Advertisement
“ಯಾಕೆ ಅನು, ಡಲ್ ಆಗಿದ್ಯಾ? ಮುಂದೆ ಆಳ ಜಾಸ್ತಿ ಇರುತ್ತೆ, ಹೋಗ್ಬೇಡ’. ಗೆಳತಿ ಸಂಗೀತಾ ಎಚ್ಚರಿಸಿದಾಗ ವಾಸ್ತವಕ್ಕೆ ಬಂದಿದ್ದೆ. ಬಿಜಾಪುರ ಬೋರ್ಡಿಂಗ್ ಸ್ಕೂಲ್‌ಗೆ ಟೀಚರ್ ಆಗಿ ಸೇರಿ, ನಾಲ್ಕೈದು ವರ್ಷಗಳೇ ಕಳೆದಿದ್ದವು. ಈಗ ಶಾಲೆಯ ಪ್ರವಾಸದ ನೆಪದಲ್ಲಿ ಕಾರವಾರದ ಠಾಗೋರ್ ಬೀಚ್‌ನಲ್ಲಿ ತೇಲುತ್ತಿದ್ದೆನಷ್ಟೇ.
Related Articles
Advertisement
ಹಣೆಗೊಂದು ಹೂಮುತ್ತನ್ನಿಟ್ಟು, ಹುಡುಗ ಎಂಜಿನಿಯರಿಂಗ್ ಓದಲು ಹೊರಟಿದ್ದು ಬಹುದೊಡ್ಡ ನಗರಕ್ಕೆ. ನಾ ಸೇರಿದ್ದು ಕಡಲೂರಿನ ಹಾಸ್ಟೆಲ್ಗೆ. ದಿನವೂ ಟೆರೇಸನ್ನೇರಿ, ರಾತ್ರಿ ಚುಕ್ಕಿಗಳ ಎಣಿಸುತ್ತಿದ್ದೆ. ಬೆಳದಿಂಗಳಲ್ಲಿ ಅವನನ್ನು ನೆನೆಯುತ್ತಿದ್ದೆ. ಅವನ ಪತ್ರಗಳು ಪುಟಗಟ್ಟಲೇ ಬರುತ್ತಿದ್ದವು. ಊರಿಗೆ ಬಂದಾಗ ನಾನಿದ್ದಲ್ಲೂ ಬರುತ್ತಿದ್ದ.
ಕಡಲ ತೀರದಲ್ಲಿ ತಂಗಾಳಿ, ಅಲೆಗಳ ಆರ್ಭಟ, ಉಸುಕಿನ ಬಯಲಿನ ನಡುವೆ ಕುಳಿತು ಅದೆಷ್ಟು ಮಾತಾಡಿದ್ದೆವು. ಈ ಸಂಜೆಯು ಹೀಗೆ ನಿಲ್ಲಬಾರದಾ ಅನ್ನಿಸಿದ್ದುಂಟು. ಗಡಿಯಾರ ನಕ್ಕಿತ್ತು ನಮ್ಮ ನೋಡಿ. ಮತ್ತಷ್ಟು ಬೇಗ ತಿರುಗುತ್ತಿತ್ತು. ಮೊದಮೊದಲು ಇದ್ದ ಪ್ರೀತಿಯ ತೀವ್ರತೆ ತಿಳಿಯಾದಂತೆ ಕಾಣತೊಡಗಿತ್ತು. ಪ್ರೇಮ ಸಂದೇಶಗಳು ಕಡಿಮೆಯಾಗುತ್ತಿದ್ದವು. ಹುಡುಗ ಯಾಕೋ ಬದಲಾಗಿದ್ದಾನೆ ಅಂತ ಮನ ಹೇಳುತಿತ್ತು. ಪರೀಕ್ಷೆಯ ತಲೆಬಿಸಿಯಲ್ಲಿದ್ದಾನೆಂದು ಸುಮ್ಮನಾದೆ. ಅವನಲ್ಲಿನ ಪ್ರೀತಿ ಬೇರೆ ರೂಪ ಪಡೆದಿತ್ತು. ಮಾಯಾನಗರಿಯ ಮಾಯೆ ಅವನೊಳಗೆ ಆವರಿಸಿತ್ತು. ಹುಡುಗ ಬದಲಾಗಿದ್ದ. ಮೊಬೈಲ್ ಕೈಗೆ ಬಂದಿತ್ತು. ಗೆಳೆಯರ ಬಳಗ ಹೆಚ್ಚಿತ್ತು. ಅಪ್ಪ ಹೊಸ ಬೈಕ್ ಕೊಡಿಸಿದ್ದರಂತೆ.
ಅಮ್ಮನ ಜೊತೆ ಕಾಡಿ ಬೇಡಿ ಮೊಬೈಲ್ ಗಿಟ್ಟಿಸಿದ್ದೆ. ಪ್ರೀತಿಯ ಹೂವು ಬಾಡದಿರಲೆಂದು ಬಯಸಿದ್ದೆ. ನಾನೇ ಕರೆಮಾಡಿ ಮಾತಾಡುವ ಬಯಕೆ. ಆದರೆ ಭಯ, ಮೆಸೇಜಿಗೂ ರಿಪ್ಲೆ„ ಇಲ್ಲ. ಆಮೇಲೆ ಅವನ ಫೇಸ್‌ಬುಕ್ ಸ್ನೇಹಿತೆಯ ಮೂಲಕ ಸತ್ಯ ಗೊತ್ತಾದಾಗ ಶಾಕ್ ಆಗಿದ್ದೆ. “ಕಾಳ್ ಹಾಕುತ್ತಿದ್ದ ಹುಡುಗಿಯನ್ನು ನಾನೇಕೆ ಸುಮ್ಮನೆ ಬಿಡಲಿ, ಸಖತ್ ಆಟ ಆಡಿಸಿದೆ’ ಅಂದಿದ್ದನಂತೆ. ನಾನು ಅವನಿಗೆ ಬರೆದ ಪ್ರೇಮಪತ್ರಗಳನ್ನು ಓದಿ, ಮನರಂಜನೆ ಪಡೆಯುತ್ತಿದ್ದನಂತೆ.
ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಪಕ್ಕಕ್ಕಿಟ್ಟು, ಅವತ್ತೇ ಇಂಥದ್ದೇ ಕಡಲ ತೀರದಲ್ಲಿ ಕುಳಿತು ಅತ್ತಾಗ ಸಮಾಧಾನ ಆಗಿತ್ತು. ಅಲೆಗಳು ಸಂತೈಸಲು “ನಾ ಮುಂದೆ, ತಾ ಮುಂದೆ’ ಅಂದಂತೆ ಭಾಸವಾಯಿತು. ಫೇಸ್‌ಬುಕ್ ಖಾತೆ ಮುಚ್ಚಿದೆ. ಮುಚ್ಚಿದ ಪುಸ್ತಕ ತೆರೆದು ಓದತೊಡಗಿದೆ. ಪ್ರೇಮದ ಪೊರೆ ಕಳಚಿ ಬಿಸಾಕಿದ್ದೆ. ಪದವಿ ಮುಗಿಸಿ, ಬಿ.ಇಡಿ ಸೇರಿದ್ದೆ.
ಈ ಏಕಾಂಗಿ ಪಯಣದಲ್ಲಿ ಹಲವು ಯಶಸ್ಸು ಸಿಕ್ಕಿತ್ತು. ಒಳ್ಳೆಯ ಕೆಲಸ ಸಿಕ್ಕಿತು. ಆದರೂ ಅವನ ಪ್ರೇಮ ಮತ್ತೆ ಕಾಡಿತು. ಡಿಲೀಟ್ ಮಾಡಿದ್ದ ಫೇಸ್‌ಬುಕ್ ಅನ್ನು ಮತ್ತೆ ತೆರೆದೆ. ಎಲ್ಲೂ ಅವನ ಖಾತೆ ಕಾಣಲಿಲ್ಲ. ಅವನ ಗೆಳೆಯನ ಸ್ಟೇಟಸ್‌ನಿಂದ ಗೊತ್ತಾಯ್ತು: ರವಿ ಮುಳುಗಿದ್ದ, wheeling ಭೂತದ ಬಾಯೊಳಗೆ ಸಿಕ್ಕು.
ಮೊನ್ನೆ ಊರಿಗೆ ಹೋದಾಗ ನೆನಪಾಗಿದ್ದು ಅದೇ ಪ್ರೀತಿಯ ಹೊತ್ತು ತೇರಂತೆ ಸಾಗಿದ ಬಸ್ಸು, ಕಳ್ಳ ನೋಟದ ಆಟಗಳು. ಬೆಟ್ಟ ಗುಡ್ಡದ ಹಾದಿಯಲ್ಲಿ ನಡೆದರೆ “ಯಾಕೀ ಒಂಟಿ ಪಯಣ?’ ಎಂದು ತಂಗಾಳಿ ಹಂಗಿಸುತ್ತಿತ್ತು. ಹಾರುವ ಹಕ್ಕಿಗಳು, ಹರಿಯುವ ಝರಿಗಳು ನನ್ನ ನೋಡಿ ಪಿಸುಪಿಸು ಎನ್ನುತ್ತಿದ್ದವು.
ಒಂದಿನ ನನ್ನೆಲ್ಲ ಕತೆಯನ್ನು ಅಮ್ಮನಿಗೆ ಒಪ್ಪಿಸಿಬಿಟ್ಟೆ. ಅಮ್ಮ ಅಂದಳು, “ಇಷ್ಟಕ್ಕೇ ಜೀವನ ಮುಗಿದಿದೆ ಅಂತಂದ್ಕೊಂಡಿದ್ದೀಯ… ನಿಮ್ಮಪ್ಪ ಹೋದಾಗ ನಿನಗೆ ಬರೀ ಒಂದು ವರ್ಷ. ನಾನು ಹೇಗೆ ನಿನ್ನ ಬೆಳೆಸಿದ್ದೀನಿ ಗೊತ್ತಾ? ಬೇರೆ ಜಾತಿಯ ಹೆಂಗಸನ್ನು ಪ್ರೀತಿಸಿದ, ನಿಮ್ಮ ತಾತಂಗೆ ತಿಳಿದು ನನ್ನ ಸೊಸೆಯಾಗಿ ತಂದರು. ಕೊನೆಗೆ ನಿಮ್ಮ ಅಪ್ಪ ಅವಳ ಹಿಂದೆ ಹೋಗಿ ತಾವೇ ಬಾರದ ಲೋಕ ಸೇರಿದ್ದರು. ನಾನು ಅಳ್ತಾ ಕೂತಿದ್ದರೆ, ಮಗಳೇ ನಿನ್ನ ನೋಡಿಕೊಳ್ಳುವ, ತೋಟವನ್ನು ಹಸಿರಾಗಿಸುವ ಕೆಲಸವನ್ನು ಯಾರು ಮಾಡ್ತಿದ್ರು, ಹೇಳು? ಪ್ರೀತಿ ಪ್ರೇಮ ಜೀವನದ ಒಂದು ಹಂತ. ಅದನ್ನೇ ನೆನೆದು ಎಷ್ಟು ದಿನ ಇರ್ತೀಯಾ, ವಾಸ್ತವ ನೋಡು. ಕಳೆದುಹೋದ ಕನಸಿನಿಂದ ಹೊರಗೆ ಬಂದು, ಹೊಸ ಕನಸಿಗೆ ಬಣ್ಣ ಬಳಿದು, ಸುಂದರವಾದ ಬದುಕಿಗೆ ಕಾಲಿಡು’ ಎಂದು ಎದ್ದು ಹೋದರು.
ಅಮ್ಮನ ಮಾತಿಗಿಂತ ದೊಡ್ಡ ಪ್ರೇರಣೆ ಮತ್ತೂಂದಿಲ್ಲ ಅಂತನ್ನಿಸಿಬಿಟ್ಟಿತು. ಈಗ ನಾನು ಬದುಕಿನಲ್ಲಿ ಗೆದ್ದಿದ್ದೇನೆ.
ಅಂಜನಾ ಗಾಂವ್ಕರ್