ಹುಬ್ಬಳ್ಳಿ: ”ಲಿಂಗಾಯತ ಸಮಾಜದ ಯಾವ ಸಂಘಟನೆ, ಮುಖಂಡರು ಬೆಂಬಲ ನೀಡಿದ್ದಾರೆ, ಡಿಸಿಎಂ ಹುದ್ದೆ ಒಂದೇ ಎಂದು ಹಠ ಹಿಡಿದಿದ್ದು ಯಾಕೆ ಎಂಬುವುದನ್ನು ಡಿ.ಕೆ.ಶಿವಕುಮಾರ ಅವರು ಸ್ಪಷ್ಟಪಡಿಸಬೇಕು. ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿರುವ ಲಿಂಗಾಯತ ಸಮಾಜವನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸುವುದು ಸರಿಯಲ್ಲ” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ.ಜಾಮಾದರ ಹೇಳಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಂಬಂಧಿಸಿದಂತೆ ನ್ಯಾ.ನಾಗಮೋಹನದಾಸ ಸಮಿತಿ ರಚನೆಯಿಂದ ಹಿಡಿದು ಕೇಂದ್ರಕ್ಕೆ ಶಿಫಾರಸ್ಸು ಮಾಡುವವರೆಗೂ ಚಕಾರ ಎತ್ತದ ಡಿ.ಕೆ.ಶಿವಕುಮಾರ ಅವರು ಚುನಾವಣೆ ಸಂದರ್ಭದಲ್ಲಿ ಈ ವಿಚಾರಕ್ಕೆ ಕೈ ಹಾಕಿದ್ದು ಸರಿಯಲ್ಲ ಎನ್ನುವ ಹೇಳಿಕೆ ನೀಡಿದರು. ಇದು ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂಡಿಸುವ ಕೆಲಸ. ಇನ್ನೂ ಹೈಕಮಾಂಡ್ ಮುಂದೆ ನನ್ನ ಹಿಂದೆ ಲಿಂಗಾಯತ ಸಮಾಜದ ಸ್ವಾಮೀಜಿ, ಸಂಘಟನೆಗಳ ಬೆಂಬಲವಿದೆ ಎಂದು ಹೇಳಿದ್ದಾರೆ. ಯಾರು ಬೆಂಬಲ ಕೊಟ್ಟಿದ್ದಾರೆ ಎಂಬುವುದನ್ನು ಬಹಿರಂಗಪಡಿಸಿಬೇಕು. ಪಂಚಪೀಠದ ಸ್ವಾಮೀಜಿಗಳು ಕೊಟ್ಟ ಪತ್ರವಿಟ್ಟುಕೊಂಡು ಲಿಂಗಾಯತ ಸಮಾಜದ ತಮ್ಮಿಂದ ಇರುವುದಾಗಿ ಹೇಳಿರುವುದು ಸರಿಯಲ್ಲ. ಪಂಚಪೀಠಾಧೀಶರು ಲಿಂಗಾಯತರಲ್ಲ ಎಂಬುವುದನ್ನು ಶಿವಕುಮಾರ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಲಿಂಗಾಯತ ಮುಖಂಡರನ್ನು ಬಿಜೆಪಿ ಹಾಗೂ ಆರ್.ಎಸ್.ಎಸ್ ಹೇಗೆ ನಡೆಸಿಕೊಂಡಿದೆ ಎಂಬುವುದನ್ನು ಬೇಸರಗೊಂಡು ಈ ಬಾರಿ ಕಾಂಗ್ರೆಸ್ ಗೆ ಶೇ.90 ರಷ್ಟು ಮತಗಳನ್ನು ಹಾಕಿದ್ದಾರೆ. 39 ಲಿಂಗಾಯತ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆಲ್ಲಲು ಸಾಧ್ಯವಾಗಿದೆ. ಇನ್ನೂ ಎಸ್ಸಿ, ಎಸ್ಟಿ ಸಮಾಜಗಳಿಂದ 37 ಶಾಸಕರಾಗಿದ್ದಾರೆ. ಇಂತಹ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕಲ್ಲವೆ. ಆದರೆ ಡಿ.ಕೆ.ಶಿವಕುಮಾರ ಅವರು ಒಂದೇ ಡಿಸಿಎಂ ಹುದ್ದೆಗೆ ಹಠ ಹಿಡಿದು ಉಳಿದ ಸಮಾಜಗಳಿಗೆ ನೀಡದಂತೆ ತಡೆಹಿಡಿಯುವ ಅವಶ್ಯಕತೆ ಏನಿತ್ತು. ಟಿಕೆಟ್ ಹಂಚಿಕೆಯಲ್ಲಿ 51 ಲಿಂಗಾಯತರಿಗೆ ಹಾಗೂ54 ಒಕ್ಕಲಿಗರಿಗೆ ನೀಡಲಾಯಿತು. ಆದರೆ ಗೆದ್ದಿರುವುದು ಲಿಂಗಾಯತರೆ ಹೆಚ್ಚು. ಅರ್ಹರಿಗೆ ಡಿಸಿಎಂ ಸ್ಥಾನ ನೀಡುವುದಕ್ಕೆ ಹೈಕಮಾಂಡ್ ಗಮನ ನೀಡಬೇಕು. ಗೆದ್ದಿರುವ ಶಾಸಕರ ಪ್ರಮಾಣದ ಮೇಲೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು. ಒಂದು ನ್ಯಾಯ ನೀಡದಿದ್ದರೆ ನಿಮ್ಮನ್ನು ಕ್ಷಮಿಸಲಾರರು ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಇದನ್ನು ಇಡೀ ಸಮಾಜ ಸ್ವಾಗತಿಸಿ ಈ ಬಾರಿ ಈ ಬಾರಿ ದೊಡ್ಡ ಮಟ್ಟದಲ್ಲಿ ಕೈ ಹಿಡಿದಿದೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ವ್ಯವಹಾರ ಎಲ್ಲಿಗೆ ನಿಂತಿದೆಯೋ ಅಲ್ಲಿಂದ ಈ ಸರಕಾರ ಆರಂಭಿಸಿಬೇಕು. ಅಗತ್ಯಬಿದ್ದರೆ ನಿಯೋಗ ಕೊಂಡೊಯ್ಯಲಾಗುವುದು. ಹಿಂದಿನ ಬಿಜೆಪಿ ಸರಕಾರ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಈ ವಿಚಾರದಲ್ಲಿ ಅವರಿಗೆ ಭೇಟಿಯಾಗುವ ಪ್ರಶ್ನೆ ಬರಲಿಲ್ಲ ಎಂದು ತಿಳಿಸಿದರು.