ನವದೆಹಲಿ: ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಮತ್ತು ಟಿಪು ಸುಲ್ತಾನ್ ನಡುವಿನ ವಾಕ್ಸಮರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತಾರಕಕ್ಕೇರಿರುವ ನಡುವೆಯೇ ಇತಿಹಾಸಕಾರ, ಲೇಖಕ ವಿಕ್ರಮ್ ಸಂಪತ್ ಕಾಂಗ್ರೆಸ್ ನಿಲುವಿನ ಬಗ್ಗೆ ಬುಧವಾರ (ಆಗಸ್ಟ್ 17) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಾಲೇಜು ಅಧ್ಯಕ್ಷ,ಪ್ರಾಂಶುಪಾಲರ ಮೇಲೆ ಎಫ್ಐಆರ್
ವೀರ ಸಾವರ್ಕರ್ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮುಖಂಡರು ಇತಿಹಾಸದ ಪುಟಗಳನ್ನು ತಿರುವಿ ಹಾಕಬೇಕಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವರ್ಕರ್ ಅವರ ಪಾತ್ರ ಅನನ್ಯವಾದದ್ದು ಎಂದು ಬಣ್ಣಿಸಿದ್ದರು. ಒಂದು ವೇಳೆ ಸಾವರ್ಕರ್ ಹೇಡಿಯಾಗಿದ್ದರೆ ಇಂದಿರಾ ಗಾಂಧಿ ಅವರನ್ನು ಯಾಕೆ ಗೌರವಿಸಬೇಕಾಗಿತ್ತು ಎಂದು ವಿಕ್ರಮ್ ಪ್ರಶ್ನಿಸಿದ್ದಾರೆ.
ಸಾವರ್ಕರ್ ಅವರು ವಿಧಿವಶರಾದ ನಂತರ 1966ರಲ್ಲಿ ಇಂದಿರಾ ಗಾಂಧಿ ಅವರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಹೊರತಂದಿದ್ದರು. ಅಷ್ಟೇ ಅಲ್ಲ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಕ ಸಾವರ್ಕರ್ ಕುರಿತಾದ ಸಾಕ್ಷ್ಯಚಿತ್ರ ಪಡೆದಿದ್ದರು. ಮುಂಬೈನಲ್ಲಿ ಸಾವರ್ಕರ್ ಸ್ಮಾರಕಕ್ಕೆ ಇಂದಿರಾ ಗಾಂಧಿ ವೈಯಕ್ತಿಕ ಅನುದಾನ ನೀಡಿದ್ದರು ಎಂದು ಇತಿಹಾಸಕಾರ ವಿಕ್ರಮ್ ತಿಳಿಸಿದ್ದಾರೆ.
ಇಂದು ಸಾವರ್ಕರ್ ಅವರನ್ನು ಗುರಿಯಾಗಿರಿಸಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಬೇಕಾಗಿದೆ. ಹಾಗಾದರೆ ಇಂದಿರಾ ಗಾಂಧಿ ಯಾಕೆ ಅವರನ್ನು ಗೌರವಿಸಿದ್ದರು ಎಂಬುದನ್ನು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಆಧುನಿಕ ದಿನದ ಸಾವರ್ಕರ್ ಮತ್ತು ಜಿನ್ನಾ ದೇಶ ವಿಭಜನೆಯ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಹೇಳಿಕೆ ನಂತರ ಇತಿಹಾಸಕಾರ ವಿಕ್ರಮ್ ಇಂಡಿಯಾ ಟುಡೇಯ ಸಂದರ್ಶನದಲ್ಲಿ ಈ ಪ್ರತಿಕ್ರಿಯೆ ಕೊಟ್ಟಿರುವುದಾಗಿ ತಿಳಿಸಿದೆ.