Advertisement

Explained: ಲೋಕಸಭೆ: ಕೋವಿಡ್ 19- 4 ಗಂಟೆ ಅವಧಿಯಲ್ಲಿ ದಿಢೀರ್ ಅಂತ ಲಾಕ್ ಡೌನ್ ಹೇರಿದ್ದೇಕೆ?

10:54 AM Sep 16, 2020 | Nagendra Trasi |

ನವದೆಹಲಿ:ವಿಶ್ವಾದ್ಯಂತ ಹಬ್ಬುತ್ತಿದ್ದ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ನಾಲ್ಕು ಗಂಟೆಯ ಮೊದಲು ದಿಢೀರ್ ಎಂದು ಘೋಷಿಸಿದ್ದೇಕೆ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಕೇಂದ್ರ ಸರ್ಕಾರ ಮಂಗಳವಾರ (ಸೆಪ್ಟೆಂಬರ್ 15, 2020) ಲಿಖಿತವಾಗಿ ಉತ್ತರ ನೀಡಿದೆ.

Advertisement

ಕೇಂದ್ರದ ಉತ್ತರವೇನು?

ಜನರ ಓಡಾಟ, ಸಂಚಾರ ಹೆಚ್ಚಾದರೆ ಮಾರಕ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುವ ಅಪಾಯ ಹೆಚ್ಚಾಗಿದೆ ಎಂಬ ತಜ್ಞರ ವರದಿಯ ಆಧಾರದ ಮೇಲೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.

ಮನೀಶ್ ತಿವಾರಿ ಪ್ರಶ್ನೆ:

ಮಾರ್ಚ್ 23ರಂದು ಕೇವಲ ನಾಲ್ಕು ಗಂಟೆ ಅವಧಿಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗುತ್ತದೆ ಎಂದು ಘೋಷಿಸಲು ಕಾರಣವೇನು? ಹೀಗೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರುವ ಅಗತ್ಯವಾದರು ಏನಿತ್ತು? ಲಾಕ್ ಡೌನ್ ನಿಂದಾಗಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಯಿತೇ? ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪ್ರಶ್ನಿಸಿದ್ದಾರೆ.

Advertisement

ಕೇಂದ್ರದ ಉತ್ತರ

ಈ ಕುರಿತು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ನೀಡಿರುವ ಲಿಖಿತ ಉತ್ತರದಲ್ಲಿ, ಜನವರಿ 7ರಂದು ಕೋವಿಡ್ 19 ಸೋಂಕು ವಿದೇಶದಲ್ಲಿ ಹರಡಲು ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್, ಸಾರ್ವಜನಿಕ ಪ್ರಕಟಣೆ, ಕ್ವಾರಂಟೈನ್ ವ್ಯವಸ್ಥೆ ಕೈಗೊಂಡಿತ್ತು ಎಂದು ತಿಳಿಸಿದ್ದಾರೆ.

ಗುಂಪು, ಗುಂಪಾಗಿ ಜನರು ಓಡಾಡುತ್ತಿದ್ದರೆ ದೇಶದ ಎಲ್ಲಾ ಭಾಗಗಳಲ್ಲಿಯೂ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿತ್ತು. ಈ ಹಿನ್ನೆಲೆಯಲ್ಲಿಯೇ ಮಾರ್ಚ್ 24ರಂದು ದೇಶಾದ್ಯಂತ ಲಾಕ್ ಡೌನ್ ಹೇರಿಕೆ ಬಗ್ಗೆ ಘೋಷಿಸಲಾಗಿತ್ತು. ಕೋವಿಡ್ 19 ಸೋಂಕಿನ ಜಾಗತಿಕವಾಗಿ ಸಂಭವಿಸಿದ ಸಾವು ಮತ್ತು ರೋಗದ ಪರಿಣಾಮವನ್ನು ಅವಲಂಬಿಸಿ ದೇಶದಲ್ಲಿ ಕೋವಿಡ್ 19 ಸೋಂಕು ತಡೆಗಟ್ಟಲು ಕೇಂದ್ರ ಲಾಕ್ ಡೌನ್ ನಿರ್ಧಾರ ತೆಗೆದುಕೊಂಡಿರುವುದಾಗಿ ವಿವರಿಸಿದೆ.

ದೇಶಾದ್ಯಂತ ಲಾಕ್ ಡೌನ್ ಹೇರಿದ್ದರಿಂದ ಕೋವಿಡ್ 19 ಸೋಂಕು ಹರಡುವುದನ್ನು ಭಾರತ ಯಶಸ್ವಿಯಾಗಿ ತಡೆಗಟ್ಟಿದೆ. ಅಷ್ಟೇ ಅಲ್ಲ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಹೆಚ್ಚುವರಿಯಾಗಿ ಆರೋಗ್ಯ ಕ್ಷೇತ್ರದ ಸೌಕರ್ಯವನ್ನು ಅಭಿವೃದ್ದಿಪಡಿಸಲು ನೆರವಾಗಿರುವುದಾಗಿ ತಿಳಿಸಿದೆ.

2020ರ ಮಾರ್ಚ್ ಗೆ ಹೋಲಿಸಿದಲ್ಲಿ ಕೋವಿಡ್ ನಂತರ ಐಸೋಲೇಶನ್ ಬೆಡ್ ಗಳನ್ನು 22 ಪಟ್ಟು ಹೆಚ್ಚಿಸಲಾಗಿದೆ, ಐಸಿಯು ಬೆಡ್ ಗಳನ್ನು 14 ಪಟ್ಟು ಹೆಚ್ಚಳ ಮಾಡಲಾಗಿದೆ. ಅಲ್ಲದೇ ಈ ಸಮಯದಲ್ಲಿ ಪ್ರಯೋಗಾಲಯಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲಾಗಿದೆ. ಒಂದು ವೇಳೆ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಹೇರದಿದ್ದರೆ ದೇಶದಲ್ಲಿ ಇನ್ನೂ 14ರಿಂದ 29 ಲಕ್ಷದಷ್ಟು ಕೋವಿಡ್ 19 ಸೋಂಕು ಪತ್ತೆಯಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next