ದುಬೈ : ಪಾಕಿಸ್ತಾನ ವಿರುದ್ಧದ ಭಾನುವಾರ ರೋಚಕ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ನಿಕಟವರ್ತಿಯೊಬ್ಬರು ನೀಡಿದ ರಾಷ್ಟ್ರ ಧ್ವಜವೊಂದನ್ನು ಸ್ವೀಕರಿಸದೇ ಇದ್ದುದು ಭಾರಿ ಚರ್ಚೆ ಮತ್ತು ರಾಜಕೀಯವಾಗಿಯೂ ಟೀಕೆಗಳಿಗೆ ಆಹಾರ ವಾಗಿದೆ.
ಟ್ವಿಟ್ಟರ್ ಮತ್ತು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸಾವಿರಾರು ರಾಜಕಾರಣಿಗಳು ತ್ರಿವರ್ಣ ಧ್ವಜವನ್ನು ಹಿಡಿಯುವ ಮೂಲಕ ಸಂಭ್ರಮಿಸಲಿಲ್ಲ ಎಂದು ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಪ್ರಬಲ ನಾಯಕರಲ್ಲಿ ಒಬ್ಬರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಅವರ ಒಂದು ಕ್ಷಣದ ನಡೆ ಟ್ರೋಲಿಗರಿಗೆ, ವಿಪಕ್ಷ ನಾಯಕರಿಗೆ ಟೀಕಾ ಪ್ರಹಾರ ನಡೆಸಲು ಹೊಸ ಅಸ್ತ್ರ ಸಿಕ್ಕಂತಾಯಿತು.
ಎಸಿಸಿ ನಿಯಮ
ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ. ಎಸಿಸಿ ನಿಯಮಗಳಿಗೆ ಬದ್ಧರಾಗಿರಬೇಕು, ನೀತಿ ಸಂಹಿತೆಯ ಪ್ರಕಾರ, ಅವರು ಎಲ್ಲಾ ತಂಡಗಳ ಸಂಭ್ರಮದಲ್ಲೂ ತಟಸ್ಥತೆಯನ್ನು ತೋರಿಸಬೇಕು”ಎಂದು ಟ್ವೀಟ್ ಒಂದರಲ್ಲಿ ಸ್ಪಷ್ಟನೆಯನ್ನೂ ನೀಡಲಾಗಿದೆ.
ಶಾ ಅವರು ಚಪ್ಪಾಳೆ ತಟ್ಟಿ ಎದ್ದು ನಿಂತು ಸಂಭ್ರಮಿಸುತ್ತಿದ್ದರು,ನೀತಿ ಸಂಹಿತೆಯ ಪ್ರಕಾರ ಅವರು ನಡೆದು ಕೊಂಡಿದ್ದಾರೆ ಎಂದು ಅವರ ಬೆಂಬಲಿಗರು ಸಮರ್ಥನೆ ನೀಡಿದ್ದಾರೆ.