Advertisement

ಧಾರವಾಡದ ಪಾಂಡವರ ಒಲವು ಯಾರತ್ತ?

10:47 AM Apr 28, 2019 | Suhan S |

ಧಾರವಾಡ: ಜಿಲ್ಲೆಯ ಈ ವಿಧಾನಸಭಾಕ್ಷೇತ್ರದಲ್ಲಿ ಒಂದು ಸಲ ಗೆದ್ದವರು ಪುನಾರಾಯ್ಕೆಗೊಂಡ ಇತಿಹಾಸವೇ ಇಲ್ಲ.ಆದರೆ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಹಳೆಯ ಅಭ್ಯರ್ಥಿ ಗೆಲುವಿಗೆ ಕೈ ಹಿಡಿಯುತ್ತಾ ಬಂದಿರುವ ಕ್ಷೇತ್ರದಲ್ಲಿಈಗ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ.

Advertisement

ಧಾರವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಅಬ್ಬರ, ಭರಾಟೆಗಳು ಮತದಾನದ ಬಳಿಕ ತಣ್ಣಗಾಗಿದ್ದು, ಅಭ್ಯರ್ಥಿಗಳೂ ಸಹ ರಿಲ್ಯಾಕ್ಸ್‌ ಮೂಡಿಗೆ ಜಾರಿದ್ದಾರೆ. ಆದರೆ ಕ್ಷೇತ್ರದ ಮತದಾರರಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದ ಚರ್ಚೆಯ ಬಿಸಿ ಮಾತ್ರ ದಿನದಿಂದ ದಿನಕ್ಕೆ ಉರಿ ಬಿಸಿಲಿನಂತೆ ಏರುತ್ತಲೇ ಇದೆ. ಈ ಬಗ್ಗೆ ಬೆಟ್ಟಿಂಗ್‌ ಸಹ ಜೋರಾಗಿಯೇ ನಡೆಯುತ್ತಿದೆ. ಎರಡೂ ಪಕ್ಷದ ಮುಖಂಡರು ಗೆಲುವು ನಮ್ಮದೇ ಎಂದುಹೇಳಿಕೊಳ್ಳುವುದಂತೂ ನಿಂತಿಲ್ಲ. ಆದರೆ ಮೋದಿ ಅಲೆ ಜೋರಾಗಿರುವ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಮೇಲೆ ಮತದಾರರಿಗೆ ಇರುವ ಅನುಕಂಪ ಹಾಗೂ ಜಾತಿ ಅಸ್ತ್ರ ಈ ಸಲ ಕೆಲಸ ಮಾಡಿದಂತೆ ಕಂಡು ಬರುತ್ತಿದ್ದು, ಇದು ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು  ಫಲಿತಾಂಶವೇ ತಿಳಿಸಲಿದೆ.

ಪಂಚ ಗ್ರಾಮಗಳೇ ನಿರ್ಣಾಯಕ: ಕ್ಷೇತ್ರ ವ್ಯಾಪ್ತಿಯ ಜಿಪಂ ಕ್ಷೇತ್ರಗಳಾದ ಉಪ್ಪಿನಬೆಟಗೇರಿ, ಗರಗ, ನರೇಂದ್ರ, ಅಮ್ಮಿನಬಾವಿ ಹಾಗೂ ಹೆಬ್ಬಳ್ಳಿ ಅಭ್ಯರ್ಥಿಗಳ ಸೋಲು-ಗೆಲುವಿನ ಮೇಲೆ ಪ್ರಭಾವ ಬೀರುತ್ತಾ ಬಂದಿವೆ. ಈ ಗ್ರಾಮಗಳ ಮೇಲೆ ಹಿಡಿತ ಸಾಧಿಸಿದವರನ್ನು ಗೆಲುವಿಗೆ ಹತ್ತಿರಕ್ಕೆ ಕರೆದುಕೊಂಡು ಹೋಗಿದ್ದು, ಪ್ರತಿ ಚುನಾವಣೆಯಲ್ಲೂ ಸಾಬೀತಾಗಿದೆ. ಹೀಗಾಗಿ ಈ ಗ್ರಾಮಗಳ ಮೇಲೆ ಹಿಡಿತ ಸಾಧಿಸಲು ಎರಡೂ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ಮಾಡಿದ್ದು ಸುಳ್ಳಲ್ಲ. ಆದರೆ ಯಾವ ಗ್ರಾಮಯಾರಿಗೆ ಒಲಿದಿದೆ ಎಂಬುದು ಮಾತ್ರ ನಿಗೂಢ. ಇದಲ್ಲದೇ ನಗರದ ವ್ಯಾಪ್ತಿಯ 8 ವಾರ್ಡ್‌ಗಳು ಸಹ ನಿರ್ಣಾಯಕ ಪಾತ್ರ ವಹಿಸಿಕೊಂಡು ಬಂದಿವೆ.

ನೇರಾ-ನೇರ ಸ್ಪರ್ಧೆ:  ಈ ಪಂಚಗ್ರಾಮಗಳಲ್ಲಿ ನೇರಾನೇರ ಸ್ಪರ್ಧೆ ಆಗಿದ್ದು, ಕೆಲವರು ಬಿಜೆಪಿ ಅಭ್ಯರ್ಥಿ ನೋಡದೇ ಪ್ರಧಾನಿ ಮೋದಿ ಅವರನ್ನು ನೋಡಿ ಮತ ಚಲಾವಣೆ ಮಾಡಿದ್ದರೆ, ಕೆಲವರು ವಿನಯ್‌ ಅವರ ಒಡನಾಟದಿಂದ ಮತ ಹಾಕಿದ್ದಾರೆ. ಲಿಂಗಾಯತರು ಈ ಸಲ ಕೈ ಹಿಡಿದೇ ತೀರುತ್ತಾರೆ ಎಂಬ ವಿಶ್ವಾಸದಲ್ಲಿ ವಿನಯ್‌ ಅವರಿದ್ದಾರೆ. ಅದಕ್ಕಾಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್‌ ಸಮಾವೇಶ, ಪ್ರಚಾರ ಮಾಡಿದರೂ  ಕ್ಷೇತ್ರದಲ್ಲಿ ಮಾತ್ರ ಅಂತಹ ಪ್ರಚಾರ ಕಾರ್ಯ ಮಾಡದೇ ಇರುವುದೇ ಪುಷ್ಟೀಕರಿಸಿದೆ.

ಸೋಲು-ಗೆಲುವಿನ ಲೆಕ್ಕಾಚಾರ: 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನ ವಿನಯ ಕುಲಕರ್ಣಿ ಒಟ್ಟು 53,453 ಅಂಕ ಪಡೆದು 18,320 ಮತಗಳ ಅಂತರದಿಂದ ಜಯಶಾಲಿ ಆಗಿದ್ದರು. ಇದಾದ ಬಳಿಕ ಶಾಸಕರಾಗಿದ್ದುಕೊಂಡೇ 2014ರ ಲೋಕಸಭೆ ಚುನಾವಣಾ ಕಣಕ್ಕೆ ಇಳಿದಿದ್ದ ಕುಲಕರ್ಣಿ ತಮ್ಮದೇ ಈ ಕ್ಷೇತ್ರದಲ್ಲಿ ಬಿಜೆಪಿಗಿಂತ 24,589 ಕಡಿಮೆ ಮತ ಪಡೆದಿದ್ದರು. ಆದರೆ ಸಚಿವ ಸ್ಥಾನದೊಂದಿಗೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬಳಿಕ ನೂರಾರು ಕೋಟಿ ಅನುದಾನ ನೀಡಿ ಕೆಲಸ ಮಾಡಿದ್ದರೂ, 2018 ವಿಧಾನಸಭೆಗೆ ಅವರು ಗೆಲ್ಲಲಾಗಲಿಲ್ಲ. ಈಗ ಮತ್ತೆ ಲೋಕಸಭಾ ಚುನಾವಣೆ ಕಣಕ್ಕೆ ಇಳಿದು ರಾಜಕೀಯ ಭವಿಷ್ಯದ ಪರೀಕ್ಷೆಗೆ ಮುಂದಾಗಿದ್ದಾರೆ. ಜನರು ವಿನಯ್‌ ಕೈ ಹಿಡಿದಿದ್ದಾರೋ, ಜೋಶಿಯವರಿಗೆ ಲೀಡ್‌ ಕೊಟ್ಟಿದ್ದಾರೋ ಎಂಬುದು ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.

Advertisement

ಮತದಾನ ಪ್ರಮಾಣ ಶೇ. 2.9ರಷ್ಟು ಇಳಿಕೆ:

ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ. 72.19 ಹಾಗೂ 2018ರ
ಚುನಾವಣೆಯಲ್ಲಿ 74.85 ಮತದಾನ ದಾಖಲಾಗಿತ್ತು. ಆದರೆ ಈ ಸಲ ಶೇ.71.95
ಮತದಾನ ಆಗಿದ್ದು, ಕಳೆದ ಬಾರಿಗಿಂತ ಶೇ.2.9 ಮತದಾನ ಪ್ರಮಾಣದಲ್ಲಿ ಕಡಿಮೆ
ಆಗಿದೆ. ಇದು ಕೂಡ ಸೋಲು-ಗೆಲುವಿನ ಅಂತರದ ಮೇಲೆ ಪ್ರಭಾವ ಬೀರುವ ಸಾಧ್ಯತೆ
ಅಲ್ಲಗಳೆಯುವಂತಿಲ್ಲ.

.ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next