ಮುಂಬೈ: ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಬಹುದಾದರೆ, ಕೆಲವು ಸಮಯದಿಂದ ಫಾರ್ಮ್ ನಲ್ಲಿ ಇಲ್ಲದ ವಿರಾಟ್ ಕೊಹ್ಲಿಯನ್ನು ಟಿ20 ತಂಡದಿಂದ ತೆಗೆಯಬಹುದಲ್ಲವೇ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಉತ್ತಮ ಫಾರ್ಮ್ ನಲ್ಲಿರುವ ಆಟಗಾರರನ್ನು ಹೊರಗಿಟ್ಟು, ರನ್ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಗೆ ಅವಕಾಶ ನೀಡಿದರೆ, ಅದು ಯುವ ಆಟಗಾರರಿಗೆ ಮಾಡಿದ ಅಪಚಾರವಾಗುತ್ತದೆ. ಯುವ ಆಟಗಾರರಿಗೂ ಅವಕಾಶ ನೀಡಿ ಎಂದು ಕಪಿಲ್ ದೇವ್ ಹೇಳಿದ್ದಾರೆ.
“ಹೌದು, ಈಗ ನೀವು ಟಿ 20 ಆಡುವ ತಂಡದಲ್ಲಿ ಕೊಹ್ಲಿಯನ್ನು ಕೈಬಿಡಬಹುದು. ವಿಶ್ವದ ನಂ. 2 ಬೌಲರ್ ಅಶ್ವಿನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಬಹುದಾದರೆ, ವಿಶ್ವದ ನಂ. 1 ಬ್ಯಾಟರ್ (ಒಂದು ಕಾಲದಲ್ಲಿ) ಕೂಡ ಬೆಂಚ್ ಕಾಯಬಹುದು” ಎಂದು ಕಪಿಲ್ ಎಬಿಪಿ ನ್ಯೂಸ್‌ಗೆ ತಿಳಿಸಿದರು.
ಇದನ್ನೂ ಓದಿ:‘ವೆಡ್ಡಿಂಗ್ ಗಿಫ್ಟ್’ ಚಿತ್ರ ವಿಮರ್ಶೆ: ಕೋರ್ಟ್ ನಲ್ಲಿ ಫ್ಯಾಮಿಲಿ ಡ್ರಾಮಾ
ನಾವೆಲ್ಲಾ ಹಿಂದೆ ನೋಡಿದಂತಹ ರೀತಿಯಲ್ಲಿ ವಿರಾಟ್ ಬ್ಯಾಟಿಂಗ್ ಮಾಡುತ್ತಿಲ್ಲ. ವಿರಾಟ್ ಹೆಸರು ಮಾಡಿದ್ದೇ ಆತನ ಪ್ರದರ್ಶನದಿಂದ. ಆದರೆ ಸದ್ಯ ಆತನ ಪ್ರದರ್ಶನ ಕಡಿಮೆಯಾಗಿದೆ. ಇದೇ ಸಮಯದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಯುವ ಆಟಗಾರರನ್ನು ಕಡೆಗಣಿಸುವಂತಿಲ್ಲ ಎಂದು ವಿಶ್ವಕಪ್ ವಿಜೇತ ನಾಯಕ ಕಪಿಲ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಟಿ20 ಸರಣಿಗೆ ಕೊಹ್ಲಿಗೆ “ವಿಶ್ರಾಂತಿ” ನೀಡಿದ್ದಾರೆ, ಆದರೆ ಅದನ್ನು “ಕೈಬಿಡಲಾಗಿದೆ” ಎಂದು ಪರಿಗಣಿಸಬಹುದು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ತಂಡದ ಆಡುವ ಬಳಗವು ಸದ್ಯದ ಫಾರ್ಮ್ ಮೇಲೆ ಆಯ್ಕೆಯಾಗಬೇಕು, ಆಟಗಾರನ ಹಳೆಯ ಪ್ರತಿಷ್ಠೆಯ ಆಧಾರದಲ್ಲಿ ಅಲ್ಲ ಎಂದಿದ್ದಾರೆ.