Advertisement

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕೆಂಪು ರಾಷ್ಟ್ರಕ್ಕೆ ಯುದ್ಧದ ಹಸಿವು!

01:52 AM Sep 02, 2020 | Hari Prasad |

ಹೊಸದಿಲ್ಲಿ: ಚೀನದಲ್ಲಿ ಆಹಾರ ಬಿಕ್ಕಟ್ಟು ತೀವ್ರವಾಗಿದ್ದು, ಲಕ್ಷಾಂತರ ಚೀನೀಯರು ಹಸಿವಿನಿಂದ ನರಳುತ್ತಿದ್ದಾರೆ.

Advertisement

ಈಗಾಗಲೇ ಅಲ್ಲಿನ ಬಡಜನ ಕ್ಸಿ ಜಿನ್‌ಪಿಂಗ್‌ ಆಡಳಿತದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಈ ವಿಚಾರದೆಡೆಗಿನ ಗಮನವನ್ನು ಬೇರೆಡೆ ವರ್ಗಾಯಿಸಲು ಚೀನವು ಪ್ಯಾಂಗಾಂಗ್‌ ದಂಡೆಯಲ್ಲಿ ದುಂಡಾ ವರ್ತನೆ ಪ್ರದರ್ಶಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಕ್ಸಿ ಜಿನ್‌ಪಿಂಗ್‌ ‘ಆಪರೇಷನ್‌ ಕ್ಲೀನ್‌ಪ್ಲೇಟ್‌’ ಜಾರಿಗೆ ತಂದಿದ್ದರು. ಪ್ರಮುಖ ಆಹಾರ ಪೂರೈಕೆ ರಾಷ್ಟ್ರಗಳಾದ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದೊಂದಿಗೆ ಚೀನದ ಸಂಬಂಧ ಹದಗೆಟ್ಟಿರುವುದೇ ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ.

1960ರಲ್ಲಿ ಮಾವೋ ಝೆಡಾಂಗ್‌ ಅಧಿಕಾರದಲ್ಲಿದ್ದಾಗಲೂ ಚೀನವು ಹೀಗೇ ಖಾಲಿ ಹೊಟ್ಟೆಯಲ್ಲಿ ಬಿಕ್ಕಳಿಸಿತ್ತು. ಜನರ ಗಮನವನ್ನು ರಾಷ್ಟ್ರೀಯತೆಯ ಕಡೆಗೆ ಹರಿಸಲು ಆಗಲೂ ಚೀನವು ಭಾರತದೊಂದಿಗೆ ಯುದ್ಧ ಸಾರುವ ನಾಟಕವನ್ನಾಡಿತ್ತು.

Advertisement

ಭಾರತದ ಬೆನ್ನಿಗೆ ನಿಂತ ಅಮೆರಿಕ
ಪ್ರತಿಯೊಂದು ವಲಯದಲ್ಲೂ ಚೀನವನ್ನು ಹಿಂದಕ್ಕೆ ತಳ್ಳುವುದು ಅಮೆರಿಕದ ತಂತ್ರವಾಗಿದೆ. ಇದನ್ನು ನಾವು ರಕ್ಷಣ ಕ್ಷೇತ್ರದಲ್ಲಿ ಜಾರಿಗೆ ತಂದಿದ್ದೇವೆ. ಭಾರತದ ಗಾಲ್ವಾನ್‌ ಕಣಿವೆಯಾಗಲಿ, ದಕ್ಷಿಣ ಪೆಸಿಫಿಕ್‌ ಆಗಲಿ, ಅಮೆರಿಕ ಯಾವತ್ತೂ ತನ್ನ ಮಿತ್ರ ರಾಷ್ಟ್ರಗಳಿಗೆ ಬೆಂಬಲ ನೀಡಲು ಸದಾ ಸಿದ್ಧವಿರುತ್ತದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪಕಾರ್ಯದರ್ಶಿ ಸ್ಟೀಫ‌ನ್‌ ಬೀಗನ್‌ ಭರವಸೆ ನೀಡಿದ್ದಾರೆ.

ಗಡಿರೇಖೆ ಗುರುತಿಸಿಲ್ಲ: ಚೀನ ಹೊಸ ರಾಗ
ಲಡಾಖ್‌ ಬಿಕ್ಕಟ್ಟಿನ ನಡುವೆ ಚೀನವು ಈಗ ಗೊಂದಲ ಸೃಷ್ಟಿಸುವ ಹೇಳಿಕೆ ನೀಡುತ್ತಿದೆ. ‘ಭಾರತ ಮತ್ತು ಚೀನ ಗಡಿಯಲ್ಲಿ ಇದುವರೆಗೂ ಗಡಿರೇಖೆಗಳನ್ನು ಗುರುತಿಸಿಲ್ಲ. ಹೀಗಾಗಿ ಇಲ್ಲಿ ಸಮಸ್ಯೆ ಜೀವಂತವಾಗಿದೆ’ ಎಂದು ಚೀನದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಹೊಸ ರಾಗ ತೆಗೆದಿದ್ದಾರೆ.

ಸಭೆ ಮೇಲೆ ಸಭೆ
ಪ್ಯಾಂಗಾಂಗ್‌ ತಟದಲ್ಲಿ ಯಥಾಸ್ಥಿತಿ ಕಾಪಾಡಲು ಭಾರತ- ಚೀನ ನಡುವೆ ಚುಶುಲ್‌ನಲ್ಲಿ ಬ್ರಿಗೇಡ್‌ ಕಮಾಂಡರ್‌ ಮಟ್ಟದ ಮಾತುಕತೆ ಮುಂದುವರಿದಿದೆ. ಸೋಮವಾರ ಇಡೀ ದಿನ ನಡೆದ ಸಭೆ ಫ‌ಲಪ್ರದವಾಗದ ಕಾರಣ ಮಂಗಳವಾರ ಬೆಳಗ್ಗಿನಿಂದಲೇ ಸಭೆ ನಡೆಸಲಾಗಿದೆ.

ಹೊಸದಿಲ್ಲಿಯಲ್ಲೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಉನ್ನತ ರಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಂದಿನ ಕಾರ್ಯತಂತ್ರದ ಬಗ್ಗೆ ಯೋಜನೆ ರೂಪಿಸಿದ್ದಾರೆ. ಇದರ ಬೆನ್ನಲ್ಲೇ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಕೂಡ ಉನ್ನತ ರಕ್ಷಣಾಧಿಕಾರಿಗಳ ತಂಡದ ಸಭೆ ಕರೆಯುವ ಸಾಧ್ಯತೆ ಇದೆ ಎಂದು ಎಎನ್‌ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next