ರಾಜ್ಯದಲ್ಲಿ ಕೊರೊನಾ ಕೇಸುಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು ಆತಂಕದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಇದು ಕೇವಲ ರಾಜ್ಯಕ್ಕಷ್ಟೇ ಅಲ್ಲ, ಇಡೀ ದೇಶದ ಪರಿಸ್ಥಿತಿಯೂ ಅದೇ ರೀತಿಯಲ್ಲೇ ಇದೆ. ಇದರ ನಡುವೆಯೇ ದೇಶಾದ್ಯಂತ ಸಿಬಿಎಸ್‌ಇ ಪರೀಕ್ಷೆಗಳ ರದ್ದತಿಗಾಗಿ ಭಾರೀ ಆಂದೋಲನವೇ ನಡೆದಿದ್ದು, ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸಿದೆ. ಹೀಗಾಗಿ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ್ದು, 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ನಡುವೆ, ಕೇಂದ್ರ ಸರಕಾರದ ಈ ಕ್ರಮ ಸ್ವಾಗತಾರ್ಹವೇ ಆಗಿದೆ. ಪ್ರಸ್ತುತ ಸಂದರ್ಭದಲ್ಲಿ ಪರೀಕ್ಷೆಗಾಗಿ ಮಕ್ಕಳನ್ನು ಒಂದೆಡೆ ಸೇರಿಸುವ ಕ್ರಮ ಒಳ್ಳೆಯದಲ್ಲ ಎಂಬ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಕೇವಲ ಸಿಬಿಎಸ್‌ಇಯಷ್ಟೇ ಅಲ್ಲ, ಕೆಲವೊಂದು ರಾಜ್ಯಗಳೂ ಇಂಥದ್ದೇ ನಿರ್ಧಾರಕ್ಕೆ ಬಂದಿವೆ.
ಅಂದರೆ ಛತ್ತೀಸ್‌ಗಡದಲ್ಲಿ ಈಗಾಗಲೇ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಆದರೆ ಇಲ್ಲಿ 12ನೇ ತರಗತಿ ಪರೀಕ್ಷೆಗಳು ಮಾತ್ರ ಯಥಾ ಪ್ರಕಾರ ನಡೆಯಲಿವೆ. ಉತ್ತರ ಪ್ರದೇಶದಲ್ಲಿ ಪರೀಕ್ಷೆ ರದ್ದು ಮಾಡದಿದ್ದರೂ, ದಿನಾಂಕ ಮುಂದೂಡಿಕೆ ಮಾಡಲಾಗಿದೆ. ಎಪ್ರಿಲ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಮೇನಲ್ಲಿ ನಡೆಸಲಾಗುತ್ತದೆ. ಇನ್ನು ಪಂಜಾಬ್, ಮಧ್ಯಪ್ರದೇಶ, ದಿಲ್ಲಿ, ಮಹಾರಾಷ್ಟ್ರದಲ್ಲಿಯೂ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕರ್ನಾಟಕದಲ್ಲಿ ಇಂಥ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ನಮ್ಮ ಪರೀಕ್ಷೆಗಳು ಜೂನ್‌ನಲ್ಲಿ ನಡೆಯಬೇಕಿದೆ. ಹೀಗಾಗಿ ಆಗ ನೋಡೋಣ ಎಂಬಂಥ ರೀತಿಯಲ್ಲಿ ಮಾತನಾಡಿದ್ದಾರೆ. ವಿಚಿತ್ರವೆಂದರೆ, ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮಾತು ಒತ್ತಟ್ಟಿಗಿರಲಿ, ಇನ್ನೂ ಒಂದರಿಂದ ಒಂಭತ್ತನೇ ತರಗತಿ ಪರೀಕ್ಷೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರಕಾರಕ್ಕೆ ಆಗಿಲ್ಲ.
ಈಗಾಗಲೇ ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಅವರು, ಒಂದರಿಂದ 9ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತ್ರ ಇಂಥ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪರೀಕ್ಷೆ ರದ್ದು ಮಾಡಿಲ್ಲ ಎಂದು ಹೇಳಿದ್ದರು. ಈ ಮೂಲಕ ಪರೀಕ್ಷೆ ವಿಚಾರದಲ್ಲಿ ಸರಕಾರದೊಳಗೇ ದ್ವಂದ್ವವಿದೆ ಎಂಬುದು ಸಾಬೀತಾಗಿತ್ತು. ಒಂದರಿಂದ ಒಂಬತ್ತವರೆಗಿನ ಪರೀಕ್ಷೆ ರದ್ದುಪಡಿಸಬೇಕೇ, ಬೇಡವೇ ಎನ್ನುವ ಕುರಿತು ಎರಡು ಸುತ್ತಿನ ಮಾತುಕತೆ ನಡೆದರೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಸರಕಾರದ ನಿರ್ಧಾರಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಆಗಲೇ ಪರೀಕ್ಷೆ ನಡೆಸುತ್ತಿವೆ. ಆದರೆ ಸರಕಾರ ಮಾತ್ರ ಇನ್ನೂ ನಿರ್ಧಾರ ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ. ಈಗ ಸರಕಾರ ಏನೇ ನಿರ್ಧಾರ ಕೈಗೊಂಡರೂ ಅದು ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ, ಏಕೆಂದರೆ ಬಹುತೇಕ ಶಾಲೆಗಳಲ್ಲಿ ಫಲಿತಾಂಶ ಕೂಡ ಪ್ರಕಟವಾಗಿವೆ. ಇದು ಇನ್ನೊಮ್ಮೆ ಖಾಸಗಿ-ಸರಕಾರಿ ಎಂಬ ಕಂದಕ ಸೃಷ್ಟಿಸಲು ಸರಕಾರವೇ ಉತ್ತೇಜನ ಕೊಟ್ಟ ಹಾಗೆ ಆಗುತ್ತದೆ ಎನ್ನುವುದು ಮರೆಯಕೂಡದು.