Advertisement

ಅಂಬೇಡ್ಕರ್‌ಗೆ ಕಾಂಗ್ರೆಸ್‌ ಭಾರತರತ್ನ ನೀಡಲಿಲ್ಲವೇಕೆ?

10:05 AM Feb 26, 2018 | Team Udayavani |

ಕಲಬುರಗಿ: ಸ್ವಾತಂತ್ರ್ಯ ನಂತರ ಅಧಿಕಾರ ನಡೆಸುತ್ತಾ ಬಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ದಲಿತರು ಚುನಾವಣೆ ಬಂದಾಗಲೇ ನೆನಪಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಟೀಕಿಸಿದರು. ನಗರದ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಬಿಜೆಪಿ ಎಸ್‌ಸಿ ಸಮುದಾಯಗಳ ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನದವರೆಗೂ ಶೇ.80ರಷ್ಟು ದಲಿತರಿಗೆ ಪಕ್ಕಾ ಮನೆ ಇಲ್ಲ. ಆದರೆ 2022ರೊಳಗೆ ರಾಜ್ಯದಲ್ಲಿ ಯಡಿಯೂರಪ್ಪ, ಕೇಂದ್ರದಲ್ಲಿ ನರೇಂದ್ರ ಮೋದಿ
ಸರ್ಕಾರ ಎಲ್ಲರಿಗೂ ಪಕ್ಕಾ ಮನೆ ಜತೆಗೆ ಉಚಿತ ವಿದ್ಯುತ್‌ ಪೂರೈಸಲಿದೆ ಎಂದು ಘೋಷಿಸಿದರು. 

Advertisement

ಕಾಂಗ್ರೆಸ್‌ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ.ಬಾಬು ಜಗಜೀವನರಾಮ್‌ ಅವರಿಗೆ ಅವಮಾನ ಮಾಡಿದೆ. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ ಅವರ ಬಗ್ಗೆ ಕಾಂಗ್ರೆಸ್‌ಗೆ  ನಿಜವಾದ ಗೌರವವಿದ್ದರೆ ಭಾರತ ರತ್ನ ಏಕೆ ನೀಡಲಿಲ್ಲ. ಈ ಪ್ರಶ್ನೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬಳಿ ಉತ್ತರವಿದೆಯೇ? ಭಾರತ ರತ್ನ ಯಾರು ನೀಡಿದ್ದಾರೆ ಎಂಬುದನ್ನು ಅವರೇ ಜನರಿಗೆ ತಿಳಿಸಲಿ. ಬಾಬು ಜಗಜೀವನರಾಮ್‌ ಪ್ರಧಾನಿಯಾಗಲು ಮುಂದಾಗಿದ್ದರು. ಆದರೆ ಅದನ್ನು ತಪ್ಪಿಸಿದ್ದೇ ಕಾಂಗ್ರೆಸ್‌ ಪಕ್ಷ ಎಂದು ಜರಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಅಂಬೇಡ್ಕರ ಜನ್ಮಸ್ಥಳ, ಮಹಾರಾಷ್ಟ್ರದ ನಾಗಪುರದ ದೀಕ್ಷಾ ಭೂಮಿ ಮತ್ತು ನವದೆಹಲಿ, ಲಂಡನ್‌ದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಅಲ್ಲದೇ 200 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದಾರೆ. ಅದೇ ರೀತಿ ಉಚಿತ ಅನಿಲ ಭಾಗ್ಯ, 2022ರೊಳಗೆ ಎಲ್ಲ ದಲಿತರಿಗೆ ಪಕ್ಕಾ ಮನೆ ನೀಡುವ ಕಾರ್ಯಸೂಚಿ ಹೊಂದಿದ್ದಾರೆ ಎಂದರು. 

