Advertisement
ಗುಣಗಾನದಿಂದಾದ ನಷ್ಟಗುಂಡಪ್ಪನ ಬಳಿ ಕತ್ತೆಯೊಂದಿತ್ತು. ಹೂಜಾನಿಗೆ ಅದರ ಮೇಲೆ ಅಸಡ್ಡೆ. ಈ ಸೋಮಾರಿ ಕತ್ತೆಯನ್ನು ಸಾಕುವುದಕ್ಕಿಂತ ಮಾರುವುದು ಲೇಸು ಅಂದುಕೊಂಡು ಅದನ್ನು ಸಂತೆಗೆ ಹೊಡೆದುಕೊಂಡು ಹೋದ. ಅಲ್ಲಿ ವ್ಯಾಪಾರಿಯೊಬ್ಬನಿಗೆ 3000 ರೂ.ಗಳಿಗೆ ಕತ್ತೆಯನ್ನು ಮಾರಿದ. ಆ ವ್ಯಾಪಾರಿ ಕತ್ತೆಯನ್ನು ಹರಾಜಿಗೆ ಇಟ್ಟು, ಕತ್ತೆಯ ಗುಣಗಳನ್ನು ಹಾಡಿ ಹೊಗಳತೊಡಗಿದ. “ಇದು ಅಂತಿಂಥ ಕತ್ತೆಯಲ್ಲ. ಕತ್ತೆಗಳಲ್ಲೇ ಅತ್ಯುತ್ತಮ ಕತ್ತೆ. ಇದರ ಬಲಿಷ್ಠವಾದ ಕಾಲುಗಳನ್ನು ನೋಡಿ. ಇದು ಮೂರು ಕತ್ತೆಗಳ ಕೆಲಸವನ್ನು ಮಾಡುತ್ತದೆ’. ಕತ್ತೆಯ ಗುಣಗಾನ ಗುಂಡಪ್ಪನ ಕಿವಿಗೆ ಬಿತ್ತು! ಅರೇ, ನನ್ನ ಸೋಮಾರಿ ಕತ್ತೆ ಇಷ್ಟೊಂದು ಶ್ರೇಷ್ಠವೇ ಎಂದು ಆತ ಚಕಿತನಾದ. ಹರಾಜಿನಲ್ಲಿ ಕತ್ತೆ ಎಷ್ಟು ಬೆಲೆಗೆ ಹೋಗಬಹುದೆಂದು ಅಲ್ಲಿಯೇ ನಿಂತು ಕುತೂಹಲದಿಂದ ಗಮನಿಸತೊಡಗಿದ. ಜನರೆಲ್ಲ ಕತ್ತೆಯನ್ನು ಮೆಚ್ಚಿದರು. ಒಬ್ಬ “4,000′ ಎಂದು ಕೂಗಿದ, ಇನ್ನೊಬ್ಬ “5,000′ ಎಂದ, ಮತ್ತೂಬ್ಬ “5,500’…ಹೀಗೆ ಕತ್ತೆಯ ಬೆಲೆ ಏರತೊಡಗಿತು. ಗುಂಡಪ್ಪ ನಿಂತಲ್ಲೇ ಚಡಪಡಿಸಿದ. ಇಷ್ಟು ಒಳ್ಳೆಯ ಕತ್ತೆಯನ್ನು ಮಾರಿಬಿಟ್ಟೆನಲ್ಲ ಎಂದು ಪಶ್ಚಾತ್ತಾಪಪಟ್ಟ. ಇನ್ನೇನು 6000 ರೂ.ಗಳಿಗೆ ಕತ್ತೆ ಮಾರಾಟವಾಗುವುದರಲ್ಲಿತ್ತು. ಆಗ ಗುಂಡಪ್ಪನೇ “7,000 ರೂ.’ ಎಂದು ಜೋರಾಗಿ ಕೂಗಿ, ದುಡ್ಡು ತೆತ್ತು ಕತ್ತೆಯನ್ನು ವಾಪಸ್ ಕರೆದುಕೊಂಡು ಹೊರಟ!