ಲಂಡನ್: ಸೌದಿ ಅರೇಬಿಯಾದ ಎರಡು ಪ್ರಮುಖ ತೈಲ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿಯ ಪರಿಣಾಮ ಜಗತ್ತಿನ ಪೆಟ್ರೋಲಿಯಂ ಸಂಸ್ಕರಣ ಹಾಗೂ ವಹಿವಾಟಿನ ಮೇಲೆ ದೊಡ್ಡ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೈಲ ಬೆಲೆ ಏರಿಕೆಗೂ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಯೆಮೆನ್ ದೇಶದ ಬಂಡುಕೋರರು ಸೌದಿ ಅರೇಬಿಯಾದ ಅರಾಮ್ಕೊ ಕಂಪನಿಯ ಬೃಹತ್ ತೈಲ ಘಟಕಗಳ ಮೇಲೆ ದಾಳಿ ನಡೆಸಿದ್ದರಿಂದ ತೈಲ ಸರಬರಾಜು ಮತ್ತು ಹೆಚ್ಚುವರಿ ತೈಲೋತ್ಪನ್ನದ ಮೇಲೆ ಭಾರೀ ಪರಿಣಾಮ ಬೀಳಲಿದೆ ಎಂದು ವರದಿ ವಿವರಿಸಿದೆ.
ಜಾಗತಿಕವಾಗಿ ತೈಲ ಸರಬರಾಜಿನ ಮೇಲೆ ಹೊಡೆತ:
ಸೌದಿಯ ತೈಲಸಂಸ್ಕರಣಾ ಘಟದ ಮೇಲೆ ನಡೆದ ದಾಳಿಯಿಂದ ದೇಶದ ಅರ್ಧದಷ್ಟು ತೈಲೋತ್ಪನ್ನದ ಮೇಲೆ ಮಾತ್ರ ಪರಿಣಾಮ ಬಿದ್ದಿಲ್ಲ, ಇದರಿಂದಾಗಿ ಜಾಗತಿಕವಾಗಿ ಶೇ.5ರಷ್ಟು ತೈಲೋತ್ಪನ್ನ ಬೇಡಿಕೆಯನ್ನು ಸೌದಿಯ ಈ ಕಂಪನಿಯೇ ಪೂರೈಸುತ್ತಿತ್ತು. ಹೀಗೆ ಭಾರತ, ತೈವಾನ್, ಚೀನಾ, ದಕ್ಷಿಣ ಕೊರಿಯ ಸೇರಿದಂತೆ ಹಲವಾರು ದೇಶಗಳಿಗೆ ಸೌದಿ ಅರೇಬಿಯಾದಿಂದಲೇ ತೈಲವನ್ನು ರಫ್ತು ಮಾಡಿಕೊಳ್ಳುತ್ತಿವೆ.
ಸೌದಿ ಅರೇಬಿಯಾದ ಅರಾಮ್ಕೊ ತೈಲಘಟಕದ ಮೇಲೆ ದಾಳಿ ನಡೆದ ಪರಿಣಾಮ ದಿನಂಪ್ರತಿ 5.7 ಮಿಲಿಯನ್ ಬ್ಯಾರೆಲ್ಸ್ ನಷ್ಟು ತೈಲ ಉತ್ಪನ್ನ ಕುಂಠಿತವಾದಂತಾಗಿದೆ. ಅಷ್ಟೇ ಅಲ್ಲ ಸೌದಿ ಅರೇಬಿಯಾ 2 ಮಿಲಿಯನ್ ಬ್ಯಾರೆಲ್ಸ್ ಹೆಚ್ಚುವರಿ ತೈಲ ಉತ್ಪಾದಿಸಬೇಕೆಂಬ ನಿಯಮಕ್ಕೂ ತಡೆಯೊಡ್ಡಿದೆ ಎಂದು ವರದಿ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿನ ಪ್ರಮುಖ ತೈಲ ಉತ್ಪಾದನಾ ಕಂಪನಿ ಇದೊಂದೆ ಆಗಿದ್ದು, ಯುದ್ಧ ಅಥವಾ ಯಾವುದೇ ನೈಸರ್ಗಿಕ ವಿಪತ್ತು ಸಂಭವಿಸಿದಲ್ಲಿ ಅಂತಹ ಸಂದರ್ಭದಲ್ಲಿಯೂ ತೈಲ ಸರಬರಾಜು ಮಾಡಲು ತೊಂದರೆಯಾಗಬಾರದು ಎಂಬ ದೃಷ್ಟಿಕೋನದ ಹಿನ್ನೆಲೆಯಲ್ಲಿ ದಿನಂಪ್ರತಿ 2 ಮಿಲಿಯನ್ ಬ್ಯಾರೆಲ್ಸ್ ನಷ್ಟು ತೈಲ ಉತ್ಪಾದಿಸುತ್ತಿತ್ತು.