Advertisement

ವರುಣಾ ಬಿಟ್ಟು ಬಾದಾಮಿಗೆ ನೀವು ಯಾಕೆ ಬಂದಿರಿ?

11:43 PM Dec 06, 2021 | Team Udayavani |

ಬಾದಾಮಿ: ನಾನು ಹುಲಿಯಾನೇ. ಆದ್ರೆ ಈಗ ಇಲಿ ಆಗಿದ್ದೇನೆ. ನೀವು (ಮತದಾರರು) ಮನಸ್ಸು ಮಾಡಿದರೆ ಹುಲಿಯಾನೂ ಆಗುತ್ತೇನೆ. ಮತ್ತೆ ಬಾದಾಮಿಯಿಂದ ಗೆದ್ದು ಮಂತ್ರಿಯೂ ಆಗುತ್ತೇನೆ, ಮುಖ್ಯಮಂತ್ರಿಯೂ ಆಗುತ್ತೇನೆ. ಆದರೆ, ಸಿದ್ದರಾಮಯ್ಯ ಅವರೇ ನೀವು ವರುಣಾ ಬಿಟ್ಟು ಬಾದಾಮಿಗೆ ಯಾಕೆ ಬಂದಿರಿ?
ಇದು ನಗರದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪ್ರಚಾರ ಸಭೆ ಯಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರು ಪ್ರಶ್ನಿಸಿದ ರೀತಿ.

Advertisement

ಸಿದ್ದರಾಮಯ್ಯರನ್ನು ವೇದಿಕೆಯಲ್ಲೇ ಪ್ರಶ್ನಿಸಿದ ಅವರು, ಸಿದ್ದರಾಮಯ್ಯರಿಗೆ ಕ್ಷೇತ್ರ ತ್ಯಾಗ ಮಾಡಿದ್ದು ನಾನು. ನೀವು ಮಾಡಿದರೆ ಎಲ್ಲ ಆಗುತ್ತದೆ. ಅವರಿಗೆ ವರುಣಾ ಮತ್ತು ಚಾಮುಂಡಿ ಕ್ಷೇತ್ರಗಳಲ್ಲಿ ಅವಕಾಶ ಇದೆ. ನನಗೆ ಈ ಕ್ಷೇತ್ರ ಬಿಟ್ರೆ ಯಾವುದೇ ಅವಕಾಶ ಇಲ್ಲ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ. ಅವರ ಕ್ಷೇತ್ರದಲ್ಲಿ ಅವರು ಗೆದ್ದರೆ ಮಾತ್ರ ಯೋಗ್ಯತೆ ಇರುತ್ತದೆ ಎಂದರು.

ಚಿಮ್ಮನಕಟ್ಟಿ ಸಭೆಯಲ್ಲಿ ಮಾತನಾಡುತ್ತಲೇ ಉಭಯ ನಾಯಕರ ಬೆಂಬಲಿಗರಲ್ಲಿ ಅಸಮಾಧಾನ ಸ್ಫೋಟಗೊಂಡಿತು. ಚಿಮ್ಮನಕಟ್ಟಿ ಭಾಷಣ ಸ್ಪಷ್ಟವಾಗಿ ಅರ್ಥವಾಗದೆ ಗೊಂದಲದ ವಾತಾವರಣ ಸೃಷ್ಟಿ ಯಾಯಿತು. ಸಿದ್ದರಾಮಯ್ಯರಿಗೆ ಕ್ಷೇತ್ರ ತ್ಯಾಗ ಮಾಡಿದ್ದು ನಾನು ಎಂದುಚಿಮ್ಮನಕಟ್ಟಿ ಭಾಷಣ ಆರಂಭಿಸುತ್ತಲೇ “ಹೌದೋ ಹುಲಿಯಾ’ ಎಂದು ಅಭಿಮಾನಿ ಗಳು ಕೂಗಿದರು. ಅಭಿಮಾನಿಗಳ ಕೂಗಿಗೆ ಭಾವುಕರಾಗಿ ಚಿಮ್ಮನಕಟ್ಟಿ ಮತ್ತೆ ಭಾಷಣ ಮುಂದುವರಿಸಿದಾಗ ಸ್ವಲ್ಪ ಹೊತ್ತು ಸಭೆಯಲ್ಲಿ ಗೊಂದಲ ಮೂಡಿತ್ತು.

ಕೆಲವರು ಚಿಮ್ಮನಕಟ್ಟಿ ಭಾಷಣ ನಿಲ್ಲಿಸಲು ಮುಂದಾದರು. ಕೆಲವು ಮುಖಂಡರು ಮೈಕ್‌ ಬಂದ್‌ ಮಾಡಿ ಚಿಮ್ಮನಕಟ್ಟಿ ಅವರಿಗೆ ಮನವಿ ಮಾಡಿದರು. ಇದರಿಂದ ವೇದಿಕೆಯಲ್ಲಿದ್ದ ಸಿದ್ದರಾಮಯ್ಯಗೆ ಮುಜುಗರ ಉಂಟಾಯಿತು. ಚಿಮ್ಮನಕಟ್ಟಿ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಪರ – ವಿರೋಧ ಘೋಷಣೆ ಕೂಗಿದಾಗ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು.

ಇದನ್ನೂ ಓದಿ:ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

Advertisement

ಮನುವಾದದ ಬಿಜೆಪಿಯನ್ನು ವಿಸರ್ಜಿಸಿ: ಸಿದ್ದು
ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ವಯಸ್ಸಾಗಿದ್ದು, ಅದನ್ನು ವಿಸರ್ಜಿಸಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷಗಳು ಸಿದ್ಧಾಂತಗಳ ಮೇಲೆ ನಿಂತಿರುತ್ತವೆಯೇ ಹೊರತು ಚಿಹ್ನೆಗಳ ಮೇಲಲ್ಲ. ಬಿಜೆಪಿಯವರ ಸಿದ್ಧಾಂತ ಮನುವಾದ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮನುವಾದ ಸಿದ್ಧಾಂತವನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ನಮ್ಮ ಸಂವಿಧಾನವು ಸಂಪೂರ್ಣ ಅಳಿಸಿ ಹಾಕಿದೆ. ಕನಿಷ್ಠ ಎರಡೂವರೆ ಸಾವಿರ ವರ್ಷಗಳಷ್ಟು ಓಬೀರಾಯನ ಕಾಲದ ಮನುವಾದವನ್ನು ಅಳವಡಿಸಿಕೊಂಡಿರುವ ಬಿಜೆಪಿಯನ್ನು ವಿಸರ್ಜಿಸಬೇಕೋ, ಸಾಮಾಜಿಕ ನ್ಯಾಯವನ್ನು ಸಿದ್ಧಾಂತವಾಗಿಸಿಕೊಂಡ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಬೇಕೊ ಎಂದು ಬೊಮ್ಮಾಯಿಯವರೇ ಹೇಳಬೇಕು ಎಂದರು.

ಸುಳ್ಳು ಹೇಳುವುದರ ಮೂಲಕ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ಬೊಮ್ಮಾಯಿಯವರು ಆನೇಕಲ್‌ ಮತ್ತು ಬೀದರ್‌ನಲ್ಲಿ ಹಲವಾರು ಸುಳ್ಳುಗಳನ್ನು ಹೇಳಿದ್ದಾರೆ ಎಂದರು.

ಸದ್ಯಕ್ಕೆ ನಮ್ಮ ಮುಂದೆ ವಿಧಾನ ಪರಿಷತ್‌ ಚುನಾವಣೆ ಹಾಗೂ ವಿಧಾನ ಮಂಡಲ ಅಧಿವೇಶನವಿದೆ. ಆದಾದ ಬಳಿಕ ವರಿಷ್ಠರ ನಿರ್ಧಾರ ಆಧರಿಸಿ ಸಚಿವ ಸಂಪುಟ ವಿಸ್ತರಿಸಲಾಗುವುದು . ಜೆಡಿಎಸ್‌ ಜತೆ ಮೈತ್ರಿ ಬಗ್ಗೆ ಯಾರೂ ಗೊಂದಲದ ಹೇಳಿಕೆ ನೀಡಿಲ್ಲ. ಬಿಜೆಪಿಗೆ ಸೇರಲಿಲ್ಲ ಎನ್ನುವ ಕಾರಣಕ್ಕೆ ತನ್ನನ್ನು ಜೈಲಿಗೆ ಹಾಕಿಸಿದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ನಿರಾಧಾರ. ಎಲ್ಲ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಬೇಕು ಎಂದೇನಿಲ್ಲ .
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next