ಶ್ರೀಹರಿಕೋಟಾ: ಭಾರತ ಮಾತ್ರವಲ್ಲ ವಿಶ್ವವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಇಸ್ರೋದ ಮಹಾತ್ವಕಾಂಕ್ಷೆಯ ಚಂದ್ರಯಾನ-3 ಉಪಗ್ರಹ ಹೊತ್ತ ಬಾಹ್ಯಾಕಾಶ ನೌಕೆ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಉಡಾವಣೆಯಾಗಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್ ವಿಎಂ3-ಎಂ4 ನಭಕ್ಕೆ ಹಾರಲಿದೆ.
ಇಸ್ರೋ ಸುಮಾರು 600 ಕೋಟಿ ರೂ ಖರ್ಚು ಮಾಡಿ ಈ ಯೋಜನೆ ಮಾಡುತ್ತಿದೆ. ಹಾಗಾದರೆ ಇದರ ಹಿಂದಿನ ಉದ್ದೇಶವೇನು? ಇದರಿಂದ ಭಾರತಕ್ಕೆ ಏನು ಲಾಭ ಎನ್ನುವ ಮಾಹಿತಿ ಇಲ್ಲಿದೆ.
ಲ್ಯಾಂಡರ್ ನಲ್ಲಿ ಅಳವಡಿಸಿರುವ ಲ್ಯಾಂಗ್ ಮುಯಿರ್ ಪ್ರೋಬ್ ಚಂದ್ರನ ಮೇಲಿನ ಪ್ಲಾಸ್ಮಾ ಸಾಂದ್ರತೆ ಮತ್ತು ಅದರಲ್ಲಿರುವ ವ್ಯತ್ಯಾಸವನ್ನು ಪತ್ತೆ ಮಾಡಲಿದೆ. ಜತೆಗೆ ಇದರಲ್ಲಿ ಅಳವಡಿಸಲಾಗಿರುವ ಚಂದ್ರನ ಮೇಲ್ಮೈ ಥರ್ಮೊಫಿಸಿಕಲ್ ಮಾದರಿಯು ಚಂದ್ರನ ಮೇಲ್ಮೈನ ತಾಪಮಾನವನ್ನು ಅಧ್ಯಯನ ಮಾಡಲಿದೆ. ಅದೇ ರೀತಿ ಇನ್ಸ್‌ಸ್ಟ್ರೆಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ ಚಂದ್ರನ ಮೇಲ್ಮೈನ ಭೂಕಂಪಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಚಂದ್ರನ ಕತ್ತಲೆಯ ಭಾಗ ಅನ್ವೇಕ್ಷಣೆ: ಇನ್ನೊಂದೆಡೆ, ಚಂದ್ರನಲ್ಲಿರುವ ಖನಿಜಗಳು, ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನ ನಡೆಸಲು ರೋವರ್‌ನಲ್ಲಿ ಲೇಸರ್ ಇಂಡ್ನೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಮತ್ತು ಆಲ್ಫಾ ಪಾರ್ಟಿಕಲ್ ಎಕ್ಸ್‌ರೇ ಸ್ಪೆಕ್ಟ್ರೋ ಮೀಟರ್ ಅಳವಡಿಕೆಯಾಗಿದೆ. ಅದೇ ರೀತಿ ಉಪಗ್ರಹವು ಚಂದ್ರನಲ್ಲಿರುವ ನೀರಿನ ಅಂಶದ ಕುರಿತು ಅಧ್ಯಯನ ನಡೆಸಲಿದೆ. ಪ್ರಮುಖವಾಗಿ ಚಂದ್ರನ ದಕ್ಷಿಣ ಧ್ರುವದ ಕತ್ತಲಿನ ಭಾಗದ ಅನ್ವೇಕ್ಷಣೆ ನಡೆಸಲಿದ್ದು, ಅದರ ಮೇಲ್ಮೈಯನ್ನು ಅಧ್ಯಯನ ನಡೆಸಲಿದೆ.
ಪರಸ್ಪರ ಸಂವಹನ: ಪ್ರೊಪಲನ್ ಪೇಲೋಡ್ ಚಂದ್ರನಿಂದ ಇಸ್ರೋದ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್(ಐಡಿಎಸ್‌ಎನ್)ನೊಂದಿಗೆ ಸಂವಹನ ನಡೆಸಲಿದೆ. ಅದೇ ರೀತಿ ಲ್ಯಾಂಡರ್ ಮಾಡ್ನೂಲ್ ಐಡಿಎಸ್‌ಎನ್ ಮತ್ತು ರೋವರ್‌ನೊಂದಿಗೆ ಸಂವಹನ ನಡೆಸಲಿದೆ. ಆದರೆ ರೋವರ್, ಲ್ಯಾಂಡರ್‌ನೊಂದಿಗೆ ಮಾತ್ರ ಸಂವಹನ ನಡೆಸುತ್ತದೆ.
ಈ ಯೋಜನೆಯ ಮೂಲಕ ಚಂದ್ರನಲ್ಲಿ ನೀರು ಇರುವ ಸ್ಥಳವನ್ನು ಪತ್ತೆ ಮಾಡಲು, ನೀರಿನ ಪ್ರಮಾಣ ತಿಳಿಯಲು, ಚಂದ್ರನ ಕತ್ತಲಿನ ಭಾಗದ ಅನ್ವೇಕ್ಷಣೆ, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ. ಇದುವರೆಗೂ ಅಮೆರಿಕ, ರಷ್ಯಾ, ಚೀನಾ ಮಾತ್ರ ಚಂದ್ರನಲ್ಲಿ ಯಶಸ್ವಿಯಾಗಿ ತಮ್ಮ ನೌಕೆಗಳನ್ನು ಇಳಿಸಿವೆ. ಚಂದ್ರಯಾನ-3 ಯಶಸ್ವಿಯಾದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.