದು ದಿನ ನೀನೂ ನನ್ನನ್ನು ನೋಡಿಬಿಟ್ಟೆ. ಮೊದಮೊದಲು ನಿರ್ಲಕ್ಷಿಸಿದೆ, ಸೊಕ್ಕು ತೋರಿದೆ, ನೋಡಿಯೇ ಇಲ್ಲವೆಂದು ಸೋಗು ಹಾಕಿದೆ. ಕ್ರಮೇಣ, ಕಣ್ಣಿನ ಸನ್ನೆಯಲ್ಲೇ ಇಬ್ಬರ ನಡುವೆ ಪ್ರೇಮ ಸಂದೇಶಗಳು ರವಾನೆಯಾದೆವು. 

ನೀನು  ಎದುರುಗಡೆ ಮನೆಯಲ್ಲಿದ್ದರೂ, ಪರಸ್ಪರ ಮುಕ್ತವಾಗಿ ಮಾತಾಡುವ ಹಾಗಿರಲಿಲ್ಲ. ಮನೆಯಲ್ಲಿ ಯಾರಾದರೂ ನೋಡಿಬಿಟ್ಟರೆ ಎಂಬ ಅಂಜಿಕೆ ಇಬ್ಬರನ್ನೂ ಕಾಡುತ್ತಿತ್ತು. ಆದರೆ, ವಾಟ್ಸಾéಪ್‌ನಲ್ಲಿ ಚಾಟ್‌ ಮಾಡ್ತಾ, ಕಿಟಕಿ ಬದಿ ನಿಂತು ಫೋನ್‌ನಲ್ಲಿ ಮಾತಾಡ್ತಾ ಕಳೆದ ಗಂಟೆಗಳಿಗೆ ಲೆಕ್ಕವೆಲ್ಲಿ?
ಆದ್ರೆ, ರಜೆಗೆಂದು ಊರಿಗೆ ಹೋಗಿ ಬರುವಷ್ಟರಲ್ಲಿ ಇಲ್ಲಿ ಎಲ್ಲವೂ ಬದಲಾಗಿದೆ. ಎಲ್ಲಿಯೂ ನಿನ್ನ ಸುಳಿವಿಲ್ಲ.

Advertisement

ಬಟ್ಟೆ ಹರಡಲು, ತಲೆಗೂದಲು ಒಣಗಿಸಲು ನೀನು ಹೊರಗೆ ಬರುತ್ತಿಲ್ಲ. ಮಹಡಿ ಮನೆಯ ಕಿಟಕಿ ಮುಚ್ಚಿಕೊಂಡಿದೆ. ಫೋನ್‌ ಮಾಡಿದ್ರೆ ಸ್ವಿಚ್‌ಆಫ್! ಆಮೇಲೆ ಗೆಳೆಯ ಹೇಳಿದ: ಮಹಡಿಮನೆಗೆ ಬೀಗ ಬಿದ್ದಿದೆ ಅಂತ. ಈಗೇನು ಮಾಡಬೇಕು ಅಂತಾನೇ ತಿಳಿಯುತ್ತಿಲ್ಲ. ನನಗೆ ಒಂದು ಮಾತೂ ಹೇಳದೆ ಎಲ್ಲಿಗೆ ಹೋದೆ? ಅಜ್ಜಿಮನೆಗೆ ಹೋಗಿದ್ದೀಯಾ, ಅಪ್ಪನಿಗೆ ಟ್ರಾನ್ಸ್‌ಫ‌ರ್‌ ಆಯ್ತಾ? ಅಥವಾ ನಮ್ಮಿಬ್ಬರ ವಿಷ್ಯ ಮನೆಯಲ್ಲಿ ಗೊತ್ತಾಗಿ… 

ಕೊನೆಯವರೆಗೂ ನಿನ್ನ ಜೊತೆಯಲ್ಲಿಯೇ ಇರಬೇಕೆಂದು ಕನವರಿಸುತ್ತಿರೋ ಹುಡುಗ ನಾನು. ಹೀಗೆ ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರೆ ಏನು ಮಾಡೋದು? ನಿನ್ನ ಬರುವಿಕೆಯ ನಿರೀಕ್ಷೆಯ ಹಾದಿಯಲ್ಲಿ ನನ್ನ ಕನಸುಗಳು ಕಾಯುತ್ತಿವೆ. ಏನು ಮಾಡಲೂ ತೋಚದೆ, ಪ್ರತಿದಿನವೂ ನಿನ್ನ ಮಹಡಿಮನೆಯನ್ನೇ ನೋಡುತ್ತಾ ಕುಳಿತಿದ್ದೇನೆ, ಕಿಟಕಿ ತೆರೆಯುತ್ತದೆ ಎಂಬ ನಿರೀಕ್ಷೆಯಲ್ಲಿ… 

* ನಿನಗಾಗಿ ಕಾಯುತ್ತಿರೋ: ರವಿತೇಜ ಚಿಗಳಿಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next