Advertisement

ಅಕ್ಬರ್,ಟಿಪ್ಪು,ಅಲೆಗ್ಸಾಂಡರನ್ನು ಮಾತ್ರ ಮಹಾನ್ ಎಂದು ಚಿತ್ರಿಸಿದ್ದೇಕೆ?:ಬಿಜೆಪಿ ಪ್ರಶ್ನೆ

02:57 PM May 20, 2022 | Team Udayavani |

ಬೆಂಗಳೂರು : ಪಠ್ಯಕ್ರಮ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸೋತಾಗ ಕಾಂಗ್ರೆಸ್ ಸುಳ್ಳಿಗೆ ಶರಣಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಟ್ವೀಕಿಸಿದೆ.

Advertisement

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ಸಿಗರೇ, ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯ ಬಡಿವಾರವನ್ನು ಇನ್ನೆಷ್ಟು ದಿನ ಮಕ್ಕಳ ಮೇಲೆ ಹೇರಲು ಯತ್ನಿಸುತ್ತೀರಿ? ನೀವು ಬಳುವಳಿಯಾಗಿ ಪಡೆದ ಗುಲಾಮಿ ಇತಿಹಾಸವನ್ನು ಮಾತ್ರ ವಿದ್ಯಾರ್ಥಿಗಳು ಓದಬೇಕು ಎನ್ನುವುದನ್ನು ಸ್ವತಂತ್ರ ಭಾರತೀಯರು ಸಹಿಸಲು ಸಾಧ್ಯವೇ? ಎಂದು ಟೀಕಿಸಿದೆ.

ಶಿಕ್ಷಣದಲ್ಲಿ ಬಣ್ಣ ಹುಡುಕುವುದೇ ಕಾಂಗ್ರೆಸ್ ಚಾಳಿಯಾಗಿದೆ.ಶಿಕ್ಷಣದಲ್ಲಿ ಇರಬೇಕಾದದ್ದು ಮೌಲ್ಯವೇ‌ ಹೊರತು, ಕಾಂಗ್ರೆಸ್ ಪ್ರತಿಪಾದಿಸುವ ಬಣ್ಣ, ರುಚಿಯಲ್ಲ! ಪಠ್ಯ ಪುಸ್ತಕದ ಮೂಲಕ ಒಂದು ಪಂಥಿಯ, ಸಮುದಾಯದ ಓಲೈಕೆಗಾಗಿ ಹಿಂದೂ ವಿರೋಧಿಗಳನ್ನು ಹೋರಾಟಗಾರರು, ವೀರರು, ಶೂರರು ಎಂದು ಕಾಂಗ್ರೆಸ್‌ ಬಿಂಬಿಸುತ್ತಾ ಬಂದಿವೆ. ಇದನ್ನೆಲ್ಲಾ ತೊಡೆದು ಹಾಕಲು ಪಠ್ಯ ಪುಸ್ತಕದಲ್ಲಿ ಬದಲಾವಣೆ ಆಗಲೇ ಬೇಕಿದೆ. ಬದಲಾವಣೆ ಪ್ರಕೃತಿ ನಿಯಮ.ಅಕ್ಬರ್ ದಿ ಗ್ರೇಟ್, ಮೈಸೂರು ಹುಲಿ ಟಿಪ್ಪು ಸುಲ್ತಾನ್,ಅಲೆಗ್ಸಾಂಡರ್ ದಿ ವಾರಿಯರ್ ಹೀಗೆ ಕೆಲವರನ್ನು ಮಾತ್ರ ಮಹಾನ್ ಎಂದು ಚಿತ್ರಿಸಿದ್ದೇಕೆ ಎಂದು‌ ಪ್ರಶ್ನಿಸಿದೆ.

ದಶಕಗಳಿಂದ ಮಕ್ಕಳಲ್ಲಿ ಕಾಂಗ್ರೆಸ್ ಇದನ್ನೇ ಬಿತ್ತಿದೆ. ಈಗಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಇದನ್ನು ಸರಿಪಡಿಸುವ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಮತ್ತು ಅಭಿನಂದನೀಯ.ಭಾರತೀಯರಿಗೆ ಬೇಕಾದದ್ದು ನಮ್ಮ ಶೌರ್ಯ ಪರಂಪರೆಯ ಮೌಲ್ಯಯುತ ಇತಿಹಾಸವೇ ಹೊರತು, ಕಾಂಗ್ರೆಸ್ಸಿಗರು ಭಜನೆ ಮಾಡುವ ಪರಕೀಯರ ಇತಿಹಾಸವಲ್ಲ. ದೇಶವನ್ನು 800 ವರ್ಷಗಳ ಕಾಲ‌ ಲೂಟಿ ಹೊಡೆದವರ ಇತಿಹಾಸವನ್ನು ವೈಭವೀಕರಿಸುವುದರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಷ್ಟೊಂದು ಆಸಕ್ತಿಯೇಕೆ? ಎಂದು ಪ್ರಶ್ನಿಸಿದೆ.

ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಿದರೆ ವಿರೋಧ
√ ಶಿಕ್ಷಣದಲ್ಲಿ ಭಾರತೀಯ ಪರಂಪರೆ ಪ್ರಕಟಿಸಿದರೆ ವಿರೋಧ
√ ಶಿಕ್ಷಣದಲ್ಲಿ ವಾಸ್ತವತೆ ಬೋಧಿಸಿದರೆ ವಿರೋಧ
ಬರೇ ಚಾಚಾ ನೆಹರೂ, ಉಕ್ಕಿನ ಮಹಿಳೆ, ನಕಲಿ ಗಾಂಧಿ ಪರಿವಾರದ ಶಿಕ್ಷಣ ಬೋಧಿಸಬೇಕೇ? ಎಂದು ಪ್ರಶ್ನಿಸಿದೆ.

Advertisement

ಪ್ರಗತಿಪರರೆಂದರೆ ಯಥಾಸ್ಥಿತಿವಾದಿಗಳು. ಅಂದರೆ ಮೆಕಾಲೆ ಶಿಕ್ಷಣ ಪ್ರತಿಪಾದಕರು. ಭಾರತೀಯತೆಯನ್ನು ಪ್ರತಿಪಾದಿಸಲು ಇರುವ ಮೊದಲ ಅಡ್ಡಿ ಪ್ರಗತಿಪರರದ್ದೇ, ಇವರ ಹಿಂದೆ ಕಾಂಗ್ರೆಸ್ ಓಡುತ್ತದೆ ಅಷ್ಟೇ. ಭಾರತೀಯತೆ ಪ್ರತಿಪಾದಿಸಿದರೆ ಕಾಂಗ್ರೆಸ್ಸಿಗರಿಗೇನು ಸಮಸ್ಯೆ? ಶಿಕ್ಷಣದ ಮೂಲಕ ಒಂದಷ್ಟು ಪೀಳಿಗೆಗಳನ್ನು ಕಾಂಗ್ರೆಸ್‌ ಹಾಳು ಮಾಡಿತು. ಈಗ ಶಿಕ್ಷಣ ವ್ಯವಸ್ಥೆಯಲ್ಲಿ, ಪಠ್ಯದಲ್ಲಿ ಬದಲಾವಣೆ ತಂದರೆ ಸುಳ್ಳುಗಳ ಮೂಲಕ ದಾರಿತಪ್ಪಿಸುತ್ತಿದ್ದಾರೆ. ಸುಳ್ಳಿನ ಆಟ ಇನ್ನು ನಡೆಯದು, ಸುಳ್ಳಿನ ಇತಿಹಾಸವನ್ನು ಬದಲಾಯಿಸುತ್ತೇವೆ ಎಂದು ಸವಾಲು ಹಾಕಿದೆ.

ತಮ್ಮ ಸಿದ್ಧಾಂತ ಸವಕಲಾಗುತ್ತಿದೆ ಎಂದಾಗ ಕಾಂಗ್ರೆಸ್ ಹಾಗೂ ಕಮ್ಯುನಿಷ್ಟ್ ಸುಳ್ಳಿನ ಮೊರೆ ಹೋಗುತ್ತದೆ, ಇದು ಹಳೆಯ ಚಾಳಿ.ಪಠ್ಯದಿಂದ ನಾರಾಯಣಗುರು, ಭಗತ್ ಸಿಂಗ್ ಅವರ ಪಾಠ ಕೈ ಬಿಡಲಾಗಿದೆ ಎಂಬುದು ಹಸಿ ಸುಳ್ಳು. ಸಿದ್ದರಾಮಯ್ಯ, ಡಿಕೆಶಿ ಅವರೇ ಈ ಮನಸ್ಥಿತಿಯಿಂದ ಹೊರಬನ್ನಿ, ಸುಳ್ಳಿನಿಂದ ಏನು ಸಾಧಿಸುತ್ತೀರಿ ಎಂದು ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next