ಸಿದ್ದರಾಮಯ್ಯ ಸರ್ಕಾರದಲ್ಲಿ 318 ದಲಿತರ ಹತ್ಯೆಯಾಗಿದೆ. 9080 ಜನರ ಮೇಲೆ ದೌರ್ಜನ್ಯವಾಗಿದೆ. ಮಹಿಳೆಯರ
ಮೇಲೆ ಅತ್ಯಾಚಾರ ನಡೆದಿದೆ. ಇದನ್ನು ಗೃಹ ಖಾತೆ ಸಚಿವರು ಸನದಲ್ಲಿಯೇ ಹೇಳಿದ್ದಾರೆ. ಕಾಂಗ್ರೆಸ್‌ನ ಮೋಸ ಗೊತ್ತಾಗಿ ಈಗ ದಲಿತರು ಬಿಜೆಪಿ ಜತೆಗೆ ಬರುತ್ತಿರುವುದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲಿಕ್ಕಾಗುತ್ತಿಲ್ಲ. ಭ್ರಷ್ಟಾಚಾರ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 40 ಲಕ್ಷ ರೂ. ಮೌಲ್ಯದ ಗಡಿಯಾರ ಏಲ್ಲಿಂದ ಬಂತು ಎಂದು ವಾಗ್ಧಾಳಿ ನಡೆಸಿದರು.

Advertisement

13 ನಿಮಿಷ ಭಾಷಣ: ಸಂಜೆ ಸ್ವಲ್ಪ ತಂಪಾದ ವಾತಾವರಣ ಇರುವುದರಿಂದ ಅಮಿತ್‌ ಶಾ ಅವರು ಬಹಳ ಹೊತ್ತಿನವರೆಗೂ ಮಾತನಾಡುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಸ್ವಲ್ಪ ಬಳಲಿದಂತೆ ಕಂಡ ಶಾ ಅವರು 13 ನಿಮಿಷಗಳ ಕಾಲ ಮಾತನಾಡಿದರು. 

ಕಪ್ಪು ಬಾವುಟ: ಅಮಿತ್‌ ಶಾ ಭಾಷಣ ಆರಂಭಿಸುತ್ತಿದ್ದಂತೆ ಸಭೆಯೊಳಗೆ ಬಂದಿದ್ದ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರು. ತಕ್ಷಣ ಎಚ್ಚೆತ್ತ ಪೊಲೀಸರು ಬಂಧಿಸಿದರು. ಇದಕ್ಕೆ ಅಮಿತ್‌ ಶಾ ಟಾಂಗ್‌ ನೀಡುವುದರೊಂದಿಗೆ ಭಾಷಣ ಆರಂಭಿಸಿ, ಅವರು ಕಾಂಗ್ರೆಸ್‌ನವರಿದ್ದಾರೆ. ಎಷ್ಟು ಕೂಗುತ್ತಾರೆ ಕೂಗಲು ಬಿಡಿ. ಅವರ ಕಡೆ ಗಮನಹರಿಸುವ ಅವಶ್ಯಕತೆಯಿಲ್ಲ ಎಂದರು. ತದನಂತರ ಕರ್ನಾಟಕ ಭಾವಿ ಸಿಎಂ ಯಡಿಯೂರಪ್ಪ ಎಂತಲೇ ಭಾಷಣ ಆರಂಭಿಸಿದರು. ಸಿದ್ದರಾಮಯ್ಯ ಸರ್ಕಾರ
ಕಿತ್ತೂಗೆಯಲು ಸಂಕಲ್ಪಗೈಯುವಂತೆ ಜನತೆಗೆ ಶಾ ಕರೆ ನೀಡಿದರು. ಕೇಂದ್ರದ ಸಚಿವ ರಮೇಶ ಜಿಗಜಿಣಗಿ, ಸಂಸದ ಶ್ರೀರಾಮುಲು, ಮಾಜಿ ಸಚಿವರಾದ ಗೋವಿಂದ ಕಾರಜೋಳ ಮುಂತಾದವರು ಮಾತನಾಡಿದರು. ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್‌. ವೀರಯ್ಯ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಅನೇಕರು ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಎಲ್ಲ ದಲಿತರಿಗೆ ಪಕ್ಕಾ ಮನೆ ಹಾಗೂ ನಿವೇಶನ ಕಲ್ಪಿಸಲಾಗುವುದಲ್ಲದೇ ಸಂಕಲ್ಪದಂತೆ ಈ ಕಾರ್ಯ ಗೈಯಲಾಗುವುದು. ಹಿಂದಿನ ಸಣ್ಣ ಪುಟ್ಟ ತಪ್ಪುಗಳಿದ್ದಲ್ಲಿ ಮರೆತು ಬಿಡಿ, ಈಗ ಅವಕಾಶ ನೀಡಿ.
ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next