ನವದೆಹಲಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ವಿವಾದದ ನಡುವೆಯೇ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾಶ್ಮೀರ ಬಿಕ್ಕಟ್ಟನ್ನು ನೆಹರು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ವಿವಾದವನ್ನಾಗಿ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಿರಿಕಿರಿ ಎಂದು ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ನಿಲ್ಲಿಸಿದ ಜಡ್ಜ್ ಪಾಶಾ, ಕೇರಳದಲ್ಲಿ ವಿವಾದ
ಕಾಶ್ಮೀರ ಸಮಸ್ಯೆಯನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಬಾರದಿತ್ತು, ಇದು ಭಾರತದ ಸಮಸ್ಯೆಯಾಗಿತ್ತು ಎಂದು ಸೀತಾರಾಮನ್ ಹೇಳಿದರು. 1948ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಮೊದಲ ಯುದ್ಧ ಆರಂಭವಾದಾಗ ಪ್ರಧಾನಿ ಜವಾಹರಲಾಲ್ ನೆಹರು ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ಅರ್ಜಿಯ ಮೂಲಕ ಮನವಿ ಮಾಡಿಕೊಂಡಿದ್ದರು.
ಬುಧವಾರ ರಾಜ್ಯ ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕಾಶ್ಮೀರ ಸಮಸ್ಯೆ ಭಾರತಕ್ಕೆ ಸಂಬಂಧಿಸಿದ್ದಾಗಿತ್ತು. ಕಾಂಗ್ರೆಸ್ ಇದನ್ನು ವಿಶ್ವಸಂಸ್ಥೆಗೆ ಕೊಂಡೊಯ್ದಿತ್ತು. ಇದನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಿದ್ದು ಯಾರು? ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ವಿಶ್ವಸಂಸ್ಥೆಗೆ ಕೊಂಡೊಯ್ದಿದ್ದರು. ಏಕೆಂದರೆ ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯದಿದ್ದರೆ ಇದು ಬಗೆಹರಿಯುವುದಿಲ್ಲ ಎಂದು ಬ್ರಿಟಿಷರು ಕೆಲವೊಂದು ಸಲಹೆಯನ್ನು ನೀಡಿರಬಹುದು. ಅದಕ್ಕೆ ನೆಹರು ಅವರು ವಿಶ್ವಸಂಸ್ಥೆ ಕದ ತಟ್ಟಿರುವುದಾಗಿ ಹೇಳಿದ್ದಾರೆ.
ನೆಹರು ಅವರು ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದ ಪರಿಣಾಮ ಇಂದಿಗೂ ನಮ್ಮ ನೆರೆಯ ದೇಶ ಅದನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಸೀತಾರಾಮನ್ ಪಾಕಿಸ್ತಾನದ ಹೆಸರು ಹೇಳದೇ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.