Advertisement
ಕಳೆದ ವಾರ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಸುದ್ದಿ ಕೇಳುತ್ತಿದ್ದಂತೆ ನಿಜಕ್ಕೂ ನನಗೆ ಒಂದೆಡೆ ಸಂತೋಷವೂ ಆಯಿತು, ಇನ್ನೊಂದೆಡೆ ದುಃಖವೂ ಎದುರಾಯಿತು. ದುಃಖವಾಗಿದ್ದು ಏಕೆಂದು ಹೇಳುತ್ತೇನೆ ಕೇಳಿ. ಒಂದು ವೇಳೆ ಇದೇ ನಿರ್ಣಯವನ್ನು ಕೆಲ ವರ್ಷಗಳ ಹಿಂದೆಯೇ ತೆಗೆದುಕೊಂಡಿದ್ದರೆ, ಈ ದೇಶದ ನಾಗರಿಕರ ಸಾವಿರಾರು ಕೋಟಿ ರೂಪಾಯಿ ಹಣ ಉಳಿತಾಯವಾದರೂ ಆಗುತ್ತಿತ್ತು.
ಸರ್ಕಾರ ಈ ಕೆಲಸ ಮಾಡಿತು. ಸತ್ಯವೇನೆಂದರೆ, ಏರ್ ಇಂಡಿಯಾ ಎಂಬ ಸರ್ಕಾರದ ಈ ಪ್ರೀತಿಪಾತ್ರ ಏರ್‌ಲೈನ್ಸ್ ಸಾಲದ ಹೊರೆ
ಯಿಂದ ಎಂದೋ ಕುಸಿದು ಕುಳಿತಿತ್ತು(ಅದನ್ನು ಮೇಲೆತ್ತಲೂ ಆಯಾ ಕಾಲಘಟ್ಟದ ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ). ಈಗ ಏರ್ ಇಂಡಿಯಾದ ಋಣವೇ 46,000 ಕೋಟಿ ರೂಪಾಯಿಗಿಂತಲೂ ಅಧಿಕವಿದೆ! ನಾವೆಲ್ಲ ಗಮನಿಸಲೇಬೇಕಾದ ಸಂಗತಿಯೆಂದರೆ, ಏರ್ ಇಂಡಿಯಾ ಮಾತ್ರವಲ್ಲದೇ ಅನೇಕಾನೇಕ ಸರ್ಕಾರಿ ಕಂಪನಿಗಳು ಮತ್ತು ಕಾರ್ಖಾನೆಗಳು ದಶಕಗಳಿಂದ ವೈಫಲ್ಯದ ಹಾದಿಯಲ್ಲೇ ನಡೆಯುತ್ತಾ ಬಂದಿವೆ. ಇನ್ನು ಸರ್ಕಾರಿ ಹೋಟೆಲ್‌ಗಳ ಬಗ್ಗೆ ಮಾತನಾಡುವುದೇ ಬೇಡ! ಅವುಗಳ ಪರಿಸ್ಥಿತಿಯಂತೂ ವಿಪರೀತ ಗಬ್ಬೆದ್ದಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಸರ್ಕಾರಿ ಹೋಟೆಲ್‌ಗಳ ಸ್ಥಿತಿಯಂತೂ ತೀರಾ ಹದಗೆಟ್ಟಿದೆ. ಈ ಹೋಟೆಲ್‌ಗಳು ಖಾಲಿ ಹೊಡೆಯುತ್ತಿದ್ದರೂ ಅವುಗಳನ್ನು ಮಾರುವ ಮಾತುಕತೆಯನ್ನು ಮಾತ್ರ ಸರ್ಕಾರ ಆರಂಭಿಸಿಲ್ಲ. ಈ ಹೋಟೆಲ್‌ಗಳನ್ನು ಮಾರದಿದ್ದರೆ ರಾಜಕಾರಣಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಬಹಳ ಲಾಭವಿದೆ. ದಿಲ್ಲಿಯ ಅಶೋಕ ಹೋಟೆಲ್‌ನಲ್ಲಿ ಈ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ಅದ್ಧೂರಿಯಾಗಿ ಮಾಡುತ್ತಾರೆ. ಕೆಲ ಸಂಸದರಂತೂ ವರ್ಷಗಳವರೆಗೆ ಇಲ್ಲಿದ್ದು, ನಂತರ ಬಿಲ್ ಪಾವತಿ ಮಾಡುವ ಸಮಯ ಎದುರಾದಾಕ್ಷಣ ಯಾವುದಾದರೂ ನೆಪ ಹುಡುಕಿಕೊಂಡು ಅಲ್ಲಿಂದ ಕಾಲ್ಕಿತ್ತು ಬಿಡುತ್ತಾರೆ. ಅವರು ತಿಂದು ತೇಗಿದ್ದಕ್ಕೆ, ತಂಗಿದ್ದಕ್ಕೆ, ಐಷಾರಾಮ ಮಾಡಿದ್ದಕ್ಕೆ ಹಣವನ್ನೆಲ್ಲ ಸರ್ಕಾರವೇ ಭರಿಸಬೇಕಾಗುತ್ತದೆ. ಸತ್ಯವೇನೆಂದರೆ ಇಂದು ಸರ್ಕಾರಿ ಹೋಟೆಲ್‌ಗಳು “ಐಷಾರಾಮಿ ಸರ್ಕಾರಿ ಬಂಗಲೆ’ಗಳಾಗಿ ಬದಲಾಗಿಬಿಟ್ಟಿವೆ.
Related Articles
Advertisement
ಈ ದಿನಮಾನಗಳಲ್ಲಿ ದೇಶದಾದ್ಯಂತ ರೈತರ ಸಮುದಾಯದಲ್ಲಿ ಅಶಾಂತಿ ಮತ್ತು ಅರಾಜಕತೆ ಹರಡುತ್ತಿದೆ. ಏಕೆಂದರೆ ಕೃಷಿ ವಲಯಕ್ಕೆ ಮೊದಲೇ ಸಿಗಬೇಕಾಗಿದ್ದ ಆದ್ಯತೆ ಇನ್ನೂ ಸಿಕ್ಕಿಲ್ಲ. ರೈತರು ಬೆಳೆಯುವ ತರಹೇವಾರಿ ತರಕಾರಿಗಳು ಮತ್ತು ಹಣ್ಣುಗಳು ಮಾರುಕಟ್ಟೆಯನ್ನು ತಲುಪುವ ವೇಳೆಗಾಗಲೇ ಹಾಳಾಗಿಬಿಡುತ್ತವೆ. ಒಂದು ವೇಳೆ ಹಾಗೋ ಹೀಗೋ ಅವುಗಳನ್ನು ಮಾರುಕಟ್ಟೆಗೆ ತಲುಪಿಸಲು ಸಫಲವಾದರೂ ಅವುಗಳ ಮಾರಾಟದಿಂದ ರೈತರಿಗೆ ಕೈತುಂಬಾ ಹಣವೇನೂ ಪ್ರಾಪ್ತವಾಗುವುದಿಲ್ಲ.
ಒಂದು ವೇಳೆ ಬಹಳ ಹಿಂದೆಯೇ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳನ್ನು ಉತ್ತಮಪಡಿಸಿದ್ದರೆ, ಹೊಸ ಮಾರುಕಟ್ಟೆಗಳು, ನಿರಾವರಿ ಮಾರ್ಗಗಳು, ಕೃಷಿ ಉಪಕರಣಗಳು ಮತ್ತು ಕೋಲ್ಡ್ ಸ್ಟೋರೇಜ್‌ನ ನಿರ್ಮಾಣದಲ್ಲಿ ಸರ್ಕಾರಗಳಿಂದ ಹೂಡಿಕೆಯಾಗಿದ್ದರೆ ಇಂದು ರೈತ ಸಮುದಾಯ ಇಂಥ ಪರಿಸ್ಥಿತಿ ಎದುರಿಸುತ್ತಿರಲಿಲ್ಲ.
ಒಂದು ವೇಳೆ ನಮ್ಮ ಸರ್ಕಾರಗಳಿಗೆ ವ್ಯಾಪಾರ ನಡೆಸಬೇಕೆಂದು ಇಷ್ಟೊಂದು ಶೋಕಿ ಇಲ್ಲದೇ ಹೋಗಿದ್ದರೆ, ನಿಸ್ಸಂಶಯವಾಗಿಯೂ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಆಗಿರುತ್ತಿತ್ತು ಮತ್ತು ಇಂದು ದೇಶದ ಅನ್ನದಾತ ಇಂಥ ಗಂಭೀರ ಸಮಸ್ಯೆಯನ್ನೂ ಎದುರಿಸುತ್ತಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನೇಕ ಬಾರಿ ಒಂದು ಸಂಗತಿಯನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರಗಳು ವ್ಯಾಪಾರ ಮಾಡಬಾರದು ಎಂದು ಅವರು ಪದೇ ಪದೇ ಸಾರುತ್ತಿದ್ದಾರೆ. ಇದಷ್ಟೇ ಅಲ್ಲದೆ, ತಮ್ಮ ಸರ್ಕಾರದ ಪಾತ್ರ ಹೂಡಿಕೆದಾರರಿಗೆ ಹೂಡಿಕೆ ಸುಲಭವಾಗುವಂತೆ ಮಾಡುವುದಷ್ಟೇ ಆಗಿದೆ ಎಂದೂ ಅವರು ಹೇಳಿದ್ದಾರೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ವೈಫಲ್ಯ ಅನುಭವಿಸುತ್ತಿರುವ, ತೆರಿಗೆದಾರರಿಗೆ ಹೊರೆಯಾಗಿ ಪರಿಣಮಿಸಿರುವ ಸರ್ಕಾರಿ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವಲ್ಲಿ ಮಾತ್ರ ವಿಶೇಷ ಹೆಜ್ಜೆಗಳನ್ನು ಇಟ್ಟಿಲ್ಲ. ಈಗ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಅದರಂತೆಯೇ ಇನ್ನಿತರೆ ಸರ್ಕಾರಿ ಕಂಪನಿಗಳನ್ನೂ ಮಾರಾಟ ಮಾಡುವ ಚರ್ಚೆ ಆರಂಭವಾಗಲಿ ಎಂಬ ನಿರೀಕ್ಷೆ ನಮ್ಮದು. ಏಕೆಂದರೆ ಬ್ಯುಸಿನೆಸ್ ಮಾಡಲು ಬರುವವರು ಮಾತ್ರ ಉದ್ಯೋಗ ಕ್ಷೇತ್ರದಲ್ಲಿರಬೇಕು!
(ಲೇಖಕರು ಹಿರಿಯ ಪತ್ರಕರ್ತರು)
ತಲ್ವಿನ್ ಸಿಂಗ್