ಕಾಲ ನಿನ್ನನ್ನು ಗಾಢವಾಗಿ ಪ್ರೀತಿಸಿದ ನನಗೆ, ನಿನ್ನನ್ನು ಅರಿಯುವುದು ಸಾಧ್ಯವಾಗಲಿಲ್ಲ. ನಿನ್ನ ಮನಸ್ಸಲ್ಲಿ ಬೇರೆ ಯಾರೋ ಇದ್ದರೆ, ಅದನ್ನು ನೇರವಾಗಿ ಹೇಳಿ ಬಿಡಬಹುದಿತ್ತು. ಆಗ ಖಂಡಿತ ನಾನು ನಿನ್ನನ್ನು ಪೀಡಿಸುತ್ತಿರಲಿಲ್ಲ.
ನಿನ್ನನ್ನು “ಗೆಳತಿ’ ಎಂದು ಕರೆಯುವುದೇ ಸೂಕ್ತ. ಪ್ರೇಮದ ಅಮಲಿನಲ್ಲಿ ಹೀಗೆ ಕರೆಯುತ್ತಿದ್ದಾನೆ ಅಂತ ಖಂಡಿತ ತಿಳಿಯಬೇಡ. ಏಕೆಂದರೆ, ನಿನ್ನ ಬಗೆಗಿನ ಪ್ರೇಮ ಎಂದೋ ನನ್ನಿಂದ ಹಾರಿಹೋಗಿದೆ. ಅಂದು ನೀನಾಡಿದ ತರಲೇ ಮಾತುಗಳು, ಗಾಳಿಯಲ್ಲಿ ತೇಲಿಬಿಟ್ಟ ಮುತ್ತುಗಳು, ಮುನಿಸು-ಕೋಪ ಇವೆಲ್ಲವೂ ನನ್ನಲ್ಲಿ ಸದಾಕಾಲವೂ ಉಳಿದುಬಿಡುವ ವೇದನೆಯನ್ನು ತುಂಬಿಸಿವೆ. ಪ್ರೇಮವೆಂದರೆ ನಿನ್ನಲ್ಲಿ ಏನಿದೆಯೋ? ಸತ್ಯವಾಗಿಯೂ ನನಗೆ ಅರ್ಥಮಾಡಿಕೊಳ್ಳಲಾಗಲಿಲ್ಲ. ನೀನು ನನ್ನನ್ನು ನಂಬಿಸಿದ್ದೆ. ನಾನು ನಿನ್ನ ನಂಬಿದ್ದೆ ಅಷ್ಟೇ.
ನೀನು ಮುಚ್ಚಿಟ್ಟಿರಬಹುದಾದ ಎಷ್ಟೋ ವಿಷಯಗಳಿವೆ ಎಂದು ಈಗ ಮನಸಿನ ಮೂಲೆಯಲ್ಲಿ ಅನಿಸುತ್ತಿದೆ. ನಾನು ಎಂದಿಗೂ ನಿನ್ನನ್ನು ದೊಡ್ಡಮಟ್ಟದಲ್ಲಿ ಅನುಮಾನಿಸಿರಲಿಲ್ಲ. ಅನುಮಾನಿಸುವಂಥ ಸಂದರ್ಭವನ್ನು ಸೃಷ್ಟಿಸಿದ್ದು ನೀನೇ. ಅದನ್ನು ನಾನು ಬಾಯಿಬಿಟ್ಟು ಹೇಳಲು, ನನಗೆ ನಿನ್ನಷ್ಟು ಕೀಳು ಮಟ್ಟಕ್ಕಿಳಿಯಲು ಸಾಧ್ಯವಿಲ್ಲ. ನೀನು ಮಾಡಿದ ತಪ್ಪುಗಳಿಗೆಲ್ಲ ಸಮಜಾಯಿಷಿ ನೀಡಿ, ಮಂಕು ಬೂದಿ ಎರಚಿ ನಯನವಾಗಿಯೇ ನನಗೆ ದ್ರೋಹ ಮಾಡುತ್ತಲೇ ಬಂದೆ. ಆದರೂ, ನಾನು ನಿನ್ನನ್ನು ನಂಬಿದ್ದೇ. ನನ್ನದು ನೇರ ಮನಸ್ಸಾದ್ದರಿಂದ ಅನಿಸಿದ್ದನ್ನು ನೇರವಾಗಿಯೇ ಕೇಳಿಬಿಡುತ್ತಿದ್ದೆ. ಅದು ನಿನಗೆ ನೋವುಂಟು ಮಾಡುತ್ತಿತ್ತೋ ಏನೋ? ಖಂಡಿತ ನನಗೆ ಗೊತ್ತಿಲ್ಲ. ಆದರೆ, ನೀನು ಮುಕ್ತವಾಗಿ ಮಾತನಾಡುವ ಬದಲಿಗೆ, ವಿಷಯವನ್ನೇ ಮರೆಸುವ ಪ್ರಯತ್ನ ಮಾಡುತ್ತಾ, ನೆಪ ಹೇಳಿ ಜಾರಿಕೊಳ್ಳುತ್ತಿದ್ದೆ. ನನಗೂ ಮನಸ್ಸಿದೆ ಎಂಬುದನ್ನು ಮರೆತು ನೀನು ನನ್ನೊಟ್ಟಿಗೆ ಪ್ರೀತಿಸುವ ನಾಟಕ ಮಾಡಿರುವೆ ಅನಿಸಿ ಅಳು ಬರುತ್ತಿದೆ. ಸುಳ್ಳನ್ನು ಸತ್ಯದ ತಲೆಮೇಲೆ ಹೊಡೆದಂತೆ ಹೇಳುವ ಕಲೆಯನ್ನು ನಿನ್ನಿಂದ ಕಲಿಯಬೇಕು. ನಡೆದಿದ್ದೇ ಒಂದಾದರೇ ಇನ್ನೊಂದು ಸಂದರ್ಭವನ್ನೇ ಸೃಷ್ಟಿಮಾಡಿ ಚಲನಚಿತ್ರದಂತೆ ತೋರಿಸಿಬಿಡುತ್ತೀಯ. ಅಬ್ಬಬ್ಟಾ! ಮೂರುವರ್ಷಗಳ ಕಾಲ ನಿನ್ನನ್ನು ಗಾಢವಾಗಿ ಪ್ರೀತಿಸಿದ ನನಗೆ, ನಿನ್ನನ್ನು ಅರಿಯುವುದು ಸಾಧ್ಯವಾಗಲಿಲ್ಲ. ನಿನ್ನ ಮನಸ್ಸಲ್ಲಿ ಬೇರೆ ಯಾರೋ ಇದ್ದರೆ, ಅದನ್ನು ನೇರವಾಗಿ ಹೇಳಿ ಬಿಡಬಹುದಿತ್ತು. ಖಂಡಿತ ನಾನು ನಿನ್ನನ್ನು ಪೀಡಿಸುತ್ತಿರಲಿಲ್ಲ.
ನೀನು ಬಯಸಿದ್ದು ಪ್ರೀತಿಯನ್ನಲ್ಲ. ಆಡಂಬರದ ಬದುಕನ್ನ. ಅದನ್ನ ನೇರವಾಗಿ ಹೇಳದೇ ಕೊನೆ ಗಳಿಗೆಯಲ್ಲಿ ಕೈಕೊಟ್ಟು ನಡೆದೆ. ನಿನಗೆ ಮನಸ್ಸಿದೆ ಎಂದು ನನಗನಿಸುತ್ತಿಲ್ಲ. ಸಂಬಳ ತರುವ ಹುಡುಗ ನೀನಲ್ಲ’ ಎಂದು ಅವಮಾನಿಸಿ, ಕೀಳಾಗಿ ಮಾತಾಡಿ ಹೃದಯವನ್ನು ಚುಚ್ಚಿದೆ. ನನಗೆ ನಿನ್ನ ನೆನಪುಗಳನ್ನು ಹೊಸಕಿ ಹಾಕುವುದು ಕಷ್ಟವೇನಲ್ಲ. ಆದರೂ ನಾನು ನಿನ್ನನ್ನು ಕೇಳುವುದು ಒಂದೇ ಪ್ರಶ್ನೆ. ನನಗ್ಯಾಕೆ ಮೋಸ ಮಾಡಿದೆ?
-ಅಜಯ್ ಕುಮಾರ್.ಎಂ