ಸಮಷ್ಟೀಪುರ/ ಮುಜಾಫರ್‌ಪುರ: ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರು ವಿಪಕ್ಷಕ್ಕೆ ಕಪ್ಪುಹಣ ಕಳುಹಿಸುತ್ತಿದ್ದರೆ ಕೇಂದ್ರ ಸರ್ಕಾರ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಸಮಷ್ಟೀಪುರ್ ಮತ್ತು ಮುಜಾಫರ್‌ಪುರದಲ್ಲಿ ಚುನಾವಣಾ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರಿಂದ ಮಾತ್ರ ಮೋದಿ ಭಾರತದ ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ಪ್ರತಿಪಾದಿಸಿದರು.
“ಅಂಬಾನಿ ಮತ್ತು ಅದಾನಿಗಳ ಬಗ್ಗೆ ಕಾಂಗ್ರೆಸ್ ಪಕ್ಷದವರು ಮೌನವಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ, ನಾವು ಮೌನವಾಗಿಲ್ಲ. ಅವರ ಆರೋಪದ ಪ್ರಕಾರ, ನಾವು ಈ ಕೈಗಾರಿಕೋದ್ಯಮಿಗಳಿಂದ ಕಪ್ಪು ಹಣವನ್ನು ಪಡೆದಿದ್ದರೆ ಅವರ ಸರಕಾರ ಏಕೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ನಾನು ಕೇಳುತ್ತಿದ್ದೇನೆ? ಅವರೇ ಕಪ್ಪುಹಣ ಸ್ವೀಕರಿಸಿದ ಕಾರಣವೇ? ಎಂದು ಖರ್ಗೆ ಕಿಡಿ ಕಾರಿದರು.
“ಅಂತಿಮವಾಗಿ, ಈ ಇಬ್ಬರು ಉದ್ಯಮಿಗಳ ಬಳಿ ಕಪ್ಪುಹಣವಿದೆ ಎಂದು ಪ್ರಧಾನಿ ಒಪ್ಪಿಕೊಂಡಿದ್ದಾರೆ … ಹಾಗಾದರೆ ನೀವು ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ? ಕಪ್ಪು ಹಣ ಎಲ್ಲಿಂದ ಬಂತು? ನೀವು ಉತ್ತರಿಸಬೇಕು, ”ಎಂದು ಒತ್ತಾಯಿಸಿದರು.
ಬುಧವಾರ ಪ್ರಧಾನಿ ಮೋದಿ ಅವರು ‘ಕಾಂಗ್ರೆಸ್ ಪಕ್ಷ ಅಂಬಾನಿ ಮತ್ತು ಅದಾನಿ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿ ಇಬ್ಬರು ಕೈಗಾರಿಕೋದ್ಯಮಿಗಳಿಂದ ಪಕ್ಷವು “ಟೆಂಪೋ ಲೋಡ್ ಕಪ್ಪುಹಣ” ಪಡೆದಿದೆಯೇ’ ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಖರ್ಗೆ
” ಪ್ರಧಾನಿಯವರು ತಮ್ಮನ್ನು ತಾವು ದೇಶದ ಚೌಕಿದಾರ ಎಂದು ಕರೆದುಕೊಳ್ಳುತ್ತಾರೆ. ಈ ಟೆಂಪೋಗಳನ್ನು ಚೌಕಿದಾರ್ ಏಕೆ ತಡೆದು ನಿಲ್ಲಿಸಲಿಲ್ಲ?. ‘ಬಿಜೆಪಿಯನ್ನು ಸೋಲಿಸದಿದ್ದರೆ ಪ್ರಜಾಪ್ರಭುತ್ವವನ್ನು ಕೊನೆಗಾಣಿಸುತ್ತದೆ” ಎಂದು ಕಿಡಿ ಕಾರಿದರು.
‘ಪ್ರಜಾಪ್ರಭುತ್ವದಿಂದಾಗಿಯೇ ಚಹಾ ಮಾರುವವನ ಮಗ ಭಾರತದ ಪ್ರಧಾನಿಯಾಗಲು, ಕೂಲಿ ಕಾರ್ಮಿಕನ ಮಗ ದೇಶದ ರಾಷ್ಟ್ರಪತಿಯಾಗಲು ಸಾಧ್ಯವಾಯಿತು ಎಂದರು.