ನವದೆಹಲಿ:ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹೆಚ್ಚಳವಾಗುತ್ತಿರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್ ಶನಿವಾರ(ಏಪ್ರಿಲ್ 24), “ಇದು ಕೇವಲ ಕೋವಿಡ್ ಅಲೆ ಅಲ್ಲ, ಆದರೆ ನಿಜಕ್ಕೂ ಇದೊಂದು ಸುನಾಮಿ” ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಶೇ.50 ರಷ್ಟು ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ:ಜೋಶಿ
ಒಂದು ವೇಳೆ ಕೇಂದ್ರ ಸರ್ಕಾರ, ರಾಜ್ಯ ಅಥವಾ ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ಆಕ್ಸಿಜನ್ ಸರಬರಾಜು ಮಾಡುವ ಪ್ರಕ್ರಿಯೆಗೆ ಅಡ್ಡಿಯಾಗಿದ್ದರೆ ಅಂತಹ ವ್ಯಕ್ತಿಯಲ್ಲಿ ಗಲ್ಲಿಗೇರಿಸಬೇಕು ಎಂದು ದೆಹಲಿ ಹೈಕೋರ್ಟ್ ಕಿಡಿಕಾರಿದೆ.
ಆಕ್ಸಿಜನ್ ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ಯಾರು ಅಡ್ಡಿಯಾಗಿದ್ದಾರೆ ಎಂಬ ಬಗ್ಗೆ ಒಂದು ಉದಾಹರಣೆ ನೀಡಿ ಎಂದು ದೆಹಲಿ ಸರಕಾರಕ್ಕೆ ತಿಳಿಸಿರುವ ಕೋರ್ಟ್, ನಾವು ಅಂತಹ ವ್ಯಕ್ತಿಯನ್ನು ಗಲ್ಲಿಗೇರಿಸುತ್ತೇವೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಈ ವಿಷಯದಲ್ಲಿ ನಾವು ಯಾರನ್ನೂ ಬಿಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಪೀಠ ಕಟುವಾಗಿ ತಿಳಿಸಿದೆ. ಕೋವಿಡ್ 19 ಸೋಂಕಿಗೆ ಒಳಗಾಗಿರುವ ರೋಗಿಗಳು ಆಕ್ಸಿಜನ್ ಕೊರತೆ ಎದುರಿಸುತ್ತಿರುವ ಕುರಿತು ದೆಹಲಿಯ ಮಹಾರಾಜ್ ಅಗ್ರಸೇನ್ ಆಸ್ಪತ್ರೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ಜಸ್ಟೀಸ್ ವಿಪಿನ್ ಸಾಂಘಿ ಮತ್ತು ಜಸ್ಟೀಸ್ ರೇಖಾ ಪಲ್ಲಿ ಈ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ದೆಹಲಿಗೆ 480 ಮೆಟ್ರಿಕ್ ಟನ್ ಗಳಷ್ಟು ಆಕ್ಸಿಜನ್ ಸರಬರಾಜು ಮಾಡುವುದಾಗಿ ತಿಳಿಸಿರುವ ಕೇಂದ್ರದ ಭರವಸೆ ಬಗ್ಗೆ ದೆಹಲಿ ಹೈಕೋರ್ಟ್ ಈ ಸಂದರ್ಭದಲ್ಲಿ ಪ್ರಶ್ನಿಸಿದೆ. ನೀವು(ಕೇಂದ್ರ ಸರಕಾರ) ಏಪ್ರಿಲ್ 21ರಂದು ದೆಹಲಿಗೆ ಪ್ರತಿದಿನ 480 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದೀರಿ. ಅದು ಯಾವಾಗ ದೆಹಲಿ ತಲುಪುತ್ತದೆ? 480 ಮೆಟ್ರಿಕ್ ಟನ್ ಆಕ್ಸಿಜನ್ ಬರುವುದನ್ನು ಪ್ರತಿದಿನ ಎದುರು ನೋಡಬೇಕಾ? ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.