Advertisement

ಯಾರು ಮಾಡಲಿದ್ದಾರೆ ರಾಯ್‌ಬರೇಲಿಯ ರಥ ಸವಾರಿ?

02:00 AM May 02, 2019 | sudhir |

ಉತ್ತರಪ್ರದೇಶದಲ್ಲಿ ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳು ದಶಕಗಳಿಂದ ನೆಹರು-ಗಾಂಧಿ ಕುಟುಂಬದ ಹಿಡಿತದಲ್ಲೇ ಇವೆ. ಈ ಕ್ಷೇತ್ರಗಳ ಮೇಲೆ ಈ ಬಾರಿ ಬಿಜೆಪಿ ಕಣ್ಣಿಟ್ಟಿದೆ. ಹಿಂದೆಂದಿಗಿಂತಲೂ ಪ್ರಬಲವಾಗಿ ಇಲ್ಲಿ ಪ್ರಚಾರ ನಡೆಸಿರುವ ಬಿಜೆಪಿಯು, ಅಮೇಠಿಯಿಂದ ರಾಹುಲ್‌ನ್ನು,

Advertisement

ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿಯವರನ್ನು ಸೋಲಿಸುವ ಪಣ ತೊಟ್ಟಿದೆ. ಅದರಲ್ಲೂ ರಾಯ್‌ಬರೇಲಿಯಲ್ಲಿ ಬಿಜೆಪಿ ನಾಯಕರು ವರ್ಷದಿಂದೀಚೆಗೆ ನಿರಂತರ ಪ್ರಚಾರ ನಡೆಸುತ್ತಲೇ ಬಂದಿದ್ದಾರೆ. ಇದನ್ನು ನೋಡಿ ಕಾಂಗ್ರೆಸ್‌ ನಿಮ್ಮ ಆಟ ಇಲ್ಲಿ ನಡೆಯೋಲ್ಲ, ಇದು ನೆಹರು-ಗಾಂಧಿ ಕುಟುಂಬದ ಅಖಾಡ ಎಂದು ನಗುತ್ತಿದೆಯಾದರೂ ಈ ಬಾರಿ ಕಾಂಗ್ರೆಸ್‌ ಪಾಳೆಯದಲ್ಲಿ ಆತಂಕ ಆರಂಭವಾಗಿರುವುದಂತೂ ಸತ್ಯ…

ಬಿಜೆಪಿಯು ಈ ಬಾರಿ ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಒಂದು ಕಾಲದಲ್ಲಿ ಅವರಿಗೆ ಆಪ್ತರಾಗಿದ್ದ ಎಂಎಲ್‌ಸಿ ದಿನೇಶ್‌ ಪ್ರತಾಪ್‌ ಸಿಂಗ್‌ಗೆ ಟಿಕೆಟ್‌ ನೀಡಿದೆ. ಏಪ್ರಿಲ್‌ 15ರಂದು ತಮ್ಮ ನಾಮಪತ್ರ ಸಲ್ಲಿಸಿರುವ ದಿನೇಶ್‌ ಪ್ರತಾಪ್‌, ಈ ಬಾರಿ ತಮ್ಮ ಗೆಲುವು ಶತಸ್ಸಿದ್ಧ ಎಂದು ಭರವಸೆಯಿಂದ ಹೇಳುತ್ತಿದ್ದಾರೆ. ಆದರೆ, ರಾಯಬರೇಲಿಯ ಹಿಂದಿನ ಅಂಕಿಸಂಖ್ಯೆಗಳನ್ನು ನೋಡಿದರೆ ಇಲ್ಲಿಯವರೆಗೂ ಆ ಕ್ಷೇತ್ರದಲ್ಲಿ ಸೋನಿಯಾ ಗಾಂಧಿಯವರಿಗೆ ಪ್ರಬಲ ಪೈಪೋಟಿ ನೀಡಲು ಯಾರಿಗೂ ಸಾಧ್ಯವಾಗಿಲ್ಲ ಎನ್ನುವುದು ಅರ್ಥವಾಗುತ್ತದೆ. 2014ರಲ್ಲಿ ಮೋದಿ ಅಲೆಯ ಹೊರತಾಗಿಯೂ ಸೋನಿಯಾಗಾಂಧಿ ಮೂರೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ನ ಲೆಕ್ಕಾಚಾರವೆಲ್ಲ ಉಲ್ಟಾ ಆಗಲಿದೆ ಎನ್ನುವ ಭರವಸೆಯಲ್ಲಿದೆ ಬಿಜೆಪಿ.

ಯಾರು ಈ ದಿನೇಶ್‌ ಪ್ರತಾಪ್‌?: ಒಂದು ಕಾಲದಲ್ಲಿ ಸೋನಿಯಾ ಗಾಂಧಿಯವರ ಪರವಾಗಿ ಓಟ್‌ ಕೇಳುತ್ತಾ ಪ್ರಚಾರ ಮಾಡುತ್ತಿದ್ದವರು ದಿನೇಶ್‌ ಪ್ರತಾಪ್‌. ಅವರ ಸಹೋದರ ರಾಕೇಶ್‌ ಪ್ರತಾಪ್‌ ಕಾಂಗ್ರೆಸ್‌ನ ಶಾಸಕರಾಗಿದ್ದಾರೆ. ಹಿಂದೆಲ್ಲ ದಿನೇಶ್‌ ಪ್ರತಾಪ್‌ರ ಮನೆ “ಪಂಚವಟಿ’ಯಲ್ಲೇ ಕಾಂಗ್ರೆಸ್‌ನ ರಣನೀತಿಯನ್ನು ಚರ್ಚಿಸಲಾಗುತ್ತಿತ್ತಂತೆ. ಆದರೆ ಕಳೆದ ವರ್ಷ ಅವರು “ಇನ್ಮುಂದೆ ಪಂಚವಟಿಯಲ್ಲಿ ಕಾಂಗ್ರೆಸ್‌ಗೆ ಪ್ರವೇಶವಿಲ್ಲ’ ಎಂದು ಹೇಳಿದ್ದರು.

ನಾಮಪತ್ರ ಸಲ್ಲಿಕೆಯ ವೇಳೆ ಸೋನಿಯಾರ ಜೊತೆಗಿದ್ದ ಜನರ ಸಂಖ್ಯೆಗೆ ಹೋಲಿಸಿದರೆ ದಿನೇಶ್‌ ಪ್ರತಾಪ್‌ರ ಹಿಂದೆ ಕಡಿಮೆ ಜನರಿದ್ದರಾದರೂ, ಈ ಬಾರಿ ಇಬ್ಬರ ನಡುವೆ ಪ್ರಬಲ ಪೈಪೋಟಿ ಏರ್ಪಡಲಿರುವುದು ನಿಶ್ಚಿತ ಎನ್ನುತ್ತಾರೆ ಸ್ಥಳೀಯ ಮುಖಂಡ ಶೈಲೇಶ್‌ ಅವಸ್ಥಿ. ಸೋನಿಯಾ ಗಾಂಧಿಯವರದ್ದು ದೊಡ್ಡ ಹೆಸರಾಗಿರಬಹುದು, ಆದರೆ ದಿನೇಶ್‌ ಅವರಿಗೆ ರಾಯಬರೇಲಿಯ ಹಳ್ಳಿಹಳ್ಳಿಯ ಮೇಲೆ ಹಿಡಿತವಿದೆ. ಅವರು ಎಂಎಲ್‌ಸಿ ಆಗಿದ್ದಾಗ ಬ್ಲಾಕ್‌ಗಳಲ್ಲಿ ಮತ್ತು ಗ್ರಾಮಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬ ಅಭಿಪ್ರಾಯವಿದೆ. ರಾಯ್‌ಬರೇಲಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ.

Advertisement

ಬಿಜೆಪಿಯಂತೂ ಸೋನಿಯಾರನ್ನು ಗದ್ದುಗೆಯಿಂದ ಕೆಳಕ್ಕಿಳಿಸಲು ಬಹಳ ಪ್ರಯತ್ನ ನಡೆಸಿದೆ. ದಿನೇಶ್‌ ಪ್ರತಾಪ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್‌ ಕೂಡ ರಾಯ್‌ಬರೇಲಿಗೆ ಬಂದಿದ್ದರು. ಅಲ್ಲದೇ ಅವರೊಟ್ಟಿಗೆ ಯೋಗಿ ಕ್ಯಾಬಿನೆಟ್‌ನ ಅನೇಕ ಸಚಿವರೂ ಇದ್ದರು. ಕಳೆದ ವರ್ಷವಷ್ಟೇ ಪ್ರಧಾನಿ ಮೋದಿ ಲಾಲ್‌ಗ‌ಂಜ್‌ ರೈಲ್ವೇ ಕೋಚ್‌ ಫ್ಯಾಕ್ಟರಿಯಲ್ಲಿ ಜನಸಭೆ ನಡೆಸಿ, ಗಾಂಧಿ ಪರಿವಾರದ ಮೇಲೆ ದಾಳಿ ಮಾಡಿದ್ದರು. ಆಗಲೇ ಎಲ್ಲರಿಗೂ, ಬಿಜೆಪಿ 2019ರ ಚುನಾವಣೆಯಲ್ಲಿ ರಾಯ್‌ಬರೇಲಿಯಲ್ಲಿ ಪ್ರಬಲ ಸ್ಪರ್ಧೆ ಎದುರೊಡ್ಡಲಿದೆ ಎಂದು ಮನವರಿಕೆಯಾಯಿತು.

ಅಮೇಠಿಯಂತೆ ರಾಯ್‌ಬರೇಲಿ ಕೂಡ ಗಾಂಧಿ ಕುಟುಂಬದೊಂದಿಗೆ ವಿಪರೀತ ನಂಟು ಹೊಂದಿರುವ ಪ್ರದೇಶ. ಫಿರೋಜ್‌ ಗಾಂಧಿ ಮತ್ತು ಇಂದಿರಾ ಗಾಂಧಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗಮನಾರ್ಹ ಸಂಗತಿಯೆಂದರೆ, ಈ ಕ್ಷೇತ್ರದಲ್ಲಿ 1977ರಲ್ಲಿ ಇಂದಿರಾ ಗಾಂಧಿ ಸೋತಿದ್ದರು. ಸೋನಿಯಾ ಗಾಂಧಿ ಚುನಾವಣಾ ರಾಜಕೀಯ ಪ್ರವೇಶ ಮಾಡಿದಾಗ ಅವರು ತಮ್ಮ ಪತಿಯ ಕ್ಷೇತ್ರ ಅಮೇಠಿಯಿಂದ ಸ್ಪರ್ಧಿಸಿ ಗೆದ್ದು ಮೊದಲ ಬಾರಿ ಸಂಸತ್ತು ಪ್ರವೇಶಿಸಿದ್ದರು(1999ರಲ್ಲಿ). 2004ರಲ್ಲಿ ಅವರು ತಮ್ಮ ಮಗ ರಾಹುಲ್‌ ಗಾಂಧಿಗೆ ಅಮೇಠಿ ಕ್ಷೇತ್ರವನ್ನು ಬಿಟ್ಟುಕೊಟ್ಟು, ಅತ್ತೆ ಇಂದಿರಾ ಗಾಂಧಿಯವರ ಕ್ಷೇತ್ರವಾಗಿದ್ದ ರಾಯ್‌ಬರೇಲಿಗೆ ಪ್ರವೇಶಿಸಿ, ಅಲ್ಲಿಯವರಾಗಿಬಿಟ್ಟರು. ಈ ಕ್ಷೇತ್ರದಲ್ಲಿ 2004ರಿಂದ ಸತತ ನಾಲ್ಕು ಬಾರಿ ಗೆದ್ದು ರೆಕಾರ್ಡ್‌ ಸ್ಥಾಪಿಸಿದ್ದಾರೆ ಸೋನಿಯಾ. ಒಟ್ಟಾರೆಯಾಗಿ, ಈ ಕ್ಷೇತ್ರದಲ್ಲಿನ ಪ್ರತಿ ಕುಟುಂಬದಲ್ಲೂ ಕಾಂಗ್ರೆಸ್‌ಗಾಗಿ ದುಡಿದವರು ಇದ್ದಾರೆ, ಅವರ ಕಥೆಗಳೆಲ್ಲ ಕಾಂಗ್ರೆಸ್‌ನೊಂದಿಗೆ ಬೆಸೆದುಕೊಂಡಿವೆ, ಹೀಗಾಗಿ ಅವರು ಸೋನಿಯಾರನ್ನು ಕೈಬಿಡರು ಎನ್ನುವ ಭರವಸೆ ಕಾಂಗ್ರೆಸ್‌ನದ್ದು. ಅಲ್ಲದೆ, ಕಾಂಗ್ರೆಸ್‌ ಸಿಪಿಎಸ್‌ಯು(ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀಸ್‌ ಲಿಮೆಟೆಡ್‌), ಎನ್‌ಟಿಪಿ, ಏಮ್ಸ್‌ ಸೇರಿದಂತೆ ಹಲವು ಉನ್ನತ ಸಂಸ್ಥೆಗಳನ್ನು ಸ್ಥಾಪಿಸಿದೆ ಹೀಗಾಗಿ ಅಭಿವೃದ್ಧಿಯೂ ಕೈ ಪಕ್ಷಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎನ್ನುತ್ತಾರೆ ಅವರು.

ಈ ಬಾರಿ ಕಣದಲ್ಲಿ
– ಸೋನಿಯಾ ಗಾಂಧಿ(ಕಾಂಗ್ರೆಸ್‌)
– ದಿನೇಶ್‌ ಪ್ರತಾಪ್‌ ಸಿಂಗ್‌(ಬಿಜೆಪಿ)
– ರಾಂ ಸಿಂಗ್‌ ಯಾದವ್‌ (ಪ್ರಗತಿಶೀಲ್‌ ಸಮಾಜವಾದಿ ಪಾರ್ಟಿ)

2014ರ ಫ‌ಲಿತಾಂಶ
– ಸೋನಿಯಾ ಗಾಂಧಿ: 5,26,434
– ಅಜಯ್‌ ಅಗರ್ವಾಲ್‌: 1,73,721

Advertisement

Udayavani is now on Telegram. Click here to join our channel and stay updated with the latest news.

Next