ಹೊಸದಿಲ್ಲಿ: ಸನಾತನ ಧರ್ಮ ಟೀಕೆ ವಿಚಾರವಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿದ್ದು, ಸನಾತನ ಧರ್ಮವನ್ನು ಅವಮಾನಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅದರ ಬಗ್ಗೆ ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಕೆಲ ದಿನಗಳ ಹಿಂದೆ ಸನಾತನ ಧರ್ಮವು ಜನರಲ್ಲಿ ವಿಭಜನೆ ಮತ್ತು ತಾರತಮ್ಯವನ್ನು ಉತ್ತೇಜಿಸುತ್ತಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
“ಸನಾತನ ಧರ್ಮವನ್ನು ಅವಮಾನಿಸುವ ಬಗ್ಗೆ ಪ್ರತಿಪಕ್ಷಗಳು ಮೌನ ಮುರಿಯಬೇಕು” ಎಂದು ಠಾಕೂರ್ ಹೇಳಿದರು.
ವಿರೋಧ ಪಕ್ಷವು ಸನಾತನ ಧರ್ಮವನ್ನು ಅವಮಾನಿಸುವುದಕ್ಕೆ ಸೀಮಿತವಾಗಿದೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಸನಾತನ ಧರ್ಮವನ್ನು ಅವಮಾನಿಸುವ ಪ್ರಯತ್ನಗಳು ಒಂದರ ನಂತರ ಒಂದರಂತೆ ನಡೆಯುತ್ತಿವೆ” ಎಂದು ಸಚಿವರು ಕಿಡಿಕಾರಿದರು.
ಇಂಡಿಯಾ ವರ್ಸಸ್ ಭಾರತ್ ಚರ್ಚೆಯ ಕುರಿತು ರಾಹುಲ್ ಗಾಂಧಿಯವರ ಕಾಮೆಂಟ್‌ಗಳ ಕುರಿತು ಕೇಳಲಾದ ಪ್ರಶ್ನೆಗೆ, ಠಾಕೂರ್ “ಕೆಲವರು ಭಯ ಮತ್ತು ಗೊಂದಲವನ್ನು ಹರಡುವ ಮತ್ತು ಸುಳ್ಳು ಹೇಳುವ ಅಭ್ಯಾಸವನ್ನು ಹೊಂದಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಇದನ್ನೇ ಮಾಡಿದ್ದಾರೆ” ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ನಂತರ ಗೋಧ್ರಾ ರೀತಿಯ ಘಟನೆ ನಡೆಯಬಹುದು ಎಂಬ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಹೇಳಿಕೆಗೆ ಠಾಕೂರ್, ಅಧಿಕಾರದ ದುರಾಸೆಗಾಗಿ ಕೆಲವರು ತಮ್ಮ ಸಿದ್ಧಾಂತವನ್ನು ಮರೆತಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.