ನವದೆಹಲಿ: 2013ರ ಐಪಿಎಲ್ ಸ್ಪಾಟ್‌ಫಿಕ್ಸಿಂಗ್ ವಿವಾದಕ್ಕೆ ಸಿಲುಕಿ ಸಂಪೂರ್ಣ ಕ್ರಿಕೆಟ್ ಬದುಕನ್ನು ಹಾಳು ಮಾಡಿಕೊಂಡಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್‌ಗೆ ಸರ್ವೋಚ್ಚ ನ್ಯಾಯಾಲಯ ಕೂಡ ತಪರಾಕಿ ನೀಡಿದೆ. 2013ರಲ್ಲಿ ನಿಮ್ಮನ್ನು ಬುಕಿಗಳು ಸಂಪರ್ಕಿಸಿದ್ದಾಗ, ಆಗಲೇ ಏಕೆ ಅದನ್ನು ಬಿಸಿಸಿಐ ಗಮನಕ್ಕೆ ತರಲಿಲ್ಲ? ಒಟ್ಟಾರೆ ನಿಮ್ಮ ನಡತೆ ಸರಿಯೆನಿಸುತ್ತಿಲ್ಲ ಎಂದು ಸರ್ವೋಚ್ಚ ಪೀಠ, ಶ್ರೀಶಾಂತ್‌ಗೆ ಹೇಳಿದೆ.
2013ರ ವಿವಾದದ ವಿಚಾರಣೆ ನಡೆಸಿದ, ದೆಹಲಿ ಸ್ಥಳೀಯ ವಿಶೇಷ ನ್ಯಾಯಾಲಯ, ಶ್ರೀಶಾಂತ್ ಸೇರಿ ಇತರೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ದೆಹಲಿ ಪೊಲೀಸರ ಆರೋಪಕ್ಕೆ ಸೂಕ್ತ ಸಾಕ್ಷಿಗಳಿಲ್ಲ ಎಂದು ಹೇಳಿತ್ತು. ಆದರೂ ಬಿಸಿಸಿಐ ತನ್ನ ಮೇಲೆ ಹೇರಿದ್ದ ಆಜೀವ ನಿಷೇಧವನ್ನು ಹಿಂತೆಗೆಯದ ಪರಿಣಾಮ, ಶ್ರೀಶಾಂತ್ ಕೇರಳ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲೂ ಶ್ರೀಗೆ ಸೋಲಾಗಿತ್ತು. ಇದರ ವಿರುದ್ಧ ಶ್ರೀ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಮೇಲಿನಂತೆ ಅಭಿಪ್ರಾಯಿಸಿತು.
ಶ್ರೀಶಾಂತ್ ಪರ ಸಲ್ಮಾನ್ ಖುರ್ಷಿದ್ ವಾದ ಮಂಡಿಸಿ, ಪೊಲೀಸರ ಆರೋಪಕ್ಕೆ ಸೂಕ್ತ ಸಾಕ್ಷಿಗಳಿಲ್ಲ ಎಂದು ದೆಹಲಿ ಸ್ಥಳೀಯ ನ್ಯಾಯಾಲಯ ಹೇಳಿದೆ. ಅಲ್ಲದೇ ರಾಜಸ್ಥಾನ್ ರಾಯಲ್ಸ್-ಕಿಂಗ್ಸ್ ಪಂಜಾಬ್ ನಡುವೆ 2013ರ ಮೇನಲ್ಲಿ ನಡೆದ ಪಂದ್ಯದ ಫಲಿತಾಂಶ ಮೊದಲೇ ನಿಗದಿಯಾಗಿತ್ತು ಎನ್ನುವುದೂ ಸಾಬೀತಾಗಿಲ್ಲ. ಆದರೂ ಬಿಸಿಸಿಐ ಆಜೀವ ನಿಷೇಧ ಹಿಂಪಡೆದಿಲ್ಲ ಎಂದರು.
ದೂರವಾಣಿ ಸಂಭಾಷಣೆಯ ಪ್ರಕಾರ, ಶ್ರೀಶಾಂತ್ ನಿರ್ದಿಷ್ಟ ಓವರ್‌ನಲ್ಲಿ 14 ರನ್ ನೀಡಬೇಕಿತ್ತು. ಆದರೂ ಇಬ್ಬರೂ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಆ್ಯಡಂ ಗಿಲ್‌ಕ್ರಿಸ್ಟ್ ಹಾಗೂ ಶಾನ್ ಮಾರ್ಷ್ ಕ್ರೀಸ್‌ನಲ್ಲಿದ್ದಾಗ ಶ್ರೀ 13 ರನ್ ಮಾತ್ರ ನೀಡಿದ್ದಾರೆ. ಇದರಿಂದ ಅವರು ಫಿಕ್ಸಿಂಗ್ ಮಾಡಿಲ್ಲ ಎನ್ನುವುದರ ಜೊತೆಗೆ, 10 ಲಕ್ಷ ರೂ. ಹಣವನ್ನೂ ಪಡೆದಿಲ್ಲ ಎಂದು ಸಾಬೀತಾಗುತ್ತದೆ ಎಂದು ಸಲ್ಮಾನ್ ಖುರ್ಷಿದ್ ವಾದಿಸಿದರು.
ಫಿಕ್ಸರ್‌ಗಳು ತಮ್ಮನ್ನು ಸಂಪರ್ಕಿಸಿದ್ದಾಗಲೇ ಶ್ರೀಶಾಂತ್, ಬಿಸಿಸಿಐಗೆ ಮಾಹಿತಿ ನೀಡಲು ವಿಫಲವಾಗಿದ್ದಾರೆ ಎನ್ನುವುದು ಸತ್ಯ. ಆದರೆ ಅದಕ್ಕಾಗಿ ಆಜೀವ ನಿಷೇಧ ಹೇರುವುದು ವಿಪರೀತ ಹೆಚ್ಚಾಯಿತು. ಇದಕ್ಕೆ ಗರಿಷ್ಠವೆಂದರೆ 5 ವರ್ಷ ನಿಷೇಧ ಹೇರಬಹುದು. ಹ್ಯಾನ್ಸಿ ಕ್ರೋನ್ಯೆ ಹೊರತುಪಡಿಸಿ ಉಳಿದೆಲ್ಲ ಕ್ರಿಕೆಟಿಗರ ವಿಚಾರದಲ್ಲಿ ಹೀಗೆಯೇ ಆಗಿದೆ ಎಂದು ಖುರ್ಷಿದ್ ಹೇಳಿದರು.
ವೃತ್ತಿ ಬದುಕು ಹಾಳಾಗುತ್ತಿದೆ: ನಿಷೇಧದಿಂದ ಶ್ರೀಶಾಂತ್ ವೃತ್ತಿಬದುಕು ಹಾಳಾಗುತ್ತಿದೆ. ಕನಿಷ್ಠ ವಿದೇಶದಲ್ಲಾದರೂ ಆಡಲು ಅವಕಾಶ ನೀಡಬೇಕು. ಪ್ರತಿವರ್ಷ ಹಲವು ಅವಕಾಶಗಳು ಕೈತಪ್ಪಿ ಹೋಗುತ್ತಿವೆ. ಕೌಂಟಿಯಿಂದಲೂ ಅವರಿಗೆ ಆಹ್ವಾನವಿದೆ ಶ್ರೀ ಪರ ವಕೀಲರು ವಾದಿಸಿದ್ದಾರೆ